ಸಂತ್ರಸ್ತೆ ಬೇರೊಬ್ಬರನ್ನು ಮದುವೆಯಾಗಿದ್ದಾರೆಂದು ಪೋಕ್ಸೊ ಕೇಸ್ ರದ್ದು ಅಸಾಧ್ಯ: ಹೈಕೋರ್ಟ್

Contributed bysrikanth.g@timesgroup.com|Vijaya Karnataka
it is impossible to dismiss the pocso case just because the victim has married someone else high court
ವಿಕ ಸುದ್ದಿಲೋಕ ಬೆಂಗಳೂರು

ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿಸಂತ್ರಸ್ತೆಯು ಬೇರೊಬ್ಬರನ್ನು ಮದುವೆಯಾಗಿದ್ದಾರೆಂಬ ಕಾರಣಕ್ಕೆ ಆರೋಪಿ ವಿರುದ್ಧ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣಾ ಕಾಯಿದೆ (ಪೋಕ್ಸೊ)ಅಡಿಯಲ್ಲಿದಾಖಲಾದ ಪ್ರಕರಣ ರದ್ದುಪಡಿಸಲಾಗದು ಎಂದು ಹೈಕೋರ್ಟ್ ಮೌಖಿಕವಾಗಿ ಹೇಳಿದೆ.
ಸಂತ್ರಸ್ತೆ ಬೇರೊಬ್ಬನನ್ನು ಮದುವೆಯಾಗಿದ್ದಾರೆ ಮತ್ತು ಪ್ರಕರಣದ ಸಹ ಆರೋಪಿಗಳು ಖುಲಾಸೆಯಾಗಿದ್ದಾರೆಂಬ ಕಾರಣಕ್ಕೆ ಪೋಕ್ಸೊ ಕಾಯಿದೆಯಡಿ ತನ್ನ ವಿರುದ್ಧದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ದೇವನಹಳ್ಳಿ ತಾಲೂಕಿನ ನಿವಾಸಿ ಪಾಲಾಕ್ಷ ಕುಮಾರ್ ಸಲ್ಲಿಸಿದ್ದ ಅರ್ಜಿಯು ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ನ್ಯಾಯಾಲಯ ಪ್ರಕರಣ ರದ್ದುಗೊಳಿಸಲಾಗದೆಂದು ಮೌಖಿಕ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಂತೆಯೇ ಅರ್ಜಿದಾರರ ಪರ ವಕೀಲರು ನ್ಯಾಯಾಲಯದಿಂದ ಅರ್ಜಿ ವಾಪಸ್ ಪಡೆಯುವುದಾಗಿ ತಿಳಿಸಿದರು. ಅದಕ್ಕೆ ಸಮ್ಮತಿಸಿದ ನ್ಯಾಯಪೀಠ, ಅರ್ಜಿ ಹಿಂಪಡೆಯಲು ಒಪ್ಪಿಗೆ ನೀಡಿ ಆದೇಶ ಹೊರಡಿಸಿತು.

=================ಸಾಕು==============

ಅರ್ಜಿ ವಿಚಾರಣೆಗೆ ಬರುತ್ತಿದ್ದಂತೆ ನ್ಯಾಯಮೂರ್ತಿಗಳು ಅರ್ಜಿದಾರರ ಪರ ವಕೀಲರನ್ನು ಉದ್ದೇಶಿಸಿ ‘‘ಅರ್ಜಿದಾರರು ಪ್ರಕರಣದಲ್ಲಿಮೊದಲನೇ ಆರೋಪಿಯಾಗಿದ್ದಾನೆ. ಪ್ರಕರಣದ ಇತರೆ ಆರೋಪಿಗಳು ಖುಲಾಸೆಯಾಗಿದ್ದಾರೆಂದರೆ, ಆ ಆದೇಶ ಅರ್ಜಿದಾರನಿಗೆ ಹೇಗೆ ಅನ್ವಯಿಸುತ್ತದೆ?,’’ ಎಂದು ಪ್ರಶ್ನಿಸಿದರು.

ಅರ್ಜಿದಾರನ ಪರ ವಕೀಲ, ‘‘ಸಂತ್ರಸ್ತೆ ರಾಜೀ ಸಂಧಾನ ಮೂಲಕ ಪ್ರಕರಣವನ್ನು ಬಗೆಹರಿಸಿಕೊಳ್ಳಲು ಸಿದ್ಧರಿದ್ದಾರೆ,’’ ಎಂದು ಹೇಳಿದರು. ಆಗ ನ್ಯಾಯಪೀಠ, ‘‘ಸಂತ್ರಸ್ತೆ ಅರ್ಜಿದಾರನನ್ನು ಮದುವೆಯಾಗಿದ್ದಾರೆಯೇ? ಇಲ್ಲವಲ್ಲಾ. ಸಂತ್ರಸ್ತೆ ಬೇರೊಬ್ಬರನ್ನು ಮದುವೆಯಾದರೆ ಅರ್ಜಿದಾರನ ಮೇಲಿನ ಆರೋಪ ಹೇಗೆ ಅಳಿಸಿ ಹೋಗುತ್ತದೆ,’’ ಎಂದು ಪ್ರಶ್ನಿಸಿತು.

ಅಲ್ಲದೆ, ‘‘ಅರ್ಜಿದಾರ ಮೊದಲನೇ ಆರೋಪಿಯಾಗಿದ್ದಾನೆ. ಆತನ ಮೇಲೆ ಪೋಕ್ಸೊ ಕಾಯಿದೆಯ ಸೆಕ್ಷನ್ 3 ಮತ್ತು 4ರಡಿ ಲೈಂಗಿಕ ದೌರ್ಜನ್ಯ ಅಪರಾಧದ ಆರೋಪಗಳಿವೆ. ಪ್ರಕರಣದ ಆರೋಪಿಗಳು ಖುಲಾಸೆಯಾದರೆಂದು ಅರ್ಜಿದಾರ ಖುಲಾಸೆಯಾಗಲ್ಲ. ಹೋಗಿ ವಿಚಾರಣೆ ಎದುರಿಸಿ,’’ ಎಂದು ನ್ಯಾಯಪೀಠ ತಾಕೀತು ಮಾಡಿತು.

ಅದಕ್ಕೆ ಸಂತ್ರಸ್ತೆ ಮದುವೆಯಾಗಿದ್ದಾರೆಂದು ವಾದ ಮಂಡಿಸುತ್ತಿದ್ದ ಅರ್ಜಿದಾರ ಪರ ವಕೀಲರನ್ನು ತಡೆದ ನ್ಯಾಯಮೂರ್ತಿ, ‘‘ಸಂತ್ರಸ್ತೆ ಬೇರೊಬ್ಬರನ್ನು ಮದುವೆಯಾಗಿದ್ದಾರೆಂದ ಮಾತ್ರಕ್ಕೆ ಅರ್ಜಿದಾರರ ಮೇಲಿನ ಅಪರಾಧಗಳು ಅಳಿಸಿ ಹೋಗುವುದಿಲ್ಲ. ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣ ರದ್ದಾಗುವುದಿಲ್ಲ. ಪ್ರಕರಣ ರಾಜೀ ಮಾಡಲಾಗದು. ಅರ್ಜಿ ವಜಾಗೊಳಿಸಲಾಗುವುದು. ಯಾವುದೇ ಕಾರಣಕ್ಕೂ ಅರ್ಜಿದಾರ ವಿರುದ್ಧದ ಪ್ರಕರಣ ರದ್ದುಪಡಿಸಲಾಗದು,’’ ಎಂದು ಆದೇಶ ಬರೆಸಲು ಮುಂದಾದರು. ಆಗ ಅರ್ಜಿದಾರರ ವಕೀಲರು ಅರ್ಜಿ ವಾಪಸ್ ಪಡೆದರು.