ಚಿತ್ರದುರ್ಗ: ಶಸ್ತ್ರಚಿಕಿತ್ಸೆ ಮಾಡಿಸಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿ ಸಹಾಯಧನ ಪಡೆಯಲೆತ್ನಿಸಿದ ಆಪಾದಿತನಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ, ಒಂದನೇ ಅಪರ ಹಿರಿಯ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಧೀಶೆ ಎಸ್ .ಶಕುಂತಲಾ ಶುಕ್ರವಾರ ತೀರ್ಪು ನೀಡಿದ್ದಾರೆ.ಹಿರಿಯೂರು ತಾಲೂಕಿನ ದಾಸರಮಾಳಿಗೆ ವಾಸಿ ತಿಪ್ಪೇಸ್ವಾಮಿ ಶಿಕ್ಷೆಗೊಳಗಾದವ. ಚಿತ್ರದುರ್ಗ ನಗರಸಭೆಯ 2012-13ನೇ ಸಾಲಿನ ಎಸ್ ಎಫ್ ಸಿ ಶೇ.3ರ ಯೋಜನೆಯಡಿ ವಿಕಲಚೇತನರಿಗೆ ಶಸ್ತ್ರಚಿಕಿತ್ಸೆಗಾಗಿ ನೀಡಲಾಗುವ 25 ಸಾವಿರ ಸಹಾಯಧನ ಪಡೆಯಲು ಬಳ್ಳಾರಿಯ ದಾನಮ್ಮ ಸೂಪರ್ ಸ್ಪೆಷಾಲಿಸ್ಟ್ ಹಾಸ್ಪಿಟಲ್ ನಿಂದ ಚಿಕಿತ್ಸೆ ಮಾಡಿಸಿಕೊಂಡಿರುವುದಾಗಿ ಆಸ್ಪತ್ರೆಯ ನಕಲಿ ಲೆಟರ್ ಹೆಡ್ ದಾಖಲೆ ತಯಾರಿಸಿ, ವೈದ್ಯರ ಸಹಿ ಫೋರ್ಜರಿ ಮಾಡಿ, ಚಿಕಿತ್ಸೆಯ ವೆಚ್ಚ 50 ಸಾವಿರ ನಮೂದಿಸಿ, ಚಿತ್ರದುರ್ಗ ನಗರಸಭೆಯಿಂದ ನೀಡಲಾಗುವ ಸಹಾಯಧನ 25 ಸಾವಿರ ಪಡೆಯಲು ಪ್ರಯತ್ನಿಸಿರುತ್ತಾರೆ. ಸದರಿ ಆದೇಶದಂತೆ ನಗರ ಪೊಲೀಸರು ಆರೋಪಿತನ ವಿರುದ್ಧ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಎಚ್ .ಗುರುಮೂರ್ತಿ ವಾದ ಮಂಡಿಸಿದ್ದಾರೆ.