ಕೆಲವೇ ವರ್ಷಗಳಿಗೆ ಸೀಮಿತವಾಗುವ ವಿವಾಹದ ಕಲ್ಪನೆ ಈಗ ಸ್ಟಾರ್ಟರ್ ಮ್ಯಾರೇಜ್ ಹೆಸರಲ್ಲಿಗಮನ ಸೆಳೆದಿದೆ.
ಶುಭಾ ವಿಕಾಸ್
ಪ್ರೀತಿ, ನಂಬಿಕೆ, ಕಾಳಜಿಯಿಂದಲೇ ಕಟ್ಟಿದ ಒಲವಿನ ಗೂಡು ಅದು. ಅದನ್ನು ಭದ್ರಗೊಳಿಸುತ್ತದೆ ಮದುವೆಯೆಂಬ ಬಾಗಿಲು. ಕದ ಮುಚ್ಚಿದ ಪ್ರೀತಿಯ ಗೋಡೆಗಳ ನಡುವೆ ಶುರುವಾದ ದಾಂಪತ್ಯದ ಕಣ್ಣಲ್ಲಿಹೊಸತನದ ಬೆಳಕು, ಆಡುವ ಮಾತಲ್ಲಿಭರವಸೆ, ಜೊತೆಯಾಗಿ ಮಾಡುವ ಕೆಲಸದಲ್ಲಿಹೊಂದಾಣಿಕೆ. ವರ್ಷಗಳು ಕಳೆಯುವ ಹೊತ್ತಿಗೆ ಬೀಸುವ ಅಪನಂಬಿಕೆಯ ಗಾಳಿಗೋ, ಅನುಮಾನದ ಮಳೆಗೋ ಒಲವಿನ ಗೂಡು ಅಲುಗಾಡುತ್ತದೆ. ಪ್ರೀತಿಯಿಂದಲೇ ಕಟ್ಟಿಕೊಂಡ ಗೂಡನ್ನು ಕೆಡಹುವ ಉದ್ದೇಶ ಇಬ್ಬರಿಗೂ ಇಲ್ಲ. ಆದರೆ ಕಾಲ ಉರುಳಿದಂತೆ ದೇಹಕ್ಕಷ್ಟೇ ವಯಸ್ಸಾಗುವುದಿಲ್ಲ, ಮನಸ್ಸು ಕೂಡ ಮಾಗುತ್ತದೆ. ಅದರ ಆಲೋಚನೆ, ಆದ್ಯತೆಗಳು ಬೇರೆಯದೇ ಎನ್ನುವ ಹಂತ ತಲುಪಿ ಇಷ್ಟು ವರ್ಷ ಜೊತೆಗಿದ್ದು ಮುಂದೆಯೂ ಇರಬೇಕಾದ ಗೂಡು ಇದಲ್ಲಎಂಬ ಅರಿವು ಬಿಡುಗಡೆ ಬಯಸುತ್ತದೆ. ಅಲ್ಲಿಗೆ ಈ ಹಿಂದೆ ಕಟ್ಟಿದ್ದ ಒಲವಿನ ಗೂಡಲ್ಲಿಉಳಿಯುವುದು ನೆನಪು ಮಾತ್ರ. ಹೀಗೆ ಇರುವಷ್ಟು ದಿನ ಇದ್ದು ಎದ್ದು ಹೋಗುವ ಬಂಧವಾಗಿ ಯುವ ವಲಯದಲ್ಲಿಸಂಚಲನ ಮೂಡಿಸಿದೆ ಈ ಸ್ಟಾರ್ಟರ್ ಮ್ಯಾರೇಜ್ .
ಯಾವುದು ಈ ಬಂಧ?
ಚಿಕ್ಕ ವಯಸ್ಸಿನಲ್ಲಿಅಂದರೆ ಸಾಮಾನ್ಯವಾಗಿ 20ರ ಹರೆಯದಲ್ಲಿಮದುವೆ ಮಾಡಿಕೊಳ್ಳುವ ಹಾಗೂ ಐದು ವರ್ಷದೊಳಗೆ ಮುರಿದು ಬೀಳುವ ಮತ್ತು ಮಕ್ಕಳಿಲ್ಲದ ಮೊದಲ ಮದುವೆ ಇದು. ಒಂದೇ ಸೂರಿನಡಿ ದಿನವೂ ಸಾಯುತ್ತಾ ಬಾಳುವುದಕ್ಕಿಂತ, ಪ್ರೀತಿಯಿಂದಲೇ ದೂರವಾಗಿ ಅವರವರ ಆದ್ಯತೆಗಳನ್ನು ಗೌರವಿಸುವ ಆಲೋಚನೆಯಲ್ಲಿಹುಟ್ಟಿದ್ದೇ ಈ ಕಲ್ಪನೆ. ಐದು ವರ್ಷ ಅಥವಾ ಅದಕ್ಕಿಂತ ಕಡಿಮೆ ಕಾಲ ಉಳಿಯುವ ಈ ಮದುವೆಯಲ್ಲಿಮಕ್ಕಳು, ಆಸ್ತಿ, ಸಾಲಗಳಂಥ ಇಬ್ಬರೂ ಪಾಲುದಾರರಾಗುವ ಜವಾಬ್ದಾರಿಗಳಿರುವುದಿಲ್ಲ. ಕಡಿಮೆ ಅವಧಿಯ ಮದುವೆಗಳನ್ನು ಯಶಸ್ವಿಯಾಗದ ಜೀವನವೆಂದು ಭಾವಿಸುವ ಬದಲು ಯುವ ದಂಪತಿ ಇದನ್ನು ಸ್ವಯಂ-ಅನ್ವೇಷಣೆ, ಕಲಿಕೆ ಮತ್ತು ವೈಯಕ್ತಿಕ ಬೆಳವಣಿಗೆಯ ಒಂದು ಹಂತವೆಂದು ಪರಿಗಣಿಸುತ್ತಿದ್ದಾರೆ. ಕೊನೆಯವರೆಗೂ ಜೊತೆಗಿದ್ದು ದಿನವೂ ಸಾಯುವುದಕ್ಕಿಂತ, ಪ್ರೀತಿಯಿಂದಲೇ ದೂರವಾಗಿ ಪರಸ್ಪರರ ನೆಮ್ಮದಿ ಹಾರೈಸುವುದು ಉತ್ತಮ ಎಂಬ ಭಾವ ಇದರ ಹಿಂದಿದೆ.
ಭಾವನಾತ್ಮಕ ಅಗತ್ಯ
20ರಿಂದ 25ರ ವಯಸ್ಸಿನಲ್ಲಿಮನುಷ್ಯನ ವ್ಯಕ್ತಿತ್ವ, ವೃತ್ತಿಪರ ಆಸೆಗಳು ಮತ್ತು ಜೀವನದ ಮೌಲ್ಯಗಳು ವೇಗವಾಗಿ ಬದಲಾಗುತ್ತವೆ. 22ನೇ ವಯಸ್ಸಿನಲ್ಲಿಸರಿಹೊಂದಿದ ಸಂಗಾತಿ, 27ನೇ ವಯಸ್ಸಿಗೆ ಸಂಪೂರ್ಣ ವಿಭಿನ್ನ ಹಾದಿಯಲ್ಲಿಸಾಗುತ್ತಿರಬಹುದು. ಈ ಪ್ರಬುದ್ಧತೆಯ ಅಂತರ ಚಿಕ್ಕ ವಯಸ್ಸಿನಲ್ಲಿಮದುವೆಯಾದವರನ್ನು ಬೇರೆಯಾಗಿಸಬಹುದು ಎನ್ನುತ್ತಾರೆ ತಜ್ಞರು. ಮಾನಸಿಕ ಆರೋಗ್ಯ ತಜ್ಞೆ ಹಾಗೂ ಕೌಟುಂಬಿಕ ಆಪ್ತ ಸಲಹೆಗಾತಿ ಡಾ. ಶಾಂಭವಿ ಹೇಳುವಂತೆ, ‘ವಿವಾಹವಾಗಿ ಐದು ವರ್ಷದೊಳಗೆ ಬೇರೆಯಾಗಬೇಕು ಎಂಬ ಉದ್ದೇಶಿತ ದಂಪತಿಯ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ಪರಸ್ಪರರ ಚಟ, ಗುಣಗಳ ವಿಚಾರವೇ ಪ್ರಮುಖವಾಗಿ ಕಾಣುತ್ತದೆ. ಅತೃಪ್ತಿಯಿಂದ ಒಟ್ಟಿಗೆ ಇರುವುದಕ್ಕಿಂತ ಭಾವನಾತ್ಮಕ ಹೊಂದಾಣಿಕೆ, ಪರಸ್ಪರ ಗೌರವ ಮತ್ತು ವೈಯಕ್ತಿಕ ನೆಮ್ಮದಿಗೆ ಪ್ರಾಮುಖ್ಯ ನೀಡುತ್ತಾರೆ. ತಮ್ಮ ಆದ್ಯತೆಗೆ ಅನುಗುಣವಾಗಿ ಸಂಗಾತಿ ಭಾವನಾತ್ಮಕವಾಗಿ ಪೂರಕವಾಗಿಲ್ಲಎಂಬುದೇ ಬಹುತೇಕ ವಿಚ್ಛೇದನ ಬಯಸುವವರ ಹಿಂದಿನ ಕಾರಣ. ಹಿಂದಿನ ಪೀಳಿಗೆಯಲ್ಲಿಸಮಾಜಕ್ಕೆ ಹೆದರಿ ಅಥವಾ ಕುಟುಂಬದ ಒತ್ತಡಕ್ಕೆ ಮಣಿದು ಅಸಂತುಷ್ಟ ದಾಂಪತ್ಯದಲ್ಲೇ ಇಡೀ ಆಯುಷ್ಯ ಕಳೆಯುತ್ತಿದ್ದರು. ಆದರೆ ಇಂದಿನ ಪೀಳಿಗೆಗೆ ಆತ್ಮಗೌರವ ಮತ್ತು ಮಾನಸಿಕ ನೆಮ್ಮದಿ ಮುಖ್ಯ. ಹೊಂದಾಣಿಕೆಯಾಗದ ಜಾಗದಲ್ಲಿಬಲವಂತವಾಗಿ ಇರುವುದಕ್ಕಿಂತ ಹೊರಬರುವುದೇ ಸರಿಯಾದ ನಿರ್ಧಾರ ಎಂದು ಅವರು ಭಾವಿಸುತ್ತಾರೆ’.
ಒಪ್ಪಿತವಲ್ಲ
ಸ್ಟಾರ್ಟರ್ ಮ್ಯಾರೇಜ್ ಎನ್ನುವುದು ಪ್ರತಿಯೊಬ್ಬರಿಗೂ ಮಾದರಿಯಲ್ಲ. ನಿರ್ಧಾರ ತಪ್ಪಾದಾಗ, ಅದನ್ನೇ ಶಿಕ್ಷೆಯಾಗಿ ಅನುಭವಿಸುವ ಬದಲು ಗೌರವಯುತವಾಗಿ ಮುಕ್ತಾಯಗೊಳಿಸಲು ಸಹಕಾರಿ. ಆದರೆ ಮದುವೆಗೆ ಮುಂಚೆಯೇ ಸಾಕಷ್ಟು ಸಮಯ ತೆಗೆದುಕೊಂಡು, ಪರಸ್ಪರರ ಮೌಲ್ಯಗಳನ್ನು ಅರ್ಥೈಸಿಕೊಂಡು ಹೆಜ್ಜೆ ಇಡುವುದೇ ಆದ್ಯತೆ ಆಗಲಿ. ಏಕೆಂದರೆ ಮದುವೆಯನ್ನು ಪರೀಕ್ಷಾರ್ಥ ಪ್ರಯೋಗ ಎಂದು ನೋಡುವುದು ಭಾರತೀಯ ಸಮಾಜ, ಸಂಪ್ರದಾಯಕ್ಕೆ ಸ್ವೀಕಾರಾರ್ಹವಲ್ಲ. ವಿಚ್ಛೇದನದ ಕಾನೂನು ಪ್ರಕ್ರಿಯೆ ಮತ್ತು ಆಸ್ತಿ ಹಂಚಿಕೆಗಳು ಸಂಬಂಧವನ್ನು ಸಂಕೀರ್ಣಗೊಳಿಸುತ್ತವೆ. ಹೀಗಾಗಿ ಮದುವೆ ಎನ್ನುವ ಒಲವುಭರಿತ ಜವಾಬ್ದಾರಿಯನ್ನು ಕೇವಲ ಸಂಬಂಧದ ಪ್ರಯೋಗವಾಗಿ ನೋಡುವ ಟ್ರೆಂಡ್ ಹಿತವಲ್ಲಎಂಬುದು ತಜ್ಞರ ಅಭಿಪ್ರಾಯ.
ಬಾಕ್ಸ್
ವಿಚ್ಛೇದನದ ಹಾದಿ
ಮದುವೆಯಾಗಿ ಕೆಲವೇ ವರ್ಷಗಳಲ್ಲಿವಿಚ್ಛೇದನ ಪಡೆಯುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿವೆಯಾದರೂ ಆ ಸಂಬಂಧಕ್ಕೆ ಮಗುವಿರುವ ಹಾಗೂ ಸಂಪೂರ್ಣ ಬಿಡುಗಡೆಯಾಗುವ ಹೊತ್ತಿಗೆ ಹಲವು ವರ್ಷಗಳೇ ಕಳೆದಿರುತ್ತವೆ. ಈ ಸ್ಟಾರ್ಟರ್ ಮ್ಯಾರೇಜ್ ಗಳ ಅಂತ್ಯ ಕೂಡ ಹಾಗೆ. ಲಿವ್ ಇನ್ ಸಂಬಂಧದಲ್ಲಿರುವವರು ತಮ್ಮ ಸಂಬಂಧಕ್ಕೆ ಕಾನೂನುಬದ್ಧ ಅಥವಾ ಸಾಮಾಜಿಕ ಮಾನ್ಯತೆ ನೀಡುವ ಕುಟುಂಬದ ಒತ್ತಡ ಎದುರಿಸುತ್ತಾರೆ. ದೀರ್ಘಕಾಲದ ಬದ್ಧತೆಗೆ ಮಾನಸಿಕವಾಗಿ ಸಿದ್ಧವಿಲ್ಲದಿದ್ದರೂ ಮದುವೆಯಾಗುತ್ತಾರೆ. ಆದರೆ ದಿನನಿತ್ಯದ ವಾಸ್ತವಗಳನ್ನು ಎದುರಿಸಲಾಗದೆ ವಿಚ್ಛೇದನ ಪಡೆಯುತ್ತಾರೆ. ಮದುವೆ ಶಾಸ್ತೊ್ರೕಕ್ತವಾಗಿ ನೆರವೇರಿದ ಮೇಲೆ ಪ್ರತಿ ವಿವಾಹವೂ ಒಂದೇ ರೀತಿಯ ಕಾನೂನುಬದ್ಧ ಹಕ್ಕುಗಳು, ಕರ್ತವ್ಯಗಳು ಮತ್ತು ವಿಚ್ಛೇದನದ ಕಟ್ಟುನಿಟ್ಟಾದ ನಿಯಮಗಳನ್ನು ಹೊಂದಿರುತ್ತದೆ. ಹೀಗಾಗಿ ಇಂತಹ ವಿವಾಹಗಳ ವಿಚ್ಛೇದನವಾದರೂ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎನ್ನುತ್ತಾರೆ ನ್ಯಾಯವಾದಿ ಅಂಜಲಿ ರಾಮಣ್ಣ.
ಕೋಟ್ಸ್
ಪರಸ್ಪರ ಭಾವನಾತ್ಮಕ ಆದ್ಯತೆಯೇ ವೈವಾಹಿಕ ಸಂಬಂಧದ ಒಳಿತುಕೆಡುಕುಗಳ ಮೇಲೆ ಅವಲಂಬಿತ ಎಂಬುದನ್ನು ಆಧುನಿಕ ದಾಂಪತ್ಯ ಸಾರಲು ಹೊರಟಿದೆ.
ಡಾ. ಶಾಂಭವಿ | ಕೌಟುಂಬಿಕ ಆಪ್ತ ಸಲಹೆಗಾರ್ತಿ
ಇಲ್ಲಿಯಾವ ರೀತಿಯ ವಿವಾಹ ಎಂಬುದಕ್ಕಿಂತ ಅಂತ್ಯದ ಕಾರಣವೇ ಇಬ್ಬರನ್ನೂ ಕಾನೂನಾತ್ಮಕವಾಗಿ ಬೇರ್ಪಡಿಸುತ್ತದೆ.