ಕರಡೊಳ್ಳಿಯ ಗೋವರ್ಧನ ಗೋ ಶಾಲೆಗೆ ಸ್ವರ್ಣವಲ್ಲೀ ಶ್ರೀ ಭೇಟಿ
ಮತಾಂತರ, ಗೋಹತ್ಯೆ ಆತಂಕಕಾರಿ-ಗೀತಾ ಜ್ಞಾನ ಯಜ್ಞದ ಸಮ್ಮೇಳನಕ್ಕೆ ಸಂಗ್ರಹಿಸಿದ ಹಣ ಗೊಶಾಲೆಗೆ ದೇಣಿಗೆ
ವಿಕ ಸುದ್ದಿಲೋಕ ಯಲ್ಲಾಪುರ
ಭಗವದ್ಗೀತೆಯ ಭಕ್ತಿ ಬೆಳೆಯುತ್ತಿದೆ. ಗೋ ಭಕ್ತಿಯೂ ಸೇರಿದರೆ ಗೋ ಸೇವೆ ಇನ್ನಷ್ಟು ವೇಗ ಪಡೆಯುತ್ತದೆ. ಜನರಲ್ಲಿಸಾತ್ವಿಕ ಭಾವನೆ ಹೆಚ್ಚುತ್ತದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ತಾಲೂಕಿನ ಕರಡೊಳ್ಳಿಯ ಶ್ರೀ ಸ್ವರ್ಣ ನಂದಿನಿ ಗೋ ಸಂಸ್ಥಾನದ ಗೋವರ್ಧನ ಗೋ ಶಾಲೆಯಲ್ಲಿ ಗೋವುಗಳಿಗೆ ಗೋಗ್ರಾಸ ನೀಡಿ ಆಶೀರ್ವಚನ ನೀಡಿದರು.
‘‘ಮತಾಂತರ, ಗೋಹತ್ಯೆ ಆತಂಕಕಾರಿ. ಭಗವದ್ಗೀತೆಯ ಮೂಲಕ ಸಮಾಜ ಕಟ್ಟುವ ಕೆಲಸ ನಿರಂತರವಾಗಿರಬೇಕು. ಒಬ್ಬನೇ ಒಬ್ಬ ಹಿಂದೂವೂ ಭಗವದ್ಗೀತೆ ತಿಳಿಯದವನು ಇರಬಾರದು. ಎಲ್ಲಕಡೆಯಿಂದ ಬೆಳಕು ಬಂದಾಗ ಜಗತ್ತು ಬೆಳಗುತ್ತದೆ. ಗೀತೆಯ ಬೆಳಕು ಎಲ್ಲೆಡೆ ಹರಡಲಿ. ಇದರ ಅರಿವು ಪ್ರತಿ ವ್ಯಕ್ತಿಗೂ ತಲುಪಬೇಕು. ಇದಕ್ಕೆ ಹಲವು ಮಹಾತ್ಮರು ಪ್ರಯತ್ನಿಸುತ್ತಿದ್ದಾರೆ. ಯಲ್ಲಾಪುರದಲ್ಲಿಭಗವದ್ಗೀತೆಯ ಜಾಗೃತಿ ಅದ್ವಿತೀಯ. ತಾಲೂಕಿನ 600ಕ್ಕೂ ಆಧಿಕ ಕೇಂದ್ರಗಳ ಮೂಲಕ ಗೀತೆಯ ಮೂಲಕ ಸಮಾಜವನ್ನು ಕಟ್ಟುವ ಕಾರ್ಯ ಮಹತ್ವದ್ದಾಗಿದೆ. ಕಾರ್ಯಕರ್ತರ ಮುತುವರ್ಜಿಯ ಸೇವೆಯ ಪರಿಣಾಮ ದಾನಿಗಳು ಮುಂದೆ ಬರುತ್ತಿದ್ದಾರೆ. ಮುಂದಿನ ದೀಪಾವಳಿ ಸೇವೆ ಇಲ್ಲಿಯೇ ಆಗಬೇಕು ಎನ್ನುವುದು ಕಾರ್ಯಕರ್ತರ ಸಂಕಲ್ಪವಾಗಿದೆ. ಅದಕ್ಕೆ ಸದ್ಭಕ್ತರ ಸಹಕಾರ ಮುಂದುವರಿಯಲಿ’’ಎಂದು ಆಶಿಸಿದರು.
