‘‘ರೌಡಿ ನಿಗ್ರಹ ದಳದಿಂದ ವಲಯ ವ್ಯಾಪ್ತಿಯ ಬಳ್ಳಾರಿ 104, ವಿಜಯನಗರ 106, ರಾಯಚೂರು 103 ಮತ್ತು ಕೊಪ್ಪಳ ಜಿಲ್ಲೆಯ 68 ಸೇರಿ ಒಟ್ಟು 381 ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಲಾಗಿದೆ,’’ ಎಂದು ಬಳ್ಳಾರಿ ವಲಯ ಐಜಿಪಿ ಡಾ.ಪಿ.ಎಸ್ .ಹರ್ಷ ಹೇಳಿದರು.
ನಗರದ ಜಿಲ್ಲಾಪೊಲೀಸ್ ಕಚೇರಿಯಲ್ಲಿಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿಅವರು ಮಾತನಾಡಿದರು. ‘‘ರೌಡಿಗಳ ನಿಗ್ರಹಕ್ಕಾಗಿ 22 ತಂಡಗಳನ್ನು ರಚಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ644, ವಿಜಯನಗರ 633, ರಾಯಚೂರು 1053, ಕೊಪ್ಪಳ 954 ಸೇರಿ ಒಟ್ಟು 3814 ರೌಡಿಗಳಿದ್ದಾರೆ. 13 ರೌಡಿಗಳು ಮೃತಪಟ್ಟಿದ್ದಾರೆ. ಬಳ್ಳಾರಿ 126, ವಿಜಯನಗರ 71, ರಾಯಚೂರು 100, ಕೊಪ್ಪಳ 80 ರೌಡಿಗಳ ವಿರುದ್ಧ ಕೊಲೆ ಕೇಸ್ ಪ್ರಕರಣಗಳಿವೆ. ಗಡಿಪಾರಿಗೆ ಸಂಬಂಧಿಸಿದಂತೆ 53 ರೌಡಿಶೀಟರ್ ಗಳ ಅರ್ಜಿಗಳು ಪರಿಶೀಲನೆ ಹಂತದಲ್ಲಿವೆ. 10 ಜನರ ಗಡಿಪಾರಿಗೆ ಆದೇಶಿಸಲಾಗಿದೆ. ಬಳ್ಳಾರಿ 13, ವಿಜಯನಗರ 6, ರಾಯಚೂರು 10, ಕೊಪ್ಪಳ 19 ಸೇರಿ ಒಟ್ಟು 48 ರೌಡಿಶೀಟರ್ ಗಳು ಜೈಲಿನಲ್ಲಿದ್ದಾರೆ,’’ ಎಂದರು.
‘‘ರೌಡಿಗಳ ಮಾಹಿತಿ ಸಂಗ್ರಹ, ಕಾನೂನುಬಾಹಿರ ಚಟುವಟಿಕೆಗಳಲ್ಲಿತೊಡಗಿಸಿಕೊಂಡಿರುವ ಕುರಿತು ಪರಿಶೀಲನೆ, ಆಯುಧಗಳನ್ನು ಇಟ್ಟಿರುವುದು, ಬೇನಾಮಿ ಆಸ್ತಿ, ಬಳಸುವ ವಾಹನ ಸೇರಿ ನಾನಾ ಮಾಹಿತಿ ಸಂಗ್ರಹಿಸಲಾಗಿದೆ. ಬಳ್ಳಾರಿಯ ರೌಡಿಶೀಟರ್ ಅಂದ್ರಾಳು ಸೀತಾರಾಮ ಮನೆಯಲ್ಲಿಏರ್ ಗನ್ , ಸ್ಟ್ಯಾಂಪ್ ಪೇಪರ್ , ಪ್ರಾಮಿಸರಿ ನೋಟ್ ಸಿಕ್ಕಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ರೌಡಿಗಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶದೊಂದಿಗೆ ನಿಗ್ರಹ ದಳ ರಚಿಸಲಾಗಿದೆ. ಇಲಾಖೆಯ ಸಿಬ್ಬಂದಿ ರೌಡಿಶೀಟರ್ ಗಳ ಸಂಪರ್ಕ ಹೊಂದಿದ್ದರೆ ಅಂಥವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ,’’ ಎಂದು ಎಚ್ಚರಿಸಿದರು.
ಈ ವೇಳೆ ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್ , ಎಎಸ್ ಪಿ ನವೀನ್ ಕುಮಾರ್ ಇದ್ದರು.