ಕೈವಾರ (ಪು. 4ಲೀಡ್ )

Contributed byShridevi Ambekallu|Vijaya Karnataka
the greatness of the guru and the duties of disciples
ಗುರುವೆಂದರೆ ಸಾಕ್ಷಾತ್ ಪರಮಾತ್ಮ

-------------------
ಶಿಷ್ಯನಾದವನು ಗುರುವನ್ನು ಹೇಗೆ ಆಶ್ರಯಿಸಬೇಕು? ಅವರನ್ನು ಹೇಗೆ ಗೌರವಿಸಬೇಕು? ಈ ಕುರಿತು ಕಾಲಜ್ಞಾನಿ ಕೈವಾರ ತಾತಯ್ಯನವರು ನೀಡುವ ಸಂದೇಶ ಏನು?

-----

ಗುರುವೆಂದರೆ ಸಾಕ್ಷಾತ್ ಪರಮಾತ್ಮನಲ್ಲದೆ ಬೇರೆಯಲ್ಲ. ಗುರುವಿನ ಅಲೌಕಿಕ ಸಿದ್ಧಿಯೇ ಶಿಷ್ಯನ ಸಾಧನೆಗೆ ಶಕ್ತಿಯನ್ನು ಅನುಗ್ರಹಿಸುತ್ತದೆ ಎನ್ನುತ್ತಾರೆ. ಕೈವಾರದ ಸಂತ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರು. ಶಿಷ್ಯನ ಗುಣದಲ್ಲಿಚಂಚಲತೆ ಉಂಟಾಗಲು ಕಾರಣವೇನು? ಎಂದು ಪ್ರಶ್ನಿಸಿಕೊಂಡರೆ ತಾತಯ್ಯನವರು ಹೀಗೆ ಉತ್ತರಿಸುತ್ತಾರೆ. ತನ್ನ ಸಾವಿನ ಬಗ್ಗೆ ತಾನೆ ಅರಿಯದಿರುವಂತಹ ಗುರುವನ್ನು ಆಶ್ರಯಿಸಿದಾಗಲೇ ಸಾಧಕಶಿಷ್ಯನ ಗುಣದಲ್ಲಿಚಂಚಲತೆಯುಂಟಾಗುತ್ತದೆ ಎನ್ನುತ್ತಾರೆ. ತನ್ನ ಮರಣವನ್ನರಿಯದ ವೇಷಧಾರಿಯು ಸೂಕ್ತ ಗುರುವಾಗಲಾರನು. ಶಿಷ್ಯನಿಗೆ ಸಾಧನೆಯ ಕಾಲದಲ್ಲಿಇದರ ಅರಿವಾಗುತ್ತದೆ. ಇದರಿಂದ ಗುರುವಿನ ಮಹತ್ವದ ಅರಿವಾಗುತ್ತದೆ.

ರಾಗ-ದ್ವೇಷ ಸಂಬಂಧವಾದ ಕಾಮಾದಿ ಶತ್ರುಗಳನ್ನು ಗೆದ್ದು, ಪರತಂತ್ರದಿಂದ ಆತ್ಮನಿಷ್ಟನಾದ ಗುರುವಿನ ಚರಣಕಮಲಗಳನ್ನೇ ಸಾಧಕ ಶಿಷ್ಯನು ದೃಢವಾಗಿ ನಂಬಬೇಕು. ಹೀಗೆ ನಂಬಿದ ಶಿಷ್ಯನ ಮನಸ್ಸನ್ನು ಪರೀಕ್ಷಿಸುವ ಗುರುದೇವನು ಮನಸ್ಸು ಪಕ್ವವಾಗಿರುವುದೆಂದು ತಿಳಿದ ಮೇಲೆ ದೀಕ್ಷೆಯನ್ನು ಕೊಟ್ಟು ಯೋಗಮಾರ್ಗವನ್ನು ತೋರಿಸಿಕೊಡುತ್ತಾನೆ ಎನ್ನುತ್ತಾರೆ ತಾತಯ್ಯನವರು. ಈ ನಿಟ್ಟಿನಲ್ಲಿಗುರುವಿನ ಮಹಿಮೆ ಅಪಾರವಾದದ್ದು.

