Establishment Of Fast Track Courts Immediate Policy For Leaked Exam Question Paper Cases
ಸುತ್ತಮುತ್ತ
Contributed by: Panchami M S|Vijaya Karnataka•
ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ
ನೀಟ್ ಯುಜಿ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಆರೋಪಿಗಳಿಗೆ ತ್ವರಿತವಾಗಿ ಕಠಿಣ ಶಿಕ್ಷೆ ವಿಧಿಸಲು ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮಗಳು ಮತ್ತು ವಿವಿಧ ವಿವಾದಗಳ ವಿರುದ್ಧ ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರು ಬೀದಿಗಿಳಿದು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿತ್ತು. ಅಪರಾಧ ನ್ಯಾಯ ವ್ಯವಸ್ಥೆಯನ್ನು ಚುರುಕುಗೊಳಿಸಲು ಮತ್ತು ಬಾಕಿ ಪ್ರಕರಣಗಳನ್ನು ವಿಲೇವಾರಿ ಮಾಡಲು ಅಸ್ತಿತ್ವದಲ್ಲಿರುವ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯಗಳ ಹಿನ್ನೆಲೆ, ಕಾರ್ಯನಿರ್ವಹಣೆ ಕುರಿತ ವಿವರ ಇಲ್ಲಿದೆ.ಉದ್ದೇಶ: ಅತ್ಯಾಚಾರ ಮತ್ತು ಪೋಕ್ಸೊ ಕಾಯಿದೆ ಸೇರಿದಂತೆ ಗಂಭೀರ ಅಪರಾಧ ಪ್ರಕರಣಗಳ ವಿಚಾರಣೆಯನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಪೂರ್ಣಗೊಳಿಸಿ, ನ್ಯಾಯಾಲಯಗಳಲ್ಲಿಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸುವುದು ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯಗಳ ಮುಖ್ಯ ಉದ್ದೇಶವಾಗಿದೆ. ಪೂರ್ವಭಾವಿಯಾಗಿ, 2018ರ ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯಿದೆ ಮತ್ತು ಸುಪ್ರೀಂ ಕೋರ್ಟ್ ನ ನಿರ್ದೇಶನಗಳ ಅನುಸಾರ ಅಕ್ಟೋಬರ್ 2019ರಲ್ಲಿ ಕೇಂದ್ರ ಪುರಸ್ಕೃತ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ ಯೋಜನೆಯನ್ನು ಜಾರಿಗೆ ತರಲಾಯಿತು. ಈ ನ್ಯಾಯಾಲಯಗಳ ನಿರ್ವಹಣೆಗಾಗಿ ‘ನಿರ್ಭಯಾ ನಿಧಿ’ಯ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಪ್ಪಿತ ಅನುಪಾತದಲ್ಲಿಆರ್ಥಿಕ ಬೆಂಬಲ ಒದಗಿಸುತ್ತಿವೆ.
ಕಾರ್ಯನಿರ್ವಹಣೆ: ಈ ಹಿಂದೆ, ಪೋಕ್ಸೊ ಕಾಯಿದೆಯಡಿ ಬರುವ ಅಪರಾಧಗಳನ್ನು ಮಾತ್ರ ಪ್ರತ್ಯೇಕವಾಗಿ ವಿಚಾರಣೆ ನಡೆಸಲು ವಿಶೇಷ ಪೋಕ್ಸೊ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಪ್ರತಿಯೊಂದು ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯವು ಪ್ರತಿ ತ್ರೈಮಾಸಿಕದಲ್ಲಿಸುಮಾರು 41-42 ಪ್ರಕರಣಗಳನ್ನು, ಅಂದರೆ ವರ್ಷಕ್ಕೆ ಒಟ್ಟು 165 ಪ್ರಕರಣಗಳನ್ನು ವಿಲೇವಾರಿ ಮಾಡಬೇಕೆಂಬ ಗುರಿ ಹೊಂದಲಾಗಿದೆ. ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನೂರಾರು ಇಂತಹ ನ್ಯಾಯಾಲಯಗಳು ಕಾರ್ಯಾಚರಣೆ ನಡೆಸುತ್ತಿದ್ದು, ಇದುವರೆಗೆ ಲಕ್ಷಾಂತರ ಗಂಭೀರ ಸ್ವರೂಪದ ಪ್ರಕರಣಗಳನ್ನು ಇವು ಇತ್ಯರ್ಥಪಡಿಸಿವೆ.
ತಂತ್ರಜ್ಞಾನದ ಬಳಕೆ: ವಿಚಾರಣೆಗಳನ್ನು ವಿಳಂಬವಿಲ್ಲದೆ ನಡೆಸಲು ಮತ್ತು ಸಾಕ್ಷಿಗಳ ಭದ್ರತೆಯನ್ನು ಖಚಿತಪಡಿಸಲು ವೀಡಿಯೊ ಕಾನ್ಫರೆನ್ಸಿಂಗ್ , ಡಿಜಿಟಲ್ ಕೇಸ್ ನಿರ್ವಹಣೆ ವ್ಯವಸ್ಥೆ ಮತ್ತು ಆನ್ ಲೈನ್ ಮೂಲಕ ದಾಖಲೆಗಳ ವರ್ಗಾವಣೆಯಂತಹ ಆಧುನಿಕ ತಂತ್ರಜ್ಞಾನದ ಅಳವಡಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಬಾಕ್ಸ್
ಸವಾಲುಗಳು
ಅನೇಕ ಕಡೆಗಳಲ್ಲಿಪ್ರತ್ಯೇಕ ಕಟ್ಟಡಗಳಿಲ್ಲದೆ ಅಸ್ತಿತ್ವದಲ್ಲಿರುವ ಸಾಮಾನ್ಯ ನ್ಯಾಯಾಲಯಗಳ ಆವರಣದಲ್ಲೇ ಇವು ಕಾರ್ಯನಿರ್ವಹಿಸುತ್ತಿರುವುದರಿಂದ ಸ್ಥಳಾವಕಾಶ ಮತ್ತು ತಾಂತ್ರಿಕ ಸೌಲಭ್ಯಗಳ ಕೊರತೆ ಎದುರಾಗಿದೆ. ಇದರೊಂದಿಗೆ, ನ್ಯಾಯಾಧೀಶರ ಹುದ್ದೆಗಳು ಖಾಲಿ ಇರುವುದು ಮತ್ತು ಅವರಿಗೆ ಇತರೆ ಸಾಮಾನ್ಯ ನ್ಯಾಯಾಲಯಗಳ ಹೆಚ್ಚುವರಿ ಜವಾಬ್ದಾರಿಗಳನ್ನು ವಹಿಸುತ್ತಿರುವುದು ಕಾಲಮಿತಿಯೊಳಗೆ ವಿಚಾರಣೆ ಪೂರ್ಣಗೊಳ್ಳಲು ಪ್ರಮುಖ ಅಡಚಣೆಯಾಗಿದೆ. ಹೊಸ ಪ್ರಕರಣಗಳ ದಾಖಲಾತಿ ನಿರಂತರವಾಗಿ ಹೆಚ್ಚುತ್ತಿರುವುದರಿಂದ ಸಾವಿರಾರು ಪ್ರಕರಣಗಳನ್ನು ವಿಲೇವಾರಿ ಮಾಡಿದರೂ ಲಕ್ಷಾಂತರ ಬಾಕಿ ಪ್ರಕರಣಗಳು ಇನ್ನೂ ವಿಚಾರಣೆಯ ಹಂತದಲ್ಲಿಉಳಿದುಕೊಂಡಿವೆ.