ಹಿಸ್ಟರಿ ಮೆಲುಕು ಜುಲೈ 28

Contributed byDHEERAJ K|Vijaya Karnataka
terrifying declaration how world war i began
ಮೊದಲನೆಯ ಮಹಾಯುದ್ಧ

ಜುಲೈ 28, 1914
ಮಾನವ ಇತಿಹಾಸದಲ್ಲಿಅತ್ಯಂತ ವಿನಾಶಕಾರಿ ಘಟನೆ ಮೊದಲನೆಯ ಮಹಾಯುದ್ಧ. ಕೇವಲ ಎರಡು ದೇಶಗಳ ನಡುವಿನ ಸಂಘರ್ಷವಾಗಿ ಉಳಿಯದೆ, ಇಡೀ ಜಗತ್ತನ್ನೇ ಯುದ್ಧದ ಜ್ವಾಲೆಗೆ ತಳ್ಳಿದ ಈ ಭೀಕರ ಸಮರಕ್ಕೆ ಅಧಿಕೃತವಾಗಿ ಚಾಲನೆ ಸಿಕ್ಕಿದ್ದು 1914ರ ಜುಲೈ 28ರಂದು. ಅಂದು ಆಸ್ಟ್ರಿಯಾ-ಹಂಗೇರಿ ಸಾಮ್ರಾಜ್ಯವು ಸೆರ್ಬಿಯಾ ದೇಶದ ವಿರುದ್ಧ ಯುದ್ಧ ಘೋಷಣೆ ಮಾಡಿತು. ಈ ಒಂದೇ ಒಂದು ರಾಜಕೀಯ ನಿರ್ಧಾರವು ಜಾಗತಿಕ ಇತಿಹಾಸದ ಹಾದಿಯನ್ನೇ ಶಾಶ್ವತವಾಗಿ ಬದಲಾಯಿಸಿತು.

1914ರ ಜೂನ್ 28ರಂದು ಬೋಸ್ನಿಯಾದ ರಾಜಧಾನಿ ಸರಾಯೇವೋದಲ್ಲಿಆಸ್ಟ್ರಿಯಾದ ಯುವರಾಜ ಫರ್ಡಿನಾಂಡ್ ಮತ್ತು ಅವರ ಪತ್ನಿ ಸೋಫಿ ಅವರ ಹತ್ಯೆಯಾಯಿತು. ಗಾವ್ರಿಲೋ ಪ್ರಿನ್ಸಿಪ್ ಎಂಬ ಸೆರ್ಬಿಯನ್ ರಾಷ್ಟ್ರವಾದಿ ಯುವಕ ಈ ಹತ್ಯೆಯನ್ನು ಮಾಡಿದ್ದನು. ಈ ಘಟನೆಯು ಆಸ್ಟ್ರಿಯಾ-ಹಂಗೇರಿ ಸಾಮ್ರಾಜ್ಯದಲ್ಲಿತೀವ್ರ ಆಕ್ರೋಶವನ್ನು ಹುಟ್ಟುಹಾಕಿತು. ಹತ್ಯೆಯ ಹಿಂದೆ ಸೆರ್ಬಿಯಾ ಸರಕಾರದ ಕೈವಾಡವಿದೆ ಎಂದು ಆಸ್ಟ್ರಿಯಾ ಶಂಕಿಸಿತು ಮತ್ತು ಸೆರ್ಬಿಯಾವನ್ನು ಹದಗೆಡಿಸಲು ಹಾಗೂ ತನ್ನ ಆಡಳಿತ ಶಕ್ತಿಯನ್ನು ಪ್ರದರ್ಶಿಸಲು ಇದನ್ನು ಒಂದು ಸುವರ್ಣಾವಕಾಶವಾಗಿ ಬಳಸಿಕೊಳ್ಳಲು ನಿರ್ಧರಿಸಿತು.

ಯುವರಾಜನ ಹತ್ಯೆಯಾದ ಸರಿ ಸುಮಾರಾಗಿ ಒಂದು ತಿಂಗಳ ಕಾಲ ಆಫ್ರಿಕಾ ಮತ್ತು ಯೂರೋಪ್ ಖಂಡಗಳಾದ್ಯಂತ ತೀವ್ರ ರಾಜತಾಂತ್ರಿಕ ಬಿಕ್ಕಟ್ಟು ನಿರ್ಮಾಣವಾಗಿತ್ತು. ಇದನ್ನು ‘ ಜುಲೈ ಬಿಕ್ಕಟ್ಟು ’ ಎಂದು ಕರೆಯಲಾಗುತ್ತದೆ. ಜುಲೈ 28ರಂದು ಆಸ್ಟ್ರಿಯಾ-ಹಂಗೇರಿಯು ಸೆರ್ಬಿಯಾದ ಮೇಲೆ ಯುದ್ಧ ಸಾರಿತು. ಸೆರ್ಬಿಯಾದ ರಕ್ಷಣೆಗೆ ರಷ್ಯಾ ಮುಂದಾಯಿತು. ಜರ್ಮನಿ ತನ್ನ ಮಿತ್ರರಾಷ್ಟ್ರವಾದ ಆಸ್ಟ್ರಿಯಾ-ಹಂಗೇರಿಯ ಬೆಂಬಲಕ್ಕೆ ನಿಂತು ರಷ್ಯಾ ಮತ್ತು ಫ್ರಾಸ್ಸ್ ವಿರುದ್ಧ ಯುದ್ಧ ಘೋಷಿಸಿತು. ಜರ್ಮನಿಯು ಬೆಲ್ಜಿಯಂ ಮೂಲಕ ಫ್ರಾಸ್ಸ್ ಮೇಲೆ ಆಕ್ರಮಣ ಮಾಡಿದಾಗ, ಬ್ರಿಟನ್ ಕೂಡ ಯುದ್ಧರಂಗಕ್ಕೆ ಧುಮುಕಿತು.

ಹೀಗೆ ಜುಲೈ 28ರಂದು ಪ್ರಾರಂಭವಾದ ಆಸ್ಟ್ರಿಯಾ-ಸೆರ್ಬಿಯಾದ ಕಾಳಗವು ಕೆಲವೇ ದಿನಗಳಲ್ಲಿವಿಶ್ವದ ಪ್ರಮುಖ ಶಕ್ತಿಗಳ ನಡುವಿನ ಮಹಾಸಂಗ್ರಾಮವಾಯಿತು. ಈ ಯುದ್ಧವು ಸುಮಾರು 4 ವರ್ಷಗಳ ಕಾಲ ನಡೆದು, ಕೋಟ್ಯಂತರ ಜನರ ಸಾವುನೋವಿಗೆ ಕಾರಣವಾಯಿತು. ಜೊತೆಗೆ ಆಸ್ಟ್ರಿಯಾ-ಹಂಗೈರಿ, ಒಟ್ಟೋಮನ್ , ರಷ್ಯಾ ಮತ್ತು ಜರ್ಮನಿಯಂತಹ ಮಹಾನ್ ಸಾಮ್ರಾಜ್ಯಗಳ ಪತನಕ್ಕೆ ಹಾದಿಮಾಡಿಕೊಟ್ಟಿತು.