ಚಚ್ಚಿಪುಟ್ಟರಾದುರಾ ನೀವೋಚ್ಚೇದೋವ ಮುಯ್ಯರಾ, ತಲ್ಲಿವಂಟಿ ಗುರುನಿಬೋಧ ತಪ್ಪಕ ಮದಿನುಂಚರಾ..’ ಸತ್ತು ಮತ್ತೆ ಹುಟ್ಟಬಾರದು. ನೀನು ಬರುವ ದಾರಿಯನ್ನು ಮುಚ್ಚು. ತಾಯಿಯಂತಹ ಗುರುವಿನ ಮಾತನ್ನು ತಪ್ಪದೆ ನಿನ್ನ ಮನದಲ್ಲಿರಿಸು ಎನ್ನುತ್ತಾರೆ ತಾತಯ್ಯನವರು. ಗುರುವಿನ ಬೋಧನೆಯನ್ನು ತಪ್ಪದೆ ಅನುಸರಿಸುತ್ತಿ ಇದ್ದರೆ ಗುರುಕೃಪೆಯಾಗುತ್ತದೆ.

ಉತ್ತಮ ಗುರುವನ್ನು ಆಯ್ಕೆಮಾಡಿಕೊಳ್ಳುವುದು ಶಿಷ್ಯನ ಪ್ರಥಮ ಕರ್ತವ್ಯವಾಗಿದೆ. ತಾತಯ್ಯನವರು ಬೋಧೆಗುರುವನ್ನು ಆಶ್ರಯಿಸು, ಬಾಧೆಗುರುಗಳನ್ನು ನಂಬಬೇಡ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದ್ದಾರೆ. ‘ಬುದ್ದಿಮಂತುಡೈತೆ ಮಂಚಿ ಬೋಧಗುರುನಿ ಪ್ರಾಪು ಚೇರಿ ಬಾಧಗುರುವುಲ ನಮ್ಮ ಬೋಕುರಾ..ಓ ಸಜ್ಜನ ಸಂಗಾ...’ ಬುದ್ಧಿವಂತನಾದರೆ ಒಳ್ಳೆಯ ಬೋಧನೆ ಮಾಡುವ ಗುರುವಿನ ಬಳಿ ಸೇರು, ಬಾಧೆ ಕೊಡುವ ಗುರುಗಳನ್ನು ನಂಬಬೇಡ ಎಂಬ ಉಪದೇಶ ಇಲ್ಲಿದೆ. ಬೋಧನೆ ಮಾಡುವ ಗುರುಗಳು ಸಜ್ಜನರಾದುದರಿಂದ ಅವರಿಗೆ ಹಣದ ದುರಾಸೆ ಇರುವುದಿಲ್ಲ. ಆತನು ಕಾರುಣ್ಯ ತುಂಬಿದ ಗುರುಮೂರ್ತಿಯಾಗಿರುತ್ತಾರೆ. ಅವರಿಗೆ ಹಣದ ನಾಣ್ಯಗಳೆಂದರೆ ಹೆಂಚಿನ ಬಿಲ್ಲೆಗಳಂತೆ ತೋರುತ್ತದೆ ಎನ್ನುತ್ತಾರೆ ತಾತಯ್ಯನವರು. ಒಳ್ಳೆಯ ಗುರುಗಳು ಸಿಗುವುದು ದುರ್ಲಭ. ಹಾಗೆ ಸಿಕ್ಕಿದರೆ ಶಿಷ್ಯನ ಪುಣ್ಯ. ಆತ್ಮಜ್ಞಾನದ ಅಪೇಕ್ಷೆಯುಳ್ಳ ಶಿಷ್ಯನು ಪ್ರಥಮವಾಗಿ ಉತ್ತಮ ಗುರುವನ್ನು ಹೊಂದಬೇಕು. ಹೀಗೆ ಉತ್ತಮ ಗುರುವನ್ನು ಹುಡುಕಿಕೊಂಡರೆ ಸಾಧನೆ ಯಶಸ್ವಿಯಾಗುತ್ತದೆ.

