ಪೇಜ್ 4 ಹಿಸ್ಟರಿ ಮೆಲುಕು

Contributed byDHEERAJ K|Vijaya Karnataka
berlin blockade a trap for the city and the western revolution
ಬರ್ಲಿನ್ ದಿಗ್ಬಂಧನ

ಜೂಣ್ 24, 1948
ದ್ವಿತೀಯ ಮಹಾಯುದ್ಧದ ಅಂತ್ಯವು ಜಗತ್ತಿಗೆ ಶಾಂತಿಯನ್ನು ತರಲಿಲ್ಲ, ಬದಲಿಗೆ ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ಪ್ರಜಾಪ್ರಭುತ್ವ ರಾಷ್ಟ್ರಗಳು ಮತ್ತು ಸೋವಿಯತ್ ಒಕ್ಕೂಟದ ಕಮ್ಯುನಿಸ್ವ್ ಬಣದ ನಡುವೆ ‘ ಶೀತಲ ಸಮರ ’ ಎಂಬ ಮೌನ ಯುದ್ಧಕ್ಕೆ ನಾಂದಿ ಹಾಡಿತು. ಈ ಶೀತಲ ಸಮರದ ಇತಿಹಾಸದಲ್ಲೇ ಅತ್ಯಂತ ದೊಡ್ಡ ರಾಜತಾಂತ್ರಿಕ ಬಿಕ್ಕಟ್ಟು 1948ರ ಜೂನ್ 24ರಂದು ಜರ್ಮನಿಯ ಬರ್ಲಿನ್ ನಗರದಲ್ಲಿಆರಂಭವಾಯಿತು. ಎರಡನೇ ಮಹಾಯುದ್ಧದಲ್ಲಿಜರ್ಮನಿಯು ಸೋತ ನಂತರ, ಅದರ ರಾಜಧಾನಿಯಾಗಿದ್ದ ಬರ್ಲಿನ್ ನಗರವನ್ನು ಅಮೆರಿಕ, ಬ್ರಿಟನ್ , ಫ್ರಾಸ್ಸ್ ಮತ್ತು ಸೋವಿಯತ್ ಒಕ್ಕೂಟಗಳು ನಾಲ್ಕು ಭಾಗಗಳಾಗಿ ಹಂಚಿಕೊಂಡು ಆಡಳಿತ ನಡೆಸುತ್ತಿದ್ದವು. ಆದರೆ ಭೌಗೋಳಿಕವಾಗಿ ಇಡೀ ಬರ್ಲಿನ್ ನಗರ ಸೋವಿಯತ್ ಒಕ್ಕೂಟದ ನಿಯಂತ್ರಣದಲ್ಲಿದ್ದ ಪೂರ್ವ ಜರ್ಮನಿಯ ಭೂಭಾಗದ ಒಳಗಡೆ ಇತ್ತು. ಪಾಶ್ಚಿಮಾತ್ಯ ರಾಷ್ಟ್ರಗಳು ತಮ್ಮ ನಿಯಂತ್ರಣದಲ್ಲಿದ್ದ ಪಶ್ಚಿಮ ಬರ್ಲಿನ್ ಭಾಗದಲ್ಲಿಹೊಸ ಕರೆನ್ಸಿಯಾದ ‘ಡ್ಯೂಚ್ ಮಾರ್ಕ್’ ಅನ್ನು ಪರಿಚಯಿಸಿದಾಗ ಕೆರಳಿದ ಸೋವಿಯತ್ ನಾಯಕ ಜೋಸೆಫ್ ಸ್ಟಾಲಿನ್ , ಇಡೀ ಬರ್ಲಿನ್ ನಗರವನ್ನು ತನ್ನ ಸಂಪೂರ್ಣ ಹತೋಟಿಗೆ ತೆಗೆದುಕೊಳ್ಳಲು ನಿರ್ಧರಿಸಿದರು. ಇದರ ಪರಿಣಾಮವೇ ಇತಿಹಾಸ ಪ್ರಸಿದ್ಧ ಬರ್ಲಿನ್ ದಿಗ್ಬಂಧನ.

1948ರ ಜೂನ್ 24ರಂದು ಸೋವಿಯತ್ ಒಕ್ಕೂಟವು ಪಶ್ಚಿಮ ಬರ್ಲಿನ್ ನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾರೈಲು ಮಾರ್ಗಗಳು, ರಸ್ತೆಗಳು ಮತ್ತು ಜಲಮಾರ್ಗಗಳನ್ನು ಸಂಪೂರ್ಣವಾಗಿ ಬಂದ್ ಮಾಡಿತು. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಕೇವಲ ಮೂರು ವಾಯು ಮಾರ್ಗಗಳ ಮೂಲಕ ಮಾತ್ರ ಬರ್ಲಿನ್ ತಲುಪಲು ಕಾನೂನುಬದ್ಧ ಅವಕಾಶವಿತ್ತು. ಸೋವಿಯತ್ ಪಡೆಗಳು ರಸ್ತೆಗಳನ್ನು ಮುಚ್ಚಿದ ತಕ್ಷಣವೇ ಯುದ್ಧ ಹೂಡಲು ಇಷ್ಟಪಡದ ಅಮೆರಿಕ ಮತ್ತು ಬ್ರಿಟನ್ ದೇಶಗಳು, ಇತಿಹಾಸದಲ್ಲೇ ಅತ್ಯಂತ ಬೃಹತ್ ರಕ್ಷಣಾ ಕಾರ್ಯಾಚರಣೆಯಾದ ‘ಬರ್ಲಿನ್ ಏರ್ ಲಿ´್ಟ…’ ಅನ್ನು ಪ್ರಾರಂಭಿಸಿದವು.

20 ಲಕ್ಷಕ್ಕೂ ಹೆಚ್ಚು ಜನರಿಗೆ ದಿನನಿತ್ಯದ ಬದುಕಿಗೆ ಬೇಕಾದ ಕನಿಷ್ಠ 4,500 ಟನ್ ಆಹಾರ ಮತ್ತು ಇಂಧನವನ್ನು ಕೇವಲ ವಿಮಾನಗಳ ಮೂಲಕವೇ ತಲುಪಿಸಬೇಕಾಗಿತ್ತು. ಅಮೆರಿಕದ ವಾಯುಪಡೆ ಮತ್ತು ಬ್ರಿಟನ್ ನ ರಾಯಲ್ ಏರ್ ಫೋರ್ಸ್ ಜಂಟಿಯಾಗಿ ಹಗಲಿರುಳು ಶ್ರಮಿಸಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದವು.

ಸೋವಿಯತ್ ಒಕ್ಕೂಟವು ಈ ವಾಯುಯಾನ ಕಾರ್ಯಾಚರಣೆಯನ್ನು ತಡೆಯಲು ವಿಮಾನಗಳ ಮೇಲೆ ದಾಳಿ ಮಾಡಿದರೆ ಅದು ನೇರ ಯುದ್ಧಕ್ಕೆ ಕಾರಣವಾಗುತ್ತದೆ ಎಂಬ ಭಯದಿಂದ ಕೇವಲ ಬೆದರಿಕೆಗಳಿಗಷ್ಟೇ ಸೀಮಿತವಾಯಿತು. ಸುಮಾರು ಹನ್ನೊಂದು ತಿಂಗಳುಗಳ ಕಾಲ ಸಾಗಿದ ಈ ಬಿಕ್ಕಟ್ಟಿನಲ್ಲಿಪಾಶ್ಚಿಮಾತ್ಯ ರಾಷ್ಟ್ರಗಳು ಒಟ್ಟು 2.70 ಲಕ್ಷಕ್ಕೂ ಹೆಚ್ಚು ವಿಮಾನ ಹಾರಾಟಗಳನ್ನು ನಡೆಸಿ, ಸುಮಾರು 23 ಲಕ್ಷ ಟನ್ ಅಗತ್ಯ ವಸ್ತುಗಳನ್ನು ಯಶಸ್ವಿಯಾಗಿ ಪಶ್ಚಿಮ ಬರ್ಲಿನ್ ಗೆ ತಲುಪಿಸಿದವು. ದಿಗ್ಬಂಧನ ತಂತ್ರವು ಸಂಪೂರ್ಣವಾಗಿ ವಿಫಲವಾಗಿ ಸೋವಿಯತ್ ಒಕ್ಕೂಟವು ಅಂತಿಮವಾಗಿ 1949ರ ಮೇ 12ರಂದು ಬರ್ಲಿನ್ ಮೇಲಿನ ದಿಗ್ಬಂಧನವನ್ನು ತೆರವುಗೊಳಿಸಿತು.