ವಿಕ ಸುದ್ದಿಲೋಕ ಬೆಂಗಳೂರು
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸುಳ್ಳು ಆರೋಪಗಳನ್ನು ಒಳಗೊಂಡ ವಿಡಿಯೊ ಹರಿಬಿಟ್ಟ ಸಂಬಂಧ ‘ಕುಮಾರಸ್ವಾಮಿ ಫಾರ್ ಸಿಎಂ’ ಹಾಗೂ ಜಾತ್ಯತೀತ ಜನತಾದಳ (ಜೆಡಿಎಸ್ ) ಪಕ್ಷದ ಸಾಮಾಜಿಕ ಜಾಲತಾಣ ನಿರ್ವಾಹಕರ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
ಜೆಡಿಎಸ್ ಪಕ್ಷದ ಫೇಸ್ ಬುಕ್ ಖಾತೆಯಲ್ಲಿಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಒಳಗೊಂಡ ವಿಡಿಯೊ ಹರಿಬಿಡಲಾಗಿತ್ತು. ಈ ಸಂಬಂಧ ಸಿ.ಆರ್ .ದೀಪು ಎಂಬ ವಕೀಲರು ನೀಡಿದ ದೂರು ಆಧರಿಸಿ ‘ಕುಮಾರಸ್ವಾಮಿ ಫಾರ್ ಸಿಎಂ’ ಹಾಗೂ ಜೆಡಿಎಸ್ ಪಕ್ಷದ ಸಾಮಾಜಿಕ ಜಾಲತಾಣ ಮಾಧ್ಯಮ ನಿರ್ವಾಹಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಫೇಸ್ ಬುಕ್ ಖಾತೆಯಲ್ಲಿ‘ಹಳೆ ಚಾಳಿ ಮತ್ತೆ ಶುರು, ಸುಟ್ಟರೂ ಹೋಗದ ಹುಟ್ಟು ಗುಣ’ ಎಂಬ ಶೀರ್ಷಿಕೆಯಡಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸುಳ್ಳು ಆರೋಪಗಳನ್ನು ಒಳಗೊಂಡ ವಿಡಿಯೊ ಪೋಸ್ಟ್ ಮಾಡಲಾಗಿದೆ. ಮಾನಹಾನಿಕರ, ಸುಳ್ಳು ಆರೋಪಗಳು ಹಾಗೂ ಅವಹೇಳನಕಾರಿ ವಿಷಯಗಳು ವಿಡಿಯೊದಲ್ಲಿವೆ ಎಂದು ದೀಪು ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿಆರೋಪಿಸಿದ್ದಾರೆ.

