Insulin The Medical Miracle That Changed The Worlds Landscape
ಹಿಸ್ಟರಿ ಮೆಲುಕು ಜುಲೈ 13
Contributed by: DHEERAJ K|Vijaya Karnataka•
ಮಾನವ ವೈದ್ಯಕೀಯ ಇತಿಹಾಸದಲ್ಲಿಕೋಟಿಗಟ್ಟಲೆ ಜನರ ಜೀವ ಉಳಿಸಿದ ಅತ್ಯಂತ ಮಹತ್ವದ ಆವಿಷ್ಕಾರಗಳಲ್ಲಿ ಇನ್ಸುಲಿನ್ ಒಂದಾಗಿದೆ. ಈ ಕ್ರಾಂತಿಕಾರಿ ಶೋಧನೆಗೆ ಮುನ್ನ ಮಧುಮೇಹ ಅಥವಾ ಡಯಾಬಿಟಿಸ್ ಚಿಕಿತ್ಸೆಯೇ ಇಲ್ಲದ, ಸಾವನ್ನು ತಂದೊಡ್ಡುವ ರೋಗವಾಗಿತ್ತು. ವಿಶೇಷವಾಗಿ ಟೈಪ್ 1 ಮಧುಮೇಹದಿಂದ ಬಳಲುತ್ತಿದ್ದ ರೋಗಿಗಳು, ಅದರಲ್ಲೂಸಣ್ಣ ವಯಸ್ಸಿನ ಮಕ್ಕಳು ಈ ಕಾಯಿಲೆಗೆ ತುತ್ತಾಗಿ ಕೆಲವೇ ತಿಂಗಳುಗಳಲ್ಲಿಪ್ರಾಣ ಕಳೆದುಕೊಳ್ಳುತ್ತಿದ್ದರು. ಆದರೆ 1921ರ ಜುಲೈ 27ರಂದು ಸಂಭವಿಸಿದ ವೈದ್ಯಕೀಯ ಪವಾಡವು ಇಡೀ ಜಗತ್ತಿನ ಚಿತ್ರಣವನ್ನೇ ಬದಲಾಯಿಸಿತು. ಕೆನಡಾದ ಟೊರೊಂಟೊ ವಿಶ್ವವಿದ್ಯಾಲಯದಲ್ಲಿಸಂಶೋಧನೆ ನಡೆಸುತ್ತಿದ್ದ ಡಾ. ಫ್ರೆಡರಿಕ್ ಬಾಂಟಿಂಗ್ ಮತ್ತು ಅವರ ಯುವ ಸಹಾಯಕ ಚಾರ್ಲ್ಸ್ ಬೆಸ್ವ್ ಎಂಬ ಇಬ್ಬರು ವಿಜ್ಞಾನಿಗಳು ಮೊದಲ ಬಾರಿಗೆ ಇನ್ಸುಲಿನ್ ಹಾರ್ಮೋನ್ ಅನ್ನು ಯಶಸ್ವಿಯಾಗಿ ಪ್ರತ್ಯೇಕಿಸುವಲ್ಲಿಯಶಸ್ವಿಯಾದರು. ಮಾನವನ ಮೇದೋಜೀರಕ ಗ್ರಂಥಿಯು ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವ ವಸ್ತುವನ್ನು ಉತ್ಪಾದಿಸುತ್ತದೆ ಎಂಬ ಕಲ್ಪನೆ ಮುಂಚಿನಿಂದಲೂ ಇತ್ತಾದರೂ, ಅದನ್ನು ಸುರಕ್ಷಿತವಾಗಿ ಹೊರತೆಗೆದು ಬಳಸಲು ಯಾರಿಗೂ ಸಾಧ್ಯವಾಗಿರಲಿಲ್ಲ. ಡಾ. ಬಾಂಟಿಂಗ್ ಮತ್ತು ಬೆಸ್ವ್ ಅವರು ಪ್ರೊಫೆಸರ್ ಜಾನ್ ಮೆಕ್ಲಿಯೋಡ್ ಮಾರ್ಗದರ್ಶನದಲ್ಲಿಹಾಗೂ ರಸಾಯನಶಾಸ್ತ್ರಜ್ಞ ಜೇಮ್ಸ… ಕೊಲಿಪ್ ಅವರ ನೆರವಿನಿಂದ ನಾಯಿಗಳ ಮೇದೋಜೀರಕ ಗ್ರಂಥಿಯಿಂದ ಈ ಹಾರ್ಮೋನ್ ಅನ್ನು ಬೇರ್ಪಡಿಸಿದರು. ಈ ಆವಿಷ್ಕಾರದ ಮಹತ್ವವನ್ನು ತಕ್ಷಣವೇ ಪ್ರಾಯೋಗಿಕವಾಗಿ ಪರೀಕ್ಷಿಸಲಾಯಿತು. 1922ರ ಆರಂಭದಲ್ಲಿತೀವ್ರ ಮಧುಮೇಹದಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ 14 ವರ್ಷದ ಲಿಯೋನಾರ್ಡ್ ಥಾಂಪ್ಸನ್ ಎಂಬ ಬಾಲಕನಿಗೆ ಈ ಇನ್ಸುಲಿನ್ ಚುಚ್ಚುಮದ್ದನ್ನು ನೀಡಲಾಯಿತು. ಈ ಪ್ರಯೋಗವು ಅದ್ಭುತ ಫಲಿತಾಂಶವನ್ನು ನೀಡಿತು. ಬಾಲಕನ ರಕ್ತದಲ್ಲಿದ್ದ ಅಧಿಕ ಸಕ್ಕರೆಯ ಮಟ್ಟವು ತಕ್ಷಣವೇ ಇಳಿಕೆಯಾಗಿ, ಆತನ ಜೀವ ಉಳಿಯಿತು. ಅಲ್ಲಿಯವರೆಗೆ ಕೇವಲ ಕಟ್ಟುನಿಟ್ಟಾದ ಉಪವಾಸ ಮತ್ತು ಆಹಾರ ನಿಯಂತ್ರಣದ ಮೂಲಕ ಸಾವನ್ನು ಸ್ವಲ್ಪ ದಿನ ಮುಂದೂಡುತ್ತಿದ್ದ ರೋಗಿಗಳಿಗೆ ಇನ್ಸುಲಿನ್ ಜೀವದಾನ ನೀಡಿತು. ಈ ಸಾಧನೆಗಾಗಿ ಡಾ. ಫ್ರೆಡರಿಕ್ ಬಾಂಟಿಂಗ್ ಮತ್ತು ಜಾನ್ ಮೆಕ್ಲಿಯೋಡ್ ಅವರಿಗೆ 1923ರಲ್ಲಿವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಾಂಟಿಂಗ್ ತಮಗೆ ಬಂದ ಪ್ರಶಸ್ತಿಯ ಮೊತ್ತವನ್ನು ಸಹೋದ್ಯೋಗಿ ಚಾರ್ಲ್ಸ್ ಬೆಸ್ವ್ ಅವರೊಂದಿಗೆ ಹಂಚಿಕೊಂಡು ಉದಾರತೆ ಮೆರೆದರು.