ಗುರು ಋುಣ:

ತಲ್ಲಿತಂಡ್ರಿ ಋುಣಮು ತಗ ತೀರ್ಪವಚ್ಚುನು

ಗುರುವು ಋುಣಮು ತೀರ ದೆನ್ನಟಿಕಿನಿ

ಗುರುವು ಋುಣಮು ತೀರ್ಚು ಶಿಷ್ಯುಡು ಲೇಡುರಾ

ನಾದ ಬ್ರಹ್ಮಾನಂದ ನಾರೇಯಣ ಕವಿ ||

ತಂದೆ ತಾಯಿಯರ ಋುಣವನ್ನು ಶಾಸ್ತೊ್ರೕಕ್ತ ವಿಧಾನದಲ್ಲಿನ ಸಕ್ರಮ ವರ್ತನೆಯಿಂದ ತೀರಿಸಬಹುದಾಗಿದೆ. ಗುರುವಿನ ಋುಣ ಮಾತ್ರ ಯಾವುದೇ ವಿಧಾನದಿಂದ ಎಂದಿಗೂ ತೀರುವುದಿಲ್ಲ. ಗುರುವಿನ ಋುಣವನ್ನು ತೀರಿಸುವಂತಹ ಶಿಷ್ಯನಿಲ್ಲಎನ್ನುತ್ತಿದ್ದಾರೆ ತಾತಯ್ಯನವರು.

ಪುತ್ರಧರ್ಮವನ್ನು ಸರಿಯಾಗಿ ನಿರ್ವರ್ತಿಸಿ ಮಾತಾಪಿತೃಗಳ ಋುಣವನ್ನಾದರೂ ತೀರಿಸಬಹುದೇ ಹೊರತು, ಜ್ಞಾನದಾತನಾದ ಗುರುವಿನ ಋುಣವನ್ನು ತೀರಿಸಲು ಎಂದಿಗೂ ಎಂತಹ ಶಿಷ್ಯನಿಗೂ ಸಾಧ್ಯವಿಲ್ಲವೆಂದು ತಾತಯ್ಯನವರು ಗುರುವಿನ ಮಹತ್ವವನ್ನು ಬೋಧಿಸಿದ್ದಾರೆ. ಮಾತಾ-ಪಿತಾ-ಗುರುಗಳೇ ಮಾನವನ ಕಣ್ಣೆದುರಿನ ದೈವಗಳು. ಈ ಮೂರರಲ್ಲಿಗುರುಸ್ಥಾನವೇ ಬಹಳ ದೊಡ್ಡದು. ಪ್ರಾಪ್ತಿ-ಫಲಗಳ ಋುಣಾನುಬಂಧಕ್ಕೆ ಅನುಸಾರವಾಗಿ ಮಾತಾಪಿತೃಸ್ಥಾನವನ್ನು ದೇವರು ನಾವು ಬಯಸದಿದ್ದರೂ ತಾನಾಗಿಯೇ ಕೊಡುತ್ತಾನೆ. ಗುರುಸ್ಥಾನ ಹಾಗಲ್ಲ. ಸ್ವಪ್ರಯತ್ನದ ಸಾಧನೆಯಿಂದ ಅರ್ಹತೆಯನ್ನು ಗಳಿಸಿ ಭಗವಂತನಲ್ಲಿಕೇಳಿ ಪಡೆಯಬೇಕಾಗುತ್ತದೆ.

ತಾಯಿಯು ತನ್ನ ಗರ್ಭದಲ್ಲಿ9 ತಿಂಗಳು ಶಿಶುವನ್ನು ಹೊತ್ತು ಪ್ರಸವ ವೇದನೆಯನ್ನು ಸಹಿಸಿಕೊಂಡು ಜನ್ಮವನ್ನು ಕೊಡುತ್ತಾಳೆ. ತಂದೆಯು ಅನ್ನವಸ್ತ್ರಗಳನ್ನು ಕೊಟ್ಟು ಬದುಕುವ ಮಾರ್ಗವನ್ನು ತೋರಿಸುತ್ತಾನೆ. ಈ ಕರ್ತವ್ಯಗಳಿಗೆ ಅವರನ್ನು ಬದ್ಧರನ್ನಾಗಿ ಮಾಡುವ ಮುಖ್ಯ ತತ್ತ್ವವು ‘ನನ್ನ ಮಗು’ ಎಂಬ ಮಮತೆ. ಈ ಮಮತೆಯೇ ವ್ಯಕ್ತಿಯ ಮೇಲೆ ನಿಲ್ಲುವ ದೊಡ್ಡ ಋುಣ. ಏಕೆಂದರೆ ಮಗು ಬೆಳೆದು ವಯಸ್ಸಿಗೆ ಬಂದಾಗ ಅವರಿಂದ ತಮಗಾಗುವ ಪ್ರತ್ಯುಪಕಾರವೇನೆಂಬುದು ಅವರಿಗೆ ಮುಖ್ಯವಲ್ಲ. ಬಡತನದಲ್ಲಿಸಾಲ-ಸೋಲ-ಯಾಚನೆಗಳಿಗೂ ಸಿದ್ಧರಾಗಿ ಮಕ್ಕಳ ಯೋಗಕ್ಷೇಮಕ್ಕಾಗಿ ಬೆವರು ಸುರಿಸಿ ತಂದೆಯು ಕಾಪಾಡುತ್ತಾನೆ. ದುಷ್ಟನೆಂದು ಇಡೀ ಲೋಕವೇ ನಿಂದಿಸಿ ಹೊರಹಾಕಿದಾಗ ಯಾರಿಗೂ ಬೇಡವಾಗಿರುವ ತನ್ನ ಮಗನು ಬಂದು ‘ಅಮ್ಮಾ...’ ಎಂದ ಕೂಡಲೇ ಕರುಳು ತುಂಬಿಕೊಂಡು ಮಡಿಲಲ್ಲಿಆಶ್ರಯ ನೀಡಿ ಪ್ರೀತಿಯನ್ನು ಹಂಚಿಕೊಡುತ್ತಾಳೆ ತಾಯಿ. ಹೀಗೆ ಬೆಳೆದು ದೊಡ್ಡವರಾದ ಮಕ್ಕಳು ತಂದೆ ತಾಯಿಗಳ ಋುಣವನ್ನು ತೀರಿಸಬೇಕಾದುದು ಕರ್ತವ್ಯಧರ್ಮವಾಗಿರುತ್ತದೆ. ಹಾಗೆ ತೀರಿಸಿ ಋುಣಮುಕ್ತರಾಗಲು ಮನುಷ್ಯನಿಗೆ ಸಾಧ್ಯವಿದೆ ಎಂದು ತಾತಯ್ಯನವರು ಹೇಳಿದ್ದಾರೆ.

ತಂದೆ-ತಾಯಿಗಳಿಗೆ ವಿಧೇಯರಾಗಿದ್ದು ಗೌರವಿಸಬೇಕು. ವೃದ್ಧಾಪ್ಯದಲ್ಲಿಅನ್ನ, ವಸ್ತ್ರಗಳನ್ನು ಕೊಟ್ಟು ಅವರ ಯೋಗಕ್ಷೇಮ ನೋಡಿಕೊಳ್ಳಬೇಕು. ಸತ್ಯ-ನ್ಯಾಯ-ಧರ್ಮಗಳ ಸನ್ಮಾರ್ಗದಲ್ಲಿನಡೆದು ಅವರಿಗೆ ಕೀರ್ತಿಯನ್ನು ತರಬೇಕು. ಅವರು ಈ ಲೋಕವನ್ನು ಬಿಟ್ಟಾಗ ಜಲಾಂಜಲಿ-ತಿಲಾಂಜಲಿಗಳಿಂದ ಒಳ್ಳೆಯ ಪರಲೋಕವನ್ನು ಹಾರೈಸಬೇಕು. ಈ ರೀತಿಯ ಶಾಸ್ತೊ್ರೕಕ್ತ ಧರ್ಮಗಳನ್ನು ಪಾಲಿಸುವುದರಿಂದ ಮಕ್ಕಳು ಋುಣಮುಕ್ತರಾಗಲು ಸಾಧ್ಯವಿದೆ.

ಗುರು ಋುಣ ಮಾತ್ರ ಹೀಗೆ ತೀರುವಂಥದಲ್ಲ. ಏಕೆಂದರೆ ಗುರುವಿನ ಕೊಡುಗೆ ತಂದೆ ತಾಯಿಗಳ ಕೊಡುಗೆಗಿಂತ ದೊಡ್ಡದು. ಅವರು ತೋರಿಸುವ ಬದುಕಿನ ಮಾರ್ಗ ಲೋಕಕ್ಕೆ ಸಂಬಂಧಿಸಿದೆ. ಗುರು ಬೋಧೆಯು ಬಂಧನವನ್ನು ಬಿಡಿಸುತ್ತದೆ. ಗುರುವಿನ ಜ್ಞಾನಬೋಧೆಯು ಹುಟ್ಟು ಸಾವುಗಳಿಲ್ಲದ ಮೋಕ್ಷಲೋಕಕ್ಕೆ ಸಂಬಂಧಿಸಿದೆ. ಪರಮಾತ್ಮನನ್ನು ಸಾಕ್ಷಾತ್ಕಾರ ಮಾಡಿಸುವ ಗುರು ದೊಡ್ಡವನು. ಎದುರಿಗೆ ನಿಂತ ಗುರು ಮತ್ತು ಗೋವಿಂದರ ಪೈಕಿ ನಾನು ಯಾರ ಪಾದವನ್ನು ಮೊದಲಿಗೆ ಹಿಡಿಯಲಿ? ಗೋವಿಂದನ ಸಾಕ್ಷಾತ್ಕಾರ ಮಾಡಿಸಿದ ಗುರುವಿಗೇನೇ ನನ್ನನ್ನು ಅರ್ಪಿಸಿಕೊಳ್ಳುತ್ತೇನೆ ಎನ್ನುತ್ತಾರೆ ಸಂತ ಕಬೀರದಾಸರು.

ಇಷ್ಟಾಗಿಯೂ ಗುರುವಿನ ಋುಣವನ್ನು ಶಿಷ್ಯನು ತೀರಿಸಲಾರ. ಗುರುವು ಅಜ್ಞಾನವನ್ನು ತೊಲಗಿಸುತ್ತಾ, ಸಮಾಜದಲ್ಲಿಬದುಕುವುದಕ್ಕೆ ಬೇಕಾದ ಸದ್ಗುಣಗಳನ್ನು ರೂಪಿಸುತ್ತಾರೆ. ಅತ್ಮೋದ್ಧಾರಕ್ಕೆ ಬೇಕಾದ ತತ್ತ್ವ ಮಾರ್ಗವನ್ನು ಉಪದೇಶಿಸುತ್ತಾರೆ. ಉತ್ತಮ ಕಾರ್ಯಗಳನ್ನು ಆಚರಿಸುತ್ತಾ, ಶಿಷ್ಯರಿಗೆ ಆದರ್ಶರಾಗುತ್ತಾರೆ. ಗುರುವಿನದು ಪ್ರತಿಫಲ ನಿರೀಕ್ಷಿಸದ ನಿಸ್ವಾರ್ಥ ಸೇವೆ. ಒಂದಷ್ಟು ವಿಧೇಯತೆ, ಧನಕನಕ ಸಮರ್ಪಣೆ, ಸೇವೆಗಳಿಂದ ಈ ಋುಣ ತೀರುವುದಿಲ್ಲ. ಹಾಗೆ ಭಾವಿಸುವ ಶಿಷ್ಯನು ಮೂರ್ಖನೇ ಸರಿ. ಆದುದರಿಂದ ಗುರುಸ್ಮರಣೆಯನ್ನು ಕೊನೆಯುಸಿರಿನವರೆಗೆ ಎಡೆಬಿಡದೆ ಮಾಡುತ್ತಾ, ಆತನು ಅನುಗ್ರಹಿಸಿದ ಜ್ಞಾನದಿಂದ ಆತ್ಮೋದ್ಧಾರ ಮಾಡಿಕೊಂಡು, ಜನ್ಮವನ್ನು ಸಾರ್ಥಕಪಡಿಸಿಕೊಳ್ಳುವುದೇ ಶಿಷ್ಯನ ಕರ್ತವ್ಯವೆಂದು ತಾತಯ್ಯನವರು ಬೋಧಿಸಿದ್ದಾರೆ.

---------

(ಮುಂದುವರಿದ ಭಾಗ ಪು. 8 ಬಾಟಂ)

ಬಾಟಂ 4ರ ತಪ್ತ ಮುದ್ರಾಧಾರಣೆ 7ನೇ ಪು. ಬಾಟಂ ಹಾಕಿ)