ವಿಕ ಓದು ಅಭಿಯಾನಕ್ಕೆ ಜಿಪಂ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ಚಾಲನೆ
ವಿಕ ಸುದ್ದಿಲೋಕ ಕೋಲಾರನಗರದ ಸರಕಾರಿ ಬಾಲಕಿಯರ ಪ್ರೌಢಶಾಲೆ ಹಾಗೂ ಜೂನಿಯರ್ ಕಾಲೇಜು ಆವರಣದಲ್ಲಿಮಂಗಳವಾರ ವಿಜಯ ಕರ್ನಾಟಕ ದಿನಪತ್ರಿಕೆ ವತಿಯಿಂದ ಆಯೋಜಿಸಲಾಗಿದ್ದ ವಿಕ ಓದು ಅಭಿಯಾನವನ್ನು ಜಿಪಂ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಇಂದಿನ ಡಿಜಿಟಲ್ ಯುಗದಲ್ಲಿಮೊಬೈಲ್ ಬಳಕೆ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳು ಅದನ್ನು ಕೇವಲ ಅಗತ್ಯ ಸಂಪರ್ಕಕ್ಕೆ ಸೀಮಿತಗೊಳಿಸಬೇಕು. 24/7 ಮೊಬೈಲ್ ನಲ್ಲೇ ಕಾಲ ಕಳೆಯುವುದು ಸೂಕ್ತ ಅಭ್ಯಾಸವಲ್ಲ. ಅದರ ಬದಲಿಗೆ ದಿನಪತ್ರಿಕೆ ಹಾಗೂ ಪುಸ್ತಕಗಳನ್ನು ಓದುವ ಮೂಲಕ ನೈಜ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಬ್ರಿಟಿಷರ ಆಡಳಿತದ ವಿರುದ್ಧ ದೇಶದಲ್ಲಿರಾಷ್ಟ್ರೀಯತೆ ಹಾಗೂ ದೇಶಭಕ್ತಿಯ ಕಿಚ್ಚು ಹಚ್ಚಲು ಪತ್ರಿಕೆಗಳು ಪ್ರಮುಖ ಪಾತ್ರ ವಹಿಸಿದ್ದವು. ಮಹಾತ್ಮ ಗಾಂಧೀಜಿಯವರ ಯಂಗ್ ಇಂಡಿಯಾ, ಹರಿಜನ ಹಾಗೂ ಡಾ.ಬಿ.ಆರ್ .ಅಂಬೇಡ್ಕರ್ ಅವರ ಮೂಕನಾಯಕ, ಬಹಿಷ್ಕೃತ ಭಾರತ ಪತ್ರಿಕೆಗಳು ಸಮಾಜದಲ್ಲಿಜಾಗೃತಿ ಮೂಡಿಸಿದ ಇತಿಹಾಸವನ್ನು ವಿದ್ಯಾರ್ಥಿಗಳಿಗೆ ಸ್ಮರಿಸಿದರು.
ಸಂವಿಧಾನದ ಮೂಲಭೂತ ಕರ್ತವ್ಯಗಳಲ್ಲಿತಿಳಿಸಿರುವಂತೆ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಹಾಗೂ ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ಸೋಶಿಯಲ್ ಮೀಡಿಯಾದಲ್ಲಿಸಿಗುವ ಎಲ್ಲಮಾಹಿತಿಗಳು ನಿಜವಲ್ಲ. ಪ್ರತಿಯೊಂದು ವಿಷಯವನ್ನು ಏಕೆ, ಹೇಗೆ, ಏನು ಎಂದು ಪ್ರಶ್ನಿಸಿ ವರ್ಗೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪ್ರಚಲಿತ ವಿದ್ಯಮಾನಗಳ ಜ್ಞಾನ ಅತ್ಯಗತ್ಯ. ಕೇವಲ ಪಠ್ಯಪುಸ್ತಕದ ಜ್ಞಾನ ಸಾಲದು, ಸಮಾಜದ ಆಗುಹೋಗುಗಳು, ರಾಜಕೀಯ, ಆರ್ಥಿಕ, ವಿಜ್ಞಾನ, ಸಾಹಿತ್ಯ ಹಾಗೂ ಕ್ರೀಡಾ ಕ್ಷೇತ್ರದ ಬೆಳವಣಿಗೆಗಳನ್ನು ತಿಳಿಯಲು ದಿನಪತ್ರಿಕೆಗಳ ವಾಚನ ಮಾಡಬೇಕು ಎಂದು ಜಿನ್ ಜಿ ಪೀಳಿಗೆಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸದುಪಯೋಗಪಡಿಸಿಕೊಳ್ಳಿ: ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎ.ಅಜಯ್ ಕುಮಾರ್ ಮಾತನಾಡಿ, ಇಂದಿನ ಮಕ್ಕಳೇ ನಾಳೆಯ ಸಮಾಜದ ಪ್ರಜೆಗಳು. ಪ್ರೌಢಶಾಲೆ ಹಾಗೂ ಪಿಯುಸಿ ಹಂತದಲ್ಲಿಕಲಿಯುವ ಶಕ್ತಿ ಮತ್ತು ನೆನಪಿನ ಶಕ್ತಿ ಅತ್ಯಂತ ಚುರುಕಾಗಿರುತ್ತದೆ. ನ್ಯೂಸ್ ಎಂದರೆ ನಾಲ್ಕೂ ದಿಕ್ಕುಗಳ ಮಾಹಿತಿಯನ್ನು ಒಂದೇ ಕಡೆ ತಲುಪಿಸುವ ಮಾಧ್ಯಮವಾಗಿದೆ ಎಂದರು.
ನಿರಂತರವಾಗಿ ಪತ್ರಿಕೆಗಳನ್ನು ಓದುವುದರಿಂದ ಏಕಾಗ್ರತೆ ಹಾಗೂ ವಿಷಯಗಳನ್ನು ಸಮಗ್ರವಾಗಿ ಅಥೈರ್ ಸಿಕೊಳ್ಳುವ ಸಾಮರ್ಥ್ಯ ಬೆಳೆಯುತ್ತದೆ. ಪರೀಕ್ಷೆಗಳಲ್ಲಿಪ್ರಬಂಧ ಬರೆಯಲು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಲು ಪತ್ರಿಕಾ ವಾಚನ ಬಲವಾದ ಅಡಿಪಾಯ ನೀಡುತ್ತದೆ. ವಿಕ ಓದು ನಂತಹ ಉಚಿತ ಹಾಗೂ ಉಪಯುಕ್ತ ಅಭಿಯಾನವನ್ನು ಯಾವುದೇ ವಿದ್ಯಾರ್ಥಿಯೂ ವ್ಯರ್ಥ ಮಾಡಿಕೊಳ್ಳದೆ ಪ್ರತಿದಿನ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಬಿಇಒ ಉಮಾದೇವಿ, ಕಳೆದ ಸಾಲಿನಲ್ಲಿಈ ಕಾಲೇಜಿನಿಂದ 62 ವಿದ್ಯಾರ್ಥಿನಿಯರು ಉತ್ತೀರ್ಣರಾಗಿ ಶೇಕಡಾ 100ರಷ್ಟು ಫಲಿತಾಂಶ ದಾಖಲಿಸಿದ್ದರು. ಅದೇ ರೀತಿ ಈ ಬಾರಿಯೂ ಉಪ ಪ್ರಾಂಶುಪಾಲರು ಹಾಗೂ ಬೋಧಕ ಸಿಬ್ಬಂದಿಯ ಕರ್ತವ್ಯ ನಿಷ್ಠೆಯಿಂದ ತಾಲೂಕಿಗೆ ಶೇಕಡಾ 100ರಷ್ಟು ಅತ್ಯುತ್ತಮ ಫಲಿತಾಂಶ ಬರಬೇಕು ಎಂದು ಆಶಯ ವ್ಯಕ್ತಪಡಿಸಿದರು.
ವಿಜಯ ಕರ್ನಾಟಕದ ವಿದ್ಯಾರ್ಥಿ ಸಂಚಿಕೆಗಳಲ್ಲಿಪ್ರಕಟವಾಗುವ ಗಣಿತ ಮತ್ತು ವಿಜ್ಞಾನ ವಿಷಯಗಳ ವಿಶೇಷ ಲೇಖನಗಳನ್ನು ಪ್ರತಿದಿನ ಸಂಗ್ರಹಿಸಿ ಬೋಧನೆಗೆ ಪೂರಕವಾಗಿ ಬಳಸಿಕೊಳ್ಳಬೇಕು. ಪ್ರತಿದಿನ ಬೆಳಗ್ಗೆ ಅಥವಾ ಸಂಜೆ ಒಂದು ನಿರ್ದಿಷ್ಟ ಸಮಯ ನಿಗದಿಪಡಿಸಿಕೊಂಡು ಈ ಸಂಚಿಕೆಗಳನ್ನು ಅಭ್ಯಾಸ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿಸ್ಪರ್ಧಾತ್ಮಕ ಮನೋಭಾವ ಹೆಚ್ಚಾಗುತ್ತದೆ ಹಾಗೂ ಪರೀಕ್ಷೆಗಳಲ್ಲಿಹೆಚ್ಚಿನ ಅಂಕ ಗಳಿಸಲು ನೆರವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿಶಾಲೆಯ ಮುಖ್ಯಶಿಕ್ಷಕಿ ಶಶಿವಧನ, ವಿಜಯ ಕರ್ನಾಟಕ ಬೆಂಗಳೂರು ಗ್ರಾಮಾಂತರ ಪ್ರಾದೇಶಿಕ ಆವೃತ್ತಿಯ ಸ್ಥಾನಿಕ ಸಂಪಾದಕ ಸೀತಾರಾಮ ಮಯ್ಯ, ಪ್ರಾದೇಶಿಕ ವ್ಯವಸ್ಥಾಪಕ ವಿನಯ್ ಕುಮಾರ್ , ಬೋಧಕ ಸಿಬ್ಬಂದಿ ಹಾಗೂ ನೂರಾರು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
=
ಫೋಟೋಕ್ಯಾಪ್ಷನ್ : ಕೋಲಾರದ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ(ಜೂನಿಯರ್ ಕಾಲೇಜು) ನಡೆದ ವಿಕ ಓದು ಅಭಿಯಾನಕ್ಕೆ ಜಿಪಂ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ಚಾಲನೆ ನೀಡಿದರು. ವಿದ್ಯಾರ್ಥಿ ಸಂಚಿಕೆ ಓದುವುದರಲ್ಲಿನಿರತರಾಗಿರುವ ಮಕ್ಕಳು. (28ಕೆಪಿಎಚ್ 3)