ಗೀತಾ ಜ್ಞಾನ ಯಜ್ಞ ಸಮಿತಿಯ ಸಂಸ್ಥಾಪಕ ಸುಬ್ರಾಯ ನಂದೋಡಿ ಮಾತನಾಡಿ,‘‘ಭಗವದ್ಗೀತೆಯ ಪ್ರೇರಣೆಗೆ ಸೋಂದಾ ಸ್ವರ್ಣವಲ್ಲೀ ಶ್ರೀಗಳು ಕಾರಣರಾಗಿದ್ದಾರೆ. ಇದನ್ನು ಹೇಗೆ ಪ್ರಚುರಪಡಿಸಬೇಕು ಎಂಬ ಗೊಂದಲದಲ್ಲಿದ್ದಾಗ ಕೋವಿಡ್ ಬಂದು ಪಾಠ ಕಲಿಸಿತು. ಗೀತಾ ಜ್ಞಾನಯಜ್ಞದಿಂದ ಆನಲೈನ್ ಮೂಲಕ ಮನೆ, ಮನ ತಲುಪಿಸುವಲ್ಲಿಯಶಸ್ವಿಯಾಯಿತು. ಮಾತೆಯರ ಜೊತೆ ಪುರುಷರು ಸೇರಿ ಗೀತಾ ಪಾರಾಯಣ ನಡೆಯಬೇಕೆಂಬುದು ಆಶಯ’’ ಎಂದರು.
ಗೋಶಾಲೆಯ ಅಧ್ಯಕ್ಷ ರಾಮಕೃಷ್ಣ ಭಟ್ಟ, ಪ್ರಮುಖರಾದ ಶಂಕರ ಭಟ್ಟ ಬಾಲಿಗದ್ದೆ, ಪ್ರಮುಖರಾದ ಪ್ರಮೋದ ಹೆಗಡೆ, ನಾರಾಯಣ ಭಟ್ಟ ಏಕಾನ, ಎಸ್ .ಎನ್ .ಭಟ್ಟ ಏಕಾನ, ನಾಗೇಶ ಹೆಗಡೆ ಪಣತಗೇರಿ, ಮಠದ ಪದಾಧಿಕಾರಿಗಳು ಇದ್ದರು. ಸ್ವರ್ಣವಲ್ಲೀ ಮಾತೃಮಂಡಳಿ, ಗೀತಾ ಜ್ಞಾನ ಯಜ್ಞದ ಮಾತೆಯರು ಗೀತಾ ಪಾರಾಯಣ ನೆರವೇರಿಸಿದರು. ಗೋಶಾಲೆಯ ಕಾರ್ಯದರ್ಶಿ ಗಣಪತಿ ಭಟ್ಟ ಕೋಲಿಬೇಣ ಸ್ವಾಗತಿಸಿ ನಿರೂಪಿಸಿದರು.
23ವೈಎಲಪಿ2ಎ
ಯಲ್ಲಾಪುರ ತಾಲೂಕಿನ ಕರಡೊಳ್ಳಿಯ ಶ್ರೀಸ್ವರ್ಣ ನಂದಿನಿ ಗೋ ಸಂಸ್ಥಾನದ ಗೋವರ್ಧನ ಗೋ ಶಾಲೆಯಲ್ಲಿಸ್ವರ್ಣವಲ್ಲೀ ಶ್ರೀಗಳು ಗೋವುಗಳಿಗೆ ಗೋಗ್ರಾಸ ನೀಡಿದರು.
23ವೈಎಲಪಿ2ಬೀ
ಯಲ್ಲಾಪುರ ತಾಲೂಕಿನ ಕರಡೊಳ್ಳಿಯ ಶ್ರೀಸ್ವರ್ಣ ನಂದಿನಿ ಗೋ ಸಂಸ್ಥಾನದ ಗೋವರ್ಧನ ಗೋ ಶಾಲೆಯಲ್ಲಿಸ್ವರ್ಣವಲ್ಲೀ ಶ್ರೀಗಳು ಆಶೀರ್ವಚನ ನೀಡಿದರು.