ವಿಕ ಸುದ್ದಿಲೋಕ ಲಿಂಗಸುಗೂರು ‘‘ಕಳೆದ 40 ವರ್ಷಗಳಿಂದ ಗುತ್ತಿಗೆದಾರ ಕೆಲಸ ಮಾಡುತ್ತಿದ್ದು, 3 ವರ್ಷಗಳಿಂದ ಬಿಸಿನೆಸ್ ಬಂದ್ ಮಾಡಿ ಕುಳಿತಿದ್ದೇನೆ. ನಮ್ಮ ಕಂಪನಿಗೆ ಬರಬೇಕಾದ 750 ಕೋಟಿ ರೂ. ಬಿಲ್ ಪಾವತಿ ಆಗಿಲ್ಲ. ಬದಲಿಗೆ ಸರಕಾರ 172 ಕೋಟಿ ರೂ. ರಿಕವರಿ ಮಾಡಿದೆ. ಇಂಥವರಿಗೆ ನಾನು ಅಡ್ಡ ಮತದಾನ ಮಾಡಲೇ?,’’ ಎಂದು ಶಾಸಕ ಮಾನಪ್ಪ ವಜ್ಜಲ್ ಪ್ರಶ್ನಿಸಿದರು.
ಇಲ್ಲಿನ ತಾಲೂಕು ಪಂಚಾಯಿತಿ ಆವರಣದ ಶಾಸಕರ ಕಚೇರಿಯಲ್ಲಿಸೋಮವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘‘ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷದ ಆದೇಶ ಪಾಲಿಸುವುದು ನನ್ನ ಧರ್ಮ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಸರಕಾರ ಅನುದಾನ ನೀಡುತ್ತಿಲ್ಲ. ಬದಲಿಗೆ ವ್ಯವಹಾರ ಬಂದ್ ಮಾಡಿ ನೂರಾರು ಕೋಟಿ ರೂ. ನಷ್ಟ ಅನುಭವಿಸಿದ್ದೇನೆ. ಇಂಥಹ ಪಕ್ಷಕ್ಕೆ ನಾನು ಅಡ್ಡ ಮತದಾನ ಮಾಡುವುದು ಸಾಧ್ಯವೇ ಇಲ್ಲ. ಅಡ್ಡ ಮತದಾನ ಮಾಡಿರುವುದಾಗಿ ಯಾವುದೋ ಪುಣ್ಯಾತ್ಮ ಹೇಳುತ್ತಿರುವುದು ಕೇವಲ ಊಹಾಪೋಹವಾಗಿದ್ದು, ಸಾಬೀತು ಪಡಿಸಿದರೆ, ನಾನು ರಾಜಕೀಯ ನಿವೃತ್ತಿ ಪಡೆದು, ಪಕ್ಷದ ಕಚೇರಿಯಲ್ಲಿಕಸಗುಡಿಸಿಕೊಂಡು ಇರುತ್ತೇನೆ,’’ ಎಂದು ಸವಾಲು ಹಾಕಿದರು.
‘‘ಆರ್ ಎಸ್ ಎಸ್ ಸಂಘಟನೆ ಹುಟ್ಟಿ ಶತಮಾನವಾಗಿದೆ. ಇದರ ಬಗ್ಗೆ ಖರ್ಗೆಯವರು ವಿನಾಕಾರಣ ಮಾತನಾಡುತ್ತಿದ್ದಾರೆ. ದೇಶದಲ್ಲಿಪ್ರಚಾರ ಗಿಟ್ಟಿಸಲು ಇದೊಂದು ಗಿಮಿಕ್ ಮಾಡುತ್ತಿದ್ದಾರೆ. ಅವರಿಗೆ ಸಂಘಟನೆಯ ಹಿರಿಯರು ತಕ್ಕ ಉತ್ತರ ನೀಡಿದ್ದಾರೆ. ರಾಜ್ಯದ ಅಭಿವೃದ್ಧಿಯತ್ತ ಗೃಹಮಂತ್ರಿ ಗಮನ ಕೊಡಬೇಕು,’’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕುರಿತು ಮಾತನಾಡಿದರು.
ಮುಖಂಡರಾದ ಗಿರಿಮಲ್ಲನಗೌಡ, ವೆಂಕನಗೌಡ ಐದನಾಳ, ಯಂಕನಗೌಡ, ಸಂಗಣ್ಣ ಗುಂತಗೋಳ, ಶರಣಪ್ಪ, ಅಮರೇಶ ಸೇರಿ ಇತರರು ಇದ್ದರು.