ಹಿಸ್ಟರಿ ಮೆಲುಕು

Contributed byDHEERAJ K|Vijaya Karnataka
a womans remarkable step in space svetlana savitskaya and her journey
ಮೊದಲ ಬಾಹ್ಯಾಕಾಶ ನಡಿಗೆ

ಜುಲೈ 25, 1984
ಸೋವಿಯತ್ ಒಕ್ಕೂಟವು 1984ರ ಜುಲೈ 17ರಂದು ಸೋಯುಜ್ T-12 ಬಾಹ್ಯಾಕಾಶ ನೌಕೆಯನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿತು. ಈ ನೌಕೆಯಲ್ಲಿಕಮಾಂಡರ್ ವ್ಲಾಡಿಮಿರ್ ಜಾನಿಬೆಕೋವ್ , ಸಂಶೋಧಕ ಇಗೋರ್ ವೋಲ್ಕ… ಮತ್ತು ಫ್ಲೈಟ್ ಎಂಜಿನಿಯರ್ ಶ್ವೇತ್ಲಾನಾ ಸವಿತ್ ಸ್ಕಾಯಾ ಪ್ರಯಾಣ ಬೆಳೆಸಿದ್ದರು. ಸೋವಿಯತ್ ಒಕ್ಕೂಟದ ಸಲ್ಯೂಟ್ 7 ಬಾಹ್ಯಾಕಾಶ ನಿಲ್ದಾಣವನ್ನು ತಲುಪಿ, ಅಲ್ಲಿಹಲವು ಪ್ರಯೋಗಗಳನ್ನು ನಡೆಸುವುದು ಮತ್ತು ನೌಕೆಯ ರಿಪೇರಿ ಈ ಯಾನದ ಮುಖ್ಯ ಉದ್ದೇಶವಾಗಿತ್ತು. ಶ್ವೇತ್ಲಾನಾ ಸವಿತ್ ಸ್ಕಾಯಾ ಅವರಿಗೆ ಇದು ಎರಡನೇ ಬಾಹ್ಯಾಕಾಶ ಯಾನವಾಗಿತ್ತು. ಅಂದು ಅವರು ಎರಡು ಬಾರಿ ಬಾಹ್ಯಾಕಾಶಕ್ಕೆ ತೆರಳಿದ ವಿಶ್ವದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು.

ಜುಲೈ 25ರಂದು, ಯೋಜನೆಯ ಅತ್ಯಂತ ನಿರ್ಣಾಯಕ ಮತ್ತು ಅಪಾಯಕಾರಿ ಭಾಗವಾದ ಬಾಹ್ಯಾಕಾಶ ನಡಿಗೆ ಆರಂಭವಾಯಿತು. ಶ್ವೇತ್ಲಾನಾ ಸವಿತ್ ಸ್ಕಾಯಾ ಮತ್ತು ಅವರ ಸಹೋದ್ಯೋಗಿ ವ್ಲಾಡಿಮಿರ್ ಜಾನಿಬೆಕೋವ್ ಸಲ್ಯೂಟ್ 7 ಬಾಹ್ಯಾಕಾಶ ನಿಲ್ದಾಣದ ಸುರಕ್ಷಿತ ವಾತಾವರಣದಿಂದ ಹೊರಬಂದು, ಶೂನ್ಯ ಗುರುತ್ವಾಕರ್ಷಣೆ ಮತ್ತು ಅತ್ಯಂತ ಕಠಿಣ ವಾತಾವರಣವಿದ್ದ ತೆರೆದ ಬಾಹ್ಯಾಕಾಶವನ್ನು ಪ್ರವೇಶಿಸಿದರು. ಇಬ್ಬರೂ ಸೇರಿ ಒಟ್ಟು 3 ಗಂಟೆ 35 ನಿಮಿಷಗಳ ಕಾಲ ಬಾಹ್ಯಾಕಾಶದ ಬಯಲಿನಲ್ಲಿಯಶಸ್ವಿಯಾಗಿ ಕಾಲಕಳೆದರು. ಈ ಮೂಲಕ ಶ್ವೇತ್ಲಾನ ಬಾಹ್ಯಾಕಾಶ ನಡಿಗೆ ಮಾಡಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1948ರ ಆಗಸ್ವ್ 8ರಂದು ಮಾಸ್ಕೋದಲ್ಲಿಜನಿಸಿದ ಶ್ವೇತ್ಲಾನಾ, ಚಿಕ್ಕಂದಿನಿಂದಲೇ ವಿಮಾನಯಾನ ಮತ್ತು ಸಾಹಸ ಕ್ರೀಡೆಗಳಲ್ಲಿತೀವ್ರ ಆಸಕ್ತಿ ಹೊಂದಿದ್ದರು. ಕೇವಲ 17ನೇ ವಯಸ್ಸಿಗೆ ನೂರಾರು ಪ್ಯಾರಾಚೂಟ್ ಜಂಪ್ ಗಳನ್ನು ಮಾಡಿದ್ದ ಅವರು, ನಂತರ ಟೆಸ್ವ್ ಪೈಲಟ್ ಆಗಿ ಹೊರಹೊಮ್ಮಿದರು. ಕಠಿಣ ಯುದ್ಧ ವಿಮಾನಗಳನ್ನು ಹಾರಿಸಿದ ಅನುಭವ ಹೊಂದಿದ್ದ ಅವರು 20ಕ್ಕೂ ಹೆಚ್ಚು ವಿವಿಧ ಮಾದರಿಯ ವಿಮಾನಗಳನ್ನು ಚಲಾಯಿಸುವ ನೈಪುಣ್ಯ ಪಡೆದಿದ್ದರು. ಈ ಅದ್ಭುತ ಪೈಲಟಿಂಗ್ ನೈಪುಣ್ಯ ಮತ್ತು ತಾಂತ್ರಿಕ ಜ್ಞಾನವೇ ಅವರನ್ನು ಸೋವಿಯತ್ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಆಯ್ಕೆಯಾಗಲು ನೆರವಾಯಿತು.

ಆ ಕಾಲಘಟ್ಟದಲ್ಲಿಅಮೆರಿಕ ಮತ್ತು ಸೋವಿಯತ್ ಒಕ್ಕೂಟದ ನಡುವೆ ಬಾಹ್ಯಾಕಾಶ ರೇಸ್ ತೀವ್ರವಾಗಿ ನಡೆಯುತ್ತಿತ್ತು. ಅಮೆರಿಕ ತನ್ನ ಮಹಿಳಾ ಗಗನಯಾನಿ ಕ್ಯಾಥರಿನ್ ಸುಲ್ಲಿವಾನ್ ಅವರನ್ನು ಬಾಹ್ಯಾಕಾಶ ನಡಿಗೆಗೆ ಕಳುಹಿಸಲು ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿಯೇ, ಸೋವಿಯತ್ ಒಕ್ಕೂಟವು ಶ್ವೇತ್ಲಾನಾ ಸವಿತ್ ಸ್ಕಾಯಾ ಅವರನ್ನು ಕಳುಹಿಸಿ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿತು.