ಕಾಮಗಾರಿ ಆರಂಭಿಸಲು ಜಿಲ್ಲಾಧಿಕಾರಿ ಸೂಚನೆ

Contributed byjayadev435@gmail.com|Vijaya Karnataka
state infrastructure projects district collectors instructions

ವಿಕ ಸುದ್ದಿಲೋಕ ಮೈಸೂರು

ಮುಖ್ಯಮಂತ್ರಿಗಳ ಮೂಲ ಸೌಕರ್ಯಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಶೇ.80ರಷ್ಟು ಅನುದಾನ ಬಿಡುಗಡೆಯಾಗಿರುತ್ತದೆ. ಕೆಲಸ ಚುರುಕುಗೊಳಿಸಿ ಕಾಮಗಾರಿ ಪ್ರಾರಂಭಿಸುವಂತೆ ಜಿಲ್ಲಾದಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ತಿಳಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಮುಖ್ಯಮಂತ್ರಿಗಳ ಮೂಲಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿ, ‘‘ಈಗಾಗಲೇ ಸರಕಾರದಿಂದ ಬಿಡುಗಡೆಯಾಗಿರುವ ಅನುದಾನವನ್ನು ಬಳಸಿ ಕಾಮಗಾರಿಗಳನ್ನು ಪೂರ್ಣಗೊಳಿಸದಿದ್ದಲ್ಲಿಹೊಸದಾಗಿ ಅನುದಾನ ನೀಡುವುದಿಲ್ಲ. ಅನುಷ್ಠಾನ ಎಂಜಿನಿಯರಿಂಗ್ ಇಲಾಖೆಗಳು ಕಾಮಗಾರಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು,’’ ಎಂದು ಹೇಳಿದರು.

‘‘ಮೈಸೂರು ಮಹಾಮಗರ ಪಾಲಿಕೆ ವ್ಯಾಪ್ತಿಯ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ18.75 ಕೋಟಿ ರೂ., ಚಾಮರಾಜ ವಿಧಾನಸಭಾ ಕ್ಷೇತ್ರದ 36.05 ಕೋಟಿ ರೂ. ಹಾಗೂ ನರಸಿಂಹ ರಾಜ ವಿಧಾನಸಭಾ ಕ್ಷೇತ್ರದ 35 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಈ ಯೋಜನೆಯಡಿ ಕೈಗೊಳ್ಳುತ್ತಿದ್ದು, ಬಾಕಿ ಇರುವ 7 ಪ್ಯಾಕೇಜ್ ಗಳ ಆಡಳಿತಾತ್ಮಕ ಅನುಮೋದನೆ ಪಡೆದು ಕಾಮಗಾರಿ ಪ್ರಾರಂಭಿಸಿ,’’ ಎಂದು ಸೂಚಿಸಿದರು.

‘‘ಕೆಆರ್ ಐಡಿಎಲ್ ಹಾಗೂ ನಿರ್ಮಿತಿ ಕೇಂದ್ರದವರಿಗೆ ನೀಡಲಾಗಿರುವ ಕೆಲಸಗಳಿಗೆ 15 ದಿನದೊಳಗೆ ಆಡಳಿತಾತ್ಮಕ ಅನುಮೋದನೆ ಪಡೆದು ಕೆಲಸಗಳನ್ನು ಪ್ರಾರಂಭಿಸಬೇಕು. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಮುಜರಾಯಿ ಸೇರಿದಂತೆ ಕಾಮಗಾರಿಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತೊಂದರೆ ಇದ್ದಲ್ಲಿಬಗೆಹರಿಸಿಕೊಂಡು ಕಾಮಗಾರಿ ಪ್ರಾರಂಭಿಸಿ,’’ ಎಂದು ಹೇಳಿದರು.

ಜಿಪಂ ಸಿಇಒ ಯುಕೇಶ್ ಕುಮಾರ್ , ಮೈಸೂರು ಮಹಾನಗರ ಪಾಲಿಕೆ ಅಧೀಕ್ಷಕ ಎಂಜಿನಿಯರ್ ಮಂಜು, ನಿರ್ಮಿತಿ ಕೇಂದ್ರದ ಪಿ.ಡಿ ಮಹೇಶ್ , ಇತರೆ ಅಧಿಕಾರಿಗಳು ಇದ್ದರು.