ವಿಧಾನಸಭಾ ಕ್ಷೇತ್ರವಾರು ಎಸ್ ಐಆರ್ ಗೆ ಸಂಬಂಧಿಸಿದಂತೆ ಮತಗಟ್ಟೆವಾರು ಪ್ರಗತಿ ಪರಿಶೀಲಿಸಿ, ಸಾರ್ವಜನಿಕರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ಹಾಗೂ ಯಾವುದೇ ನೈಜ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ನಿಗದಿತ ಅವಧಿಯಲ್ಲಿಗುರಿ ತಲುಪಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ‘‘ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಚುನಾವಣಾ ಆಯೋಗ ನಿಗದಿಪಡಿಸಿರುವ ವೇಳಾಪಟ್ಟಿಯಂತೆ ಪಾರದರ್ಶಕತೆಯಿಂದ ಪೂರ್ಣಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು,’’ ಎಂದು ಹೇಳಿದರು.
‘‘ಮತದಾರರ ನೋಂದಣಾಧಿಕಾರಿಗಳು ವಿಧಾನಸಭಾ ಕ್ಷೇತ್ರವಾರು ಗುರುತಿಸಲಾದ ಎಎಸ್ ಡಿಡಿಒ ಪಟ್ಟಿಯ ವಿವರವನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ನಿತ್ಯ ನೀಡಬೇಕು. ಅವರು ಏನಾದರೂ ಆಕ್ಷೇಪಣೆ, ಸಲಹೆ ನೀಡಿದರೆ ಪರಿಶೀಲಿಸಿ ನಿಯಮಾನುಸಾರ ಕ್ರಮ ವಹಿಸಬೇಕು. ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಕ್ಷೇತ್ರವಾರು ಸಭೆ ನಡೆಸಬೇಕು,’’ ಎಂದು ಸೂಚಿಸಿದರು.
‘‘ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡುವ ಕಾರ್ಯವನ್ನು ನಿಗದಿತ ಗುರಿಯೊಂದಿಗೆ ಸಮರ್ಪಕವಾಗಿ ನಿರ್ವಹಿಸಬೇಕು. ಅರ್ಜಿಗಳ ವಿಲೇವಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಎಸ್ ಐಆರ್ ಕಾರ್ಯವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು,’’ ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮುಲ ಸುನಿಲ್ ಕುಮಾರ್ , ಜಂಟಿ ಮುಖ್ಯ ಚುನಾವಣಾಧಿಕಾರಿ ಯೋಗೇಶ್ವರ್ , ಜಂಟಿ ಆಯುಕ್ತರಾದ ಪಲ್ಲವಿ, ಮೊಹಮ್ಮದ್ ನಯೀಮ್ ಮೊಮಿನ್ ಹಾಗೂ ಇತರರು ಉಪಸ್ಥಿತರಿದ್ದರು.