ವಿದ್ಯಾರ್ಥಿಯನ್ನು ಕಂಬಳಬೆಟ್ಟಿನ ಬದಲು ಕಬಕದಲ್ಲಿಇಳಿಸಿದ ಪ್ರಕರಣ ಬಸ್ ನಿರ್ವಾಹಕನ ಅಮಾನತಿಗೆ ಶಾಸಕ ಅಶೋಕ್ ರೈ ಸೂಚನೆ

Contributed byganeshaprasadapandelu@gmail.com|Vijaya Karnataka
bus conductor suspended for dropping student at kabak instead of kambala betta instructs mla ashok rai
ವಿಕ ಸುದ್ದಿಲೋಕ ವಿಟ್ಲ

ವಿಟ್ಲ- ಪುತ್ತೂರು ಬಸ್ ನಲ್ಲಿಬಂದ ಶಾಲಾ ವಿದ್ಯಾರ್ಥಿಯನ್ನು ಕಂಬಳಬೆಟ್ಟಿನ ಬದಲು ಕಬಕದಲ್ಲಿಇಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ನಿರ್ವಾಹಕ(ಕಂಡಕ್ಟರ್ ) ನನ್ನು ಅಮಾನತು ಮಾಡುವಂತೆ ಶಾಸಕ ಅಶೋಕ್ ಕುಮಾರ್ ರೈ ಸೂಚನೆ ನೀಡಿದ್ದಾರೆ.
ವಿಟ್ಲಶಾಲೆಯೊಂದರ ಆರನೇ ತರಗತಿಯ ಬಾಲಕ ಎಂದಿನಂತೆ ಶನಿವಾರ ಮಧ್ಯಾಹ್ನ ಶಾಲೆ ಮುಗಿಸಿ ಮನೆಗೆ ಮರಳಲು ವಿಟ್ಲಸಂತೆ ಮಾರುಕಟ್ಟೆ ಬಳಿ ಬಸ್ ಗಾಗಿ ಕಾಯುತ್ತಿದ್ದ. ಈ ವೇಳೆ ಕಾಸರಗೋಡು-ಧರ್ಮಸ್ಥಳ ಮಧ್ಯೆ ಸಂಚರಿಸುವ ಸರಕಾರಿ ಬಸ್ ಬಂದಿದ್ದು, ನಿರ್ವಾಹಕ ‘‘ಪುತ್ತೂರು.. ಪುತ್ತೂರು..’’ ಎಂದು ಕೂಗಿದ್ದರಿಂದ ಕಂಬಳಬೆಟ್ಟಿಗೆ ಹೋಗಬೇಕಾಗಿದ್ದ ಬಾಲಕ ಆ ಬಸ್ ಏರಿದ್ದ. ‘ಕಂಬಳಬೆಟ್ಟು’ ಎಂದು ಹೇಳಿ ಹಣ ನೀಡಿದ್ದು, ನಿರ್ವಾಹಕ ಆತನಿಗೆ ಕಬಕಕ್ಕೆ ಟಿಕೆಟ್ ನೀಡಿದ್ದ. ಬಾಲಕನಿಗೆ ಟಿಕೆಟ್ ನಲ್ಲಿಏನಿದೆ ಎಂದು ಗಮನಿಸಿಲ್ಲ. ಕಂಬಳಬೆಟ್ಟು ಬಳಿ ಬಾಲಕ ಇಳಿಯುವುದಕ್ಕಾಗಿ ನಿರ್ವಾಹಕನಲ್ಲಿವಿನಂತಿಸಿದಾಗ ಕಂಡಕ್ಟರ್ , ‘‘ಇಲ್ಲಿಸ್ಟಾಪ್ ಇಲ್ಲ, ಮುಂದಿನ ಸ್ಟಾಪ್ ಕಬಕದಲ್ಲಿ. ನೀನು ಅಲ್ಲೇ ಇಳಿಯಬೇಕು’’ ಎಂದು ಹೇಳಿದ್ದ. ಬಾಲಕ ಗೋಗರೆದರೂ ಕಬಕದಲ್ಲೇ ಆತನನ್ನು ಇಳಿಸಲಾಗಿತ್ತು. ಕಬಕ ನಿಲ್ದಾಣದಲ್ಲಿದಿಕ್ಕು ತೋಚದೆ, ಕಣ್ಣೀರು ಹಾಕುತ್ತಾ ಅರ್ಧ ಗಂಟೆಗೂ ಹೆಚ್ಚು ಕಾಲ ನಿಂತಿದ್ದ ಬಾಲಕನನ್ನು ಬಳಿಕ ಸ್ಥಳೀಯರು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿದ್ದರು. ಈ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.