ವಿಕ ಸುದ್ದಿಲೋಕ ಬೆಂಗಳೂರುಸರಕಾರಿ ಕಚೇರಿಗಳಲ್ಲಿಕನ್ನಡ ಭಾಷೆಯನ್ನು ಆಡಳಿತದ ಎಲ್ಲಾಹಂತಗಳಲ್ಲಿಸಮರ್ಪಕವಾಗಿ ಅಳವಡಿಸಿಕೊಳ್ಳದೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ 2022ರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮದ ಅವಕಾಶಗಳಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಎಚ್ಚರಿಸಿದರು.
ನಗರದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ನಡೆದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿಅವರು ಮಾತನಾಡಿದರು. ‘‘ರಾಜ್ಯ ಸರಕಾರ ಆಡಳಿತದಲ್ಲಿಕನ್ನಡವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಿರಂತರ ನಿರ್ದೇಶನಗಳನ್ನು ನೀಡುತ್ತಿದ್ದರೂ, ಕೆಲ ಸರಕಾರಿ ಅಧಿಕಾರಿಗಳು ತೋರುತ್ತಿರುವ ಉದಾಸೀನತೆ ಮತ್ತು ನಿರಾಸಕ್ತಿಯ ಮನೋಭಾವ ಸರಕಾರದ ಆಶಯವನ್ನು ದುರ್ಬಲಗೊಳಿಸುತ್ತಿದೆ. ಇದನ್ನು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆಯ ಮುಂದಿನ ರಾಜ್ಯ ಸಮಿತಿ ಸಭೆಯಲ್ಲಿಚರ್ಚಿಸಿ ಕನ್ನಡ ವಿರೋಧಿ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ,’’ ಎಂದು ಎಚ್ಚರಿಸಿದರು.
‘‘ಆಡಳಿತ ಭಾಷೆಯಾಗಿ ಕನ್ನಡವನ್ನು ಅಳವಡಿಸಿಕೊಳ್ಳುವುದು ಕೇವಲ ಕಾನೂನುಬದ್ಧ ಕರ್ತವ್ಯವಲ್ಲ. ಅದು ಜನಸಾಮಾನ್ಯರೊಂದಿಗೆ ಸರಕಾರದ ಸಂಪರ್ಕವನ್ನು ಬಲಪಡಿಸುವ ಹೊಣೆಗಾರಿಕೆಯಾಗಿದೆ. ಇಂದಿನ ಪರಿಸ್ಥಿತಿಯಲ್ಲಿಕನ್ನಡವನ್ನು ಸಾಮಾಜಿಕವಾಗಿ ಕಾಡಿಬೇಡಿ ಉಳಿಸಬೇಕಾದ ಸ್ಥಿತಿ ನಿರ್ಮಾಣವಾಗಿರುವುದು ದುಃಖದ ಸಂಗತಿ,’’ ಎಂದು ವಿಷಾದ ವ್ಯಕ್ತಪಡಿಸಿದರು.
‘‘ಆಡಳಿತ ವ್ಯವಸ್ಥೆಯಲ್ಲಿಯೇ ಕನ್ನಡಕ್ಕೆ ಅಗತ್ಯ ಗೌರವ ಮತ್ತು ಆದ್ಯತೆ ದೊರೆಯದಿದ್ದರೆ ಸರಕಾರದ ಕನ್ನಡಪರ ನೀತಿಗಳು ಸಂಪೂರ್ಣವಾಗಿ ಸಾಕಾರಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ಎಲ್ಲಾಇಲಾಖೆಗಳು ಕನ್ನಡ ಅನುಷ್ಠಾನವನ್ನು ಕಡ್ಡಾಯವಾಗಿ ಪಾಲಿಸಬೇಕು. ಆಡಳಿತ ವ್ಯವಸ್ಥೆಯಲ್ಲಿಕನ್ನಡಕ್ಕೆ ಗೌರವ ನೀಡದೆ ಆಂಗ್ಲಭಾಷೆಯಲ್ಲಿಯೇ ವ್ಯವಹರಿಸುತ್ತಿರುವ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕ್ರಮ ವಹಿಸಲು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆಯ ರಾಜ್ಯ ಸಮಿತಿಯ ಮುಂದೆ ಪ್ರಸ್ತಾವನೆ ಮಂಡಿಸಲಿದೆ,’’ ಎಂದರು.
ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ವೈ.ನಾರಾಯಣಸ್ವಾಮಿ, ಕುಲಸಚಿವೆ (ಆಡಳಿತ) ಸೀಮಾ ನಾಯಕ್ , ಕುಲಸಚಿವ (ಮೌಲ್ಯಮಾಪನ) ಪ್ರೊ.ವೈ. ರಮೇಶ್ , ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯ ಡಾ.ವಿ.ಪಿ.ನಿರಂಜನಾರಾಧ್ಯ, ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ, ಆಪ್ತ ಕಾರ್ಯದರ್ಶಿ ಟಿ.ಎಸ್ . ಫಣಿಕುಮಾರ್ ಉಪಸ್ಥಿತರಿದ್ದರು.