ಟ್ರಾಮಾ ಬಾಂಡಿಂಗ್ ಎಂಬ ಭಾವನೆಗಳ ಸುಳಿ
ಇಂಟ್ರೊ
ಭಾವನಾತ್ಮಕ ಬಂಧಗಳ ಸ್ವರೂಪ ಬಹು ಸಂಕೀರ್ಣವಾದದ್ದು. ನಿರಂತರ ನಿಯಂತ್ರಣ, ಮ್ಯಾನಿಪುಲೇಷನ್ ಅಥವಾ ಹಾನಿಯ ನಡುವೆಯೇ ದಕ್ಕುವ ಅಷ್ಟಿಷ್ಟು ಪ್ರೀತಿ, ಕಾಳಜಿಗಳು ತನ್ನನ್ನು ನೋಯಿಸುವ ವ್ಯಕ್ತಿಯೊಂದಿಗೇ ಭಾವನಾತ್ಮಕವಾಗಿ ಬೆಸೆಯುವಂತೆ ಪ್ರೇರೇಪಿಸುತ್ತದೆ. ಇದುವೇ ಟ್ರಾಮಾ ಬಾಂಡಿಂಗ್ .
ಸುಷ್ಮಾ ಸಿಂಧು
ಆ ಸಂಬಂಧ ತೀವ್ರ ನೋವು, ಕಿರಿಕಿರಿಯುಂಟು ಮಾಡುತ್ತಿದ್ದರೂ ಆಕೆ ಅದರಿಂದ ಕಳಚಿಕೊಳ್ಳಲೊಲ್ಲಳು, ಅವನು ಮಾನಸಿಕವಾಗಿ ಜರ್ಜರಿತನಾಗಿದ್ದರೂ ಅದೇ ವ್ಯಕ್ತಿಯ ನಂಟು ಬಿಡನು. ಹೊರಗಿನಿಂದ ನೋಡಿದವರಿಗೆ ‘ಇವರೇಕೆ ಈ ವ್ಯರ್ಥ ಸಂಬಂಧದಿಂದ ಹೊರಬರಲಾರರು?’ ಎನ್ನುವ ಗೊಂದಲವೂ ಅದಕ್ಕೆ ಸುಲಭ ಪರಿಹಾರ ಗೋಚರಿಸಿದರೂ ಅವರು ಮಾತ್ರ ಹಿಂಸಾತ್ಮಕ ಬಂಧಗಳ ಬೆನ್ನು ಬಿಡರು. ಸಿಲುಕಿದವರ ಪಾಲಿಗೆ ಸಂಬಂಧಗಳ ಲೆಕ್ಕಾಚಾರ ಅಷ್ಟು ಸರಳವಾಗಿರದು. ಈ ಭಾವನಾತ್ಮಕ ಬಂಧಗಳ ಸುಳಿಯೇ ಟ್ರಾಮಾ ಬಾಂಡ್ರಿಂಗ್ . ಈ ರೀತಿಯ ಸಂಬಂಧದಲ್ಲಿಪ್ರೀತಿ ಮತ್ತು ನೋವುಗಳೆರಡೂ ಏಕಕಾಲದಲ್ಲಿಇರುತ್ತವೆ. ಹಾಗೂ ಇದು ಶೋಷಿತ ವ್ಯಕ್ತಿ ಬಂಧದ ಅಂಟಿನಿಂದ ಆಚೆ ಸರಿಯದಂತೆ ತಡೆಯೊಡ್ಡುತ್ತದೆ.
ಶೋಷಣೆಯ ನಂತರದ ಪ್ರೀತಿ
ಟ್ರಾಮಾ ಬಾಂಡಿಂಗ್ ಉಂಟಾಗುವುದು ದೌರ್ಜನ್ಯ ಮತ್ತು ಅದರ ನಂತರ ಬರುವ ಪ್ರೀತಿ, ಕ್ಷಮೆ ಅಥವಾ ಒಳ್ಳೆಯ ವರ್ತನೆಗಳ ಪುನರಾವರ್ತಿತ ವರ್ತುಲದಿಂದ. ಉದಾಹರಣೆಗೆ ಪೀಡಕ ಪತಿ ತನ್ನ ಸಂಗಾತಿಗೆ ನೋವುಂಟು ಮಾಡಿದ ಮರುಕ್ಷಣವೇ ‘ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ, ಕ್ಷಮಿಸು. ಈ ರೀತಿ ಮತ್ತೆ ಆಗುವುದಿಲ್ಲ’ ಎನ್ನುತ್ತಾ ಪ್ರೇಮದೊಡನೆ ಸುರಕ್ಷಿತ ಭಾವವನ್ನು ಪುನಃ ನೀಡಬಹುದು. ಆದರೆ ಇದು ಇಷ್ಟಕ್ಕೇ ನಿಲ್ಲದೇ ನೋವು, ಕ್ಷಮೆ, ಪ್ರೀತಿಗಳ ವರ್ತುಲ ಪುನರಾರಂಭವಾಗುತ್ತದೆ. ಕೆಲವೊಮ್ಮೆ ತುಂಬಾ ಲಕ್ಷ್ಯ, ಮತ್ತೊಮ್ಮೆ ತೀವ್ರ ನಿರ್ಲಕ್ಷ್ಯ! ಮನೋವಿಜ್ಞಾನದ ಪ್ರಕಾರ ಸಂಬಂಧಗಳಲ್ಲಿನಿರಂತರ ಸಿಗುವ ಗಮನ, ಕಾಳಜಿಗಿಂತ ಆಗೀಗ ಮಾತ್ರ ಲಭ್ಯವಾಗುವ ವಿಪರೀತ ಅಕ್ಕರಾಸ್ಥೆ ಕೆಲವರಲ್ಲಿಹೆಚ್ಚು ಬಲವಾದ ಆಕರ್ಷಣೆ ಉಂಟುಮಾಡುತ್ತದೆ. ಆದರೆ ಹೀಗೆ ತಿರಸ್ಕಾರದ ಮರುಗಳಿಗೆ ಸುರಿಮಳೆಯಾಗುವ ಅತಿ ಪ್ರೀತಿ ಮೋಡಿ ಮಾಡಿ ಮನಸ್ಸೆಳೆಯುವ ಜೊತೆಗೆ ವ್ಯಸನಕಾರಿಯೂ ಆಗಬಹುದು. ಅನಿಶ್ಚಿತತೆಯೇ ಬಾಂಧವ್ಯವನ್ನು ಬಲಪಡಿಸಬಹುದು. ಸಾಮಾನ್ಯವಾಗಿ ದಾಂಪತ್ಯ/ಪ್ರೇಮ ಸಂಬಂಧಗಳಲ್ಲಿಚರ್ಚೆಯಾಗುವ ಟ್ರಾಮಾ ಬಾಂಡಿಂಗ್ ಸ್ನೇಹಿತರು, ಪೋಷಕರು-ಮಕ್ಕಳು, ವೃತ್ತಿವಲಯಗಳಲ್ಲಿಯೂ ಉಂಟಾಗಬಹುದು.
ಸೂಚನೆ ಅರಿಯಿರಿ
ನೋವು ಉಂಟುಮಾಡುವ ಸಂಬಂಧಕ್ಕೆ ಮತ್ತೆ ಮತ್ತೆ ಮರಳುವುದು, ಸಂಬಂಧ ಆರೋಗ್ಯಕರವಾಗಿಲ್ಲಎಂಬುದು ಗೊತ್ತಿದ್ದರೂ ಹೊರಬರಲು ಕಷ್ಟವಾಗುವುದು, ಪೀಡಿತ ವ್ಯಕ್ತಿ ಇತರರ ಮುಂದೆ ದೌರ್ಜನ್ಯ ಮಾಡುವ ವ್ಯಕ್ತಿಯ ವರ್ತನೆಯನ್ನು ಸಮರ್ಥಿಸಿಕೊಳ್ಳುವುದು, ಕುಟುಂಬ/ಸ್ನೇಹಿತರ ಬಳಿ ನಿಜವನ್ನು ಮರೆಮಾಡುವುದು ಅಥವಾ ಅವರಿಂದ ದೂರಾಗುವುದು, ಪೀಡಿಸುವ ವ್ಯಕ್ತಿ ಬದಲಾಗುತ್ತಾರೆ ಎಂಬ ನಿರಂತರ ನಿರೀಕ್ಷೆ, ನೋವಿನ ಅನುಭವಗಳ ನಂತರವೂ ಅವರನ್ನು ಬಹಳ ಮಿಸ್ ಮಾಡಿಕೊಳ್ಳುವುದು ಇತ್ಯಾದಿ ಟ್ರಾಮಾ ಬಾಂಡಿಂಗ್ ನ ಸೂಚನೆಗಳಾಗಿವೆ.
ಲೇಖಕಿ ಮನಃಶಾಸ್ತ್ರಜ್ಞೆ
ಬಾಕ್ಸ್
ಟ್ರಾಮಾ ಬಾಂಡಿಂಗ್ ಬೆಳೆಯಲು ಕಾರಣ
ಕಳೆದುಕೊಳ್ಳುವ ಭಯ: ಬಿಟ್ಟು ಹೋದರೆ ತಾವೊಬ್ಬರೇ ಇರಲಾಗದು ಎನ್ನುವ ಭಯ ಆ ಸಂಬಂಧದಲ್ಲೇ ಉಳಿಯುವಂತೆ ಮಾಡಬಹುದು.
ಅತಿ ಆತ್ಮೀಯತೆ: ಹಿಂಸೆ ಮಾಡುವ ವ್ಯಕ್ತಿ ನಂತರದಲ್ಲಿತೋರುವ ಅಪಾರ ಕಾಳಜಿ, ಶೋಷಿತರೊಳಗಿರುವ ಸುರಕ್ಷಿತ ಭಾವವನ್ನು ದುರ್ಬಲಗೊಳಿಸುವುದರಿಂದ ಪುನಃ ಹಿಂಸೆ ಆರಂಭವಾದರೂ ಸಂಬಂಧದಿಂದ ಹೊರಬರಲು ಕಷ್ಟವಾಗಬಹುದು.
ಪ್ರತ್ಯೇಕತೆ: ಶೋಷಕರು ನಿಧಾನವಾಗಿ ಶೋಷಿತರನ್ನು ಸ್ನೇಹಿತರು, ಕುಟುಂಬದವರು ಅಥವಾ ಸಹೋದ್ಯೋಗಿಗಳಿಂದ ದೂರಮಾಡಿ ಭಾವನಾತ್ಮಕ ಮತ್ತು ಸಾಮಾಜಿಕ ಅಗತ್ಯಗಳಿಗೆ ಸಂಪೂರ್ಣ ತನ್ನ ಮೇಲೆ ಅವಲಂಬಿತವಾಗುವಂತೆ ನಿಯಂತ್ರಿಸುವುದರಿಂದ ಅವರ ದೃಷ್ಟಿಕೋನ ಸೀಮಿತವಾಗುತ್ತಾ ಹಿಂಸೆ ಸಹಿಸುವ ಅಭ್ಯಾಸ ಬೆಳೆಯಬಹುದು.
ಆತ್ಮವಿಶ್ವಾಸದ ಕೊರತೆ: ಬಾಲ್ಯದಲ್ಲಿಬೆಳೆದ ಅಭದ್ರ ಭಾವನೆ, ಆತ್ಮವಿಶ್ವಾಸದ ಕೊರತೆ, ಕುಟುಂಬ-ಸಮಾಜದ ಅಭಿಪ್ರಾಯ ಅಥವಾ ಆರ್ಥಿಕ ಕಾರಣಗಳಿಂದ ಕೆಲವರು ಸಂಬಂಧದಲ್ಲೇ ಉಳಿಯಬಹುದು.

