ಒಂದು ಪ್ರದೇಶ ಅಥವಾ ಸಮುದಾಯಕ್ಕೆ ಸೇರಿದ ಕಸೂತಿ ಕಲೆಯು ಹೊಸ ಶೈಲಿಯ ಉಡುಪುಗಳಲ್ಲಿಸಂಯೋಜನೆಗೊಂಡು ಇನ್ನಷ್ಟು ಸುಂದರವಾಗಿ ಫ್ಯಾಷನ್ ಪ್ರಿಯರ ವಾರ್ಡ್ ರೋಬ್ ಸೇರುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಲಂಬಾಣಿ ಕಸೂತಿ ಅಳವಡಿಸಿರುವ ಈಗಿನ ಕೆಲವು ಡಿಸೈನರ್ ಉಡುಪುಗಳು .
ಶೋಭಾ ದೇಸಾಯಿ
ಲಂಬಾಣಿ ಶೈಲಿಯ ದಿರಸುಗಳು ಗಾಢ ಬಣ್ಣಗಳ ಬಟ್ಟೆಗಳ ಮೇಲೆ ಒಂದಕ್ಕೊಂಡು ಒತ್ತಿಕೊಂಡಂತೆ ಹೆಣೆದ ಹೆಣಿಕೆ, ಕನ್ನಡಿಯ ತುಂಡು, ನಾಣ್ಯಗಳ ಜೋಡಣೆ, ಕವಡೆ ಹೀಗೆ ಅನೇಕ ವಿಭಿನ್ನ ಅಲಂಕಾರಿಕ ವಸ್ತುಗಳನ್ನು ಒಳಗೊಂಡಿರುತ್ತವೆ. ಆದರೆ ಇದರಲ್ಲಿರುವ ಜೋಡಣೆಯಲ್ಲಿನ ಸಾಮ್ಯತನದ ಸೊಬಗು ಕಣ್ಣಿಗೆ ನಮಗರಿವಿಲ್ಲದಂತೆಯೇ ರಾಚುತ್ತದೆ. ಕರ್ನಾಟಕದ ಸಂಡೂರು ಭಾಗದ ಲಂಬಾಣಿ ಜನರ ಈ ವಿಶಿಷ್ಟ ದಿರಸು ಅವರ ಕೈಚಳಕದಿಂದ ಹೊರಹೊಮ್ಮುವ ಅದ್ಭುತ ಕಲೆಯೇ ಹೌದು. ಈ ಉಡುಗೆಯಲ್ಲಿರುವ ಅಪೂರ್ವ ಕಲೆಯ ಕಾರಣದಿಂದಾಗಿ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲೂಸದ್ದು ಮಾಡುತ್ತಿದೆ, ಮಾತ್ರವಲ್ಲದೆ ಬೇಡಿಕೆಯನ್ನೂ ಅಸಾಧಾರಣವಾಗಿ ಬೆಳೆಸಿಕೊಂಡಿದೆ.
ಆಕರ್ಷಕ ಕಲೆ
ಲಂಬಾಣಿ ಉಡುಪುಗಳ ಹೆಣಿಕೆಗಳು ಅವರದೇ ಉಡುಗೆಗಳಾದ ಫೇಟಿಯಾ ಅಂದರೆ ಪಾದದಿಂದ ಒಂದಡಿ ಮೇಲಿರುವ ಲಂಗ ಹಾಗೂ ತೆರೆದ ಬೆನ್ನಿನ ಕುಪ್ಪಸ ಎಂಬ ಕಾಂಚಾಲಿಗೆ ಸೀಮಿತವಾಗಿದ್ದವು. ಆದರೆ ಈಗ ಈ ಹೆಣಿಕೆಗಳು ಫ್ಯಾಷನ್ ಲೋಕಕೆ ಲಗ್ಗೆಯಿಟ್ಟು ಸೀರೆ, ಬ್ಲೌಸ್ , ಶಾಲ್ , ಟಾಪ್ , ಸಲ್ವಾರ್ , ಬ್ಯಾಗ್ , ಪರ್ಸ್ ನಿಂದ ಟೇಬಲ್ ಕ್ಲಾತ್ ಹೀಗೆ ಎಲ್ಲಾ ವಿಧದ ಬಟ್ಟೆ, ಡ್ರೆಸ್ ಗಳ ಮೇಲೆ ಅದಕೊಪ್ಪುವಂತೆ ರಚಿಸಲ್ಪಟ್ಟು ರಾರಾಜಿಸುತ್ತಿವೆ. ಹೊಸ ಉಡುಪುಗಳಿಗೆ ತಕ್ಕಂತೆ ಅವುಗಳಿಗೆ ಜನಾಕರ್ಷಣೆ ನೀಡಿದ ಕಾರಣ ಲಂಬಾಣಿ ಜನಾಂಗದವರು ತಮ್ಮ ಈ ಕಲೆಯನ್ನು ವಿಸ್ತರಿಸಿಕೊಳ್ಳುತ್ತಾ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಫ್ಯಾಷನ್ ಲುಕ್
ಕೈಯಿಂದಲೇ ಹೆಣೆದ ಲಂಬಾಣಿ ಹೆಣಿಕೆಗಳುಳ್ಳ ಉಡುಪುಗಳು ಬೆಲೆಯಲ್ಲಿಸ್ವಲ್ಪ ದುಬಾರಿ ಅನಿಸಿದರೂ ಲಂಬಾಣಿಗಳು ಅವುಗಳನ್ನು ತಮ್ಮ ಮೂಲ ಹೆಣಿಕೆಯಲ್ಲಿಯಾವುದೇ ಬದಲಾವಣೆ ಇಲ್ಲದಂತೆ ಜೋಪಾನವಾಗಿ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಫ್ಯಾಷನ್ ಲೋಕದಲ್ಲಿಸದಾ ಬದಲಾವಣೆ ಬಯಸುವ ಜನರು ಲಂಬಾಣಿ ಹೆಣಿಕೆಗೆ ಮಾರುಹೋಗುತ್ತಿರುವುದರಿಂದ ಈಗ ಲಂಬಾಣಿ ಮಹಿಳೆಯರಿಗೆ ಮಾತ್ರ ಸೀಮಿತವಾಗಿದ್ದ ಈ ಹೆಣಿಕೆ ಕಲೆ ಈಗ ಅವರ ಜೀವನಕ್ಕೊಂದು ಆದಾಯದ ಮೂಲವಾಗಿದೆ.