ರಾಜ್ಯ ಸರಕಾರದ ಅನುದಾನದ ಕಾಮಗಾರಿ ಉದ್ಘಾಟನೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ: ಕಾಂಗ್ರೆಸ್ ಮುಖಂಡರ ಆರೋಪ

Contributed bympadmanabha51@gmail.com|Vijaya Karnataka
allegations by congress leaders on breach of protocol in state government grant inauguration

ವಿಕ ಸುದ್ದಿಲೋಕ ಸುಳ್ಯ

ಮುಖ್ಯಮಂತ್ರಿ ಅವರ ಮೂಲ ಸೌಕರ್ಯ ಯೋಜನೆಯಡಿ ಸುಳ್ಯ ಕ್ಷೇತ್ರಕ್ಕೆ ಬಿಡುಗಡೆಯಾದ 25 ಕೋಟಿ ಅನುದಾನದಲ್ಲಿಆದ ಕಾಮಗಾರಿಗಳನ್ನು ಬಿಜೆಪಿ ಮುಖಂಡರನ್ನು ಮಾತ್ರ ಸೇರಿಸಿ, ಉಳಿದವರನ್ನು ಕಡೆಗಣಿಸಿ ಸುಳ್ಯ ಶಾಸಕರು ಉದ್ಘಾಟನೆ ಮಾಡುತ್ತಿರುವುದು ಶಿಷ್ಟಾಚಾರದ ಉಲ್ಲಂಘನೆ ಎಂದು ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಠಿಯಲ್ಲಿಆರೋಪಿಸಿದ್ದಾರೆ.

ಸುಳ್ಯ ಪ್ರೆಸ್ ಕ್ಲಬ್ ನಲ್ಲಿಸುದ್ದಿಗೋಷ್ಠಿಯಲ್ಲಿಮಾತನಾಡಿದ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ , ಕಾಯರ್ತೋಡಿ ದೇವಸ್ಥಾನದ ರಸ್ತೆ, ಜಯನಗರ ರಸ್ತೆ ಸೇರಿದಂತೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿಆದ ಕಾಮಗಾರಿಯನ್ನು ಶಾಸಕರು, ಬಿಜೆಪಿ ಅಧ್ಯಕ್ಷರು ಹಾಗೂ ಕಾರ್ಯಕರ್ತರನ್ನು ಮಾತ್ರ ಸೇರಿಸಿ ಉದ್ಘಾಟನೆ ಮಾಡಿದ್ದಾರೆ. ಕಾಂಗ್ರೆಸ್ ನ ನಿಗಮ ಮಂಡಳಿ ಅಥವಾ ಜವಾಬ್ದಾರಿಯುತರನ್ನು ಹಾಗೂ ಅಧಿಕಾರಿಗಳನ್ನು ಕರೆಯದೆ ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದ್ದಾರೆ. ಈ ಕುರಿತು ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು. ಅಲ್ಲದೆ ರಾಜ್ಯ ಸರಕಾರದ ಅನುದಾನದ ಕಾಮಗಾರಿಗೆ ಅಭಿನಂದನೆ ಸಲ್ಲಿಸಲು ಫ್ಲೆಕ್ಸ್ ಅಳವಡಿಸುವಾಗ ಅನುದಾನ ನೀಡಿದ ಮುಖ್ಯಮಂತ್ರಿಯ ಭಾವಚಿತ್ರವನ್ನೇ ಹಾಕದೆ ಬಿಜೆಪಿ ಮುಖಂಡರ ಚಿತ್ರ ಹಾಕಿ ಫ್ಲೆಕ್ಸ್ ಅಳವಡಿಸುವುದು ಖಂಡನೀಯ ಎಂದು ಅವರು ಹೇಳಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ, ಬಿಜೆಪಿಯವರು ಕೇಂದ್ರ ಸರಕಾರದಿಂದ ಅನುದಾನ ತರಿಸಿ ಕಾಮಗಾರಿ ಮಾಡಿಸಿ ಅವರೇ ಉದ್ಘಾಟಿಸಲಿ ಮತ್ತು ಫ್ಲೆಕ್ಸ್ ಅಳವಡಿಸಲಿ, ಅದು ಬಿಟ್ಟು ರಾಜ್ಯ ಸರಕಾರದ ಅನುದಾನದಲ್ಲಿಕ್ಷುಲ್ಲಕ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಮಾತ್ರ ಅನುದಾನ ನೀಡಿಲ್ಲ, ಸಮಗ್ರ ಕರ್ನಾಟಕದ ಅಭಿವೃದ್ಧಿಯ ದೃಷ್ಟಿಯಿಂದ ಎಲ್ಲಕ್ಷೇತ್ರಗಳಿಗೂ ಅನುದಾನ ನೀಡಿದ್ದಾರೆ. ಗ್ಯಾರಂಟಿ ಯೋಜನೆಯಿಂದ ಸುಳ್ಯ ತಾಲೂಕಿಗೆ ಮಾತ್ರ 243 ಕೋಟಿ ಬಂದಿದೆ. ಕೇಂದ್ರ ಸರಕಾರದಿಂದ ಸುಳ್ಯದ ಅಭಿವೃದ್ಧಿಗೆ ಎಷ್ಟು ಅನುದಾನ ಬಂದಿದೆ ಎಂಬುದನ್ನು ಬಿಜೆಪಿಗರು ಸ್ಪಷ್ಟ ಪಡಿಸಲಿ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿರಾಜಕೀಯ ಸಲ್ಲದು. ಜಿಲ್ಲಾಉಸ್ತುವಾರಿ ಸಚಿವರು ಬರುವುದಾಗಿ ತಿಳಿಸಿದ್ದರೂ ಅರಮನೆಗಯ ಸೇತುವೆಯ ಉದ್ಘಾಟನೆಯನ್ನು ಶಾಸಕರು ಮತ್ತು ಬಿಜೆಪಿಯವರು ಮಾತ್ರ ಉದ್ಘಾಟಿಸಿದ್ದಾರೆ. ಕಾಯರ್ತೋಡಿ ರಸ್ತೆ ಉದ್ಘಾಟನೆಗೆ ದಿನಾಂಕ ನಿಗದಿಪಡಿಸಲಾಗಿದ್ದರೂ ಒಂದು ದಿನದ ಮೊದಲೇ ಯಾರಿಗೂ ಹೇಳದೇ ಉದ್ಘಾಟಿಸಿದ್ದಾರೆ. ಇದು ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದರು. ಅಂತಾರಾಜ್ಯ ಸಂಪರ್ಕದ ಆಲೆಟ್ಟಿ-ಬಡ್ಡಡ್ಕ ರಸ್ತೆ ಅಭಿವೃದ್ಧಿ ಬೇಡಿಕೆ 40 ವರ್ಷಗಳಿಂದ ಇದೆ. ಈ ರಸ್ತೆಗೆ ಕಾಂಗ್ರೆಸ್ ಸರಕಾರ ಅನುದಾನ ನೀಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪಿ.ಸಿ.ಜಯರಾಮ, ಪಿ.ಎಸ್ .ಗಂಗಾಧರ, ಶಶಿಧರ ಎಂ.ಜೆ. ಉಪಸ್ಥಿತರಿದ್ದರು.