ಶಬರಿಮಲೆಯಲ್ಲಿದಟ್ಟಣೆ ನಿಯಂತ್ರಣಕ್ಕೆ ಎಐ ಬಳಕೆ

Contributed byajithswarga@gmail.com|Vijaya Karnataka
ai control of devotee congestion in sabarimala
ಮಂಡಲ ತೀರ್ಥಯಾತ್ರೆ ಋುತುವಿನಿಂದ ವ್ಯವಸ್ಥೆ ಜಾರಿ | ಆಗಸ್ಟ್ 15ರೊಳಗೆ ಕರಾರು ವ್ಯವಸ್ಥೆ

ಪತ್ತನಂತಿಟ್ಟ: ಶಬರಿಮಲೆಯಲ್ಲಿ ಭಕ್ತರ ದಟ್ಟಣೆ ನಿಯಂತ್ರಣಕ್ಕೆ ಈ ವರ್ಷ ಮಂಡಲ ತೀರ್ಥಯಾತ್ರೆ ಋುತುವಿನಿಂದ ಕೃತಕ ಬುದ್ಧಿಮತ್ತೆ (ಎಐ) ಬಳಸಲಾಗುವುದು. ಈ ವ್ಯವಸ್ಥೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆಗಸ್ಟ್ 15ರೊಳಗೆ ಒಪ್ಪಂದ ಪತ್ರ ಮಾಡಿಕೊಳ್ಳಲಾಗುವುದು ಎಂದು ತಿರುವಿದಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷ ಕೆ. ಜಯಕುಮಾರ್ ತಿಳಿಸಿದ್ದಾರೆ.
ಪರಿಣಿತ ಮೂರು ಕಂಪನಿಗಳು ಎಐ ತಂತ್ರಜ್ಞಾನಗಳನ್ನು ಟಿಡಿಬಿ ಮತ್ತು ಪೊಲೀಸ್ ಅಧಿಕಾರಿಗಳ ಮುಂದೆ ಪ್ರಸ್ತುತಪಡಿಸಿವೆ. ಈ ಮಂಡಲ ಋುತುವಿನಿಂದ ಪ್ರಾಯೋಗಿಕ ಆಧಾರದ ಮೇಲೆ ಜಾರಿಗೆ ಬರಲಿರುವ ಈ ಯೋಜನೆಯನ್ನು ಅಗತ್ಯದ ಬದಲಾವಣೆಗಳ ಮೂಲಕ ಸುಧಾರಿಸಲಾಗುವುದು.

ಎಐ ವ್ಯವಸ್ಥೆಯನ್ನು ಬಳಸಿಕೊಂಡು ಕೇಂದ್ರೀಕೃತ ನಿಯಂತ್ರಣ ಕೊಠಡಿಯ ಮೂಲಕ ನಿಲಕ್ಕಲ್ , ಪಂಪಾ, ಮರಕ್ಕೂಟಂ ಮತ್ತು ಸನ್ನಿಧಾನದಲ್ಲಿಭಕ್ತರ ದಟ್ಟಣೆ ನಿಯಂತ್ರಿಸುವ ಗುರಿ ಹೊಂದಲಾಗಿದೆ. ಅಸ್ತಿತ್ವದಲ್ಲಿರುವ ಆನ್ ಲೈನ್ ಸರದಿ ವ್ಯವಸ್ಥೆಯನ್ನು ಇದರೊಂದಿಗೆ ಸಂಪರ್ಕಿಸಲಾಗುವುದು.

ಪ್ರತಿ ವಲಯಗಳಲ್ಲಿ ದಟ್ಟಣೆ ನಿರೀಕ್ಷಣೆ ಮತ್ತು ನಿಯಂತ್ರಣ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ವೃಥಾ ಅಡ್ಡಾಡುತ್ತಿರುವವರನ್ನು ಪತ್ತೆಹಚ್ಚುವುದು, ಭಕ್ತರ ಆರೋಗ್ಯ ಸ್ಥಿತಿಯ ಮೇಲ್ವಿಚಾರಣೆ, ತ್ಯಾಜ್ಯ ನಿಯಂತ್ರಣೆ, ಕುಡಿಯುವ ನೀರಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಭಕ್ತರಿಗೆ ಸಂದೇಶಗಳನ್ನು ಕಳುಹಿಸುವಂತಹ ವಿಷಯಗಳಿಗೆ ಎಐ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದು ಎಂದು ಕೆ. ಜಯಕುಮಾರ್ ತಿಳಿಸಿದ್ದಾರೆ.

ಎಐ ಯೋಜನೆಯ ಅನುಷ್ಠಾನದ ಕುರಿತು ಸಮಗ್ರ ವರದಿಯನ್ನು ಸಿದ್ಧಪಡಿಸಲು ಮತ್ತು ಸಲ್ಲಿಸಲು ಪತ್ತನಂತಿಟ್ಟ ಎಸ್ಪಿ ಆರ್ . ಆನಂದ್ ಅವರಿಗೆ ಜವಾಬ್ದಾರಿ ವಹಿಸಿಕೊಡಲಾಗಿದೆ. ವರದಿಯ ಆಧಾರದ ಮೇಲೆ, ಟಿಡಿಬಿಯು ಆಸಕ್ತ ಕಂಪನಿಗಳನ್ನು ಆಹ್ವಾನಿಸಿ ಒಪ್ಪಂದ ಪ್ರಕ್ರಿಯೆಯೊಂದಿಗೆ ಮುಂದುವರಿಯಲಿದೆ. ಪ್ರಸ್ತುತ ಮಂಡಲ ಮತ್ತು ಮಕರಜ್ಯೋತಿ ಋುತುಗಳಲ್ಲಿ ಶಬರಿಮಲೆಯಲ್ಲಿ ಪ್ರತಿದಿನ 6 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಈ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಲಿದೆ ಎಂದು ಕೆ. ಜಯಕುಮಾರ್ ತಿಳಿಸಿದ್ದಾರೆ.

ಶಬರಿಮಲೆಯಲ್ಲಿ ಸಂಪೂರ್ಣ ಸ್ವಯಂಚಾಲಿತ ಎಐ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುವುದು. ಇನ್ಫ್ರಾರೆಡ್ ಸೆನ್ಸರ್ ಗಳು ಮತ್ತು ಡ್ರೋನ್ ಕ್ಯಾಮೆರಾಗಳನ್ನು ಬಳಸಿಕೊಂಡು ಶಬರಿಮಲೆಯನ್ನು ಜಿಪಿಎಸ್ ನಕ್ಷೆಯ ವ್ಯಾಪ್ತಿಗೆ ತರಲಾಗುವುದು.ಎಐ ಸಹಾಯದಿಂದ, ದಟ್ಟಣೆ ಸಾಧ್ಯತೆಯನ್ನು ಮುಂಚಿತವಾಗಿ ತಿಳಿದುಕೊಳ್ಳಲು ಮತ್ತು ಪರ್ಯಾಯ ಕ್ರಮ ಕೈಗೊಳ್ಳಲು ಸಾಧ್ಯವಾಗುವುದು. ಇದರಿಂದ ಶಬರಿಮಲೆಯಲ್ಲಿಕರ್ತವ್ಯಕ್ಕೆ ನಿಯೋಜಿಸಲಾಗುವ ಪೊಲೀಸರ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎಂದು ವಿಜಿಲೆನ್ಸ್ ನಿರ್ದೇಶಕ ಮನೋಜ್ ಅಬ್ರಹಾಂ ಹೇಳಿದ್ದಾರೆ.

(22ಪಿಎಲ್ ಎಐ. )