ವಿದ್ಯುತ್ ಖಾಸಗೀಕರಣಕ್ಕೆ ವಿರೋಧ

Contributed bychannamadegowda21@gmail.com|Vijaya Karnataka
opposition to electricity privatization farmers and sesk workers fight back
- ಚಾಮರಾಜನಗರ-ಜೇವರ್ಗಿ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ

ವಿಕ ಸುದ್ದಿಲೋಕ ಪಾಂಡವಪುರ
ವಿದ್ಯುತ್ ವಿತರಣೆ ಖಾಸಗೀಕರಣ ವಿರೋಧಿಸಿ ರೈತಸಂಘ ಕಾರ್ಯಕರ್ತರು ಮತ್ತು ಸೆಸ್ಕ್ ನೌಕರರರು ಮಾನವ ಸರಪಳಿ ಮೂಲಕ ಚಾಮರಾಜನಗರ-ಜೇವರ್ಗಿ ಹೆದ್ದಾರಿ ಸಂಚಾರ ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಐದು ದೀಪ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ‘‘ವಿದ್ಯುತ್ ವಿತರಣೆ ಪರವಾನಗಿಯನ್ನು ಖಾಸಗಿ ಸಂಸ್ಥೆಗೆ ವರ್ಗಾಯಿಸದರೆ ರೈತರು, ಗ್ರಾಹಕರು ಮತ್ತು ನಿಗಮದ ನೌಕರರರಿಗೆ ಸಂಕಷ್ಟ ಎದುರಾಗಲಿದೆ. ಹೀಗಾಗಿ ಸರಕಾರ ಖಾಸಗಿ ಸಂಸ್ಥೆಗೆ ವಿತರಣಾ ಪರವಾನಗಿ ನೀಡಿರುವ ಅರ್ಜಿಯನ್ನು ತಿರಸ್ಕರಿಸಿ ಎಲ್ಲರ ಹಿತ ಕಾಪಾಡಬೇಕು,’’ಎಂದು ಆಗ್ರಹಿಸಿದರು.

ರೈತ ಸಂಘ ಜಿಲ್ಲಾಧ್ಯಕ್ಷ ಎ.ಎಲ್ .ಕೆಂಪೂಗೌಡ ಮಾತನಾಡಿ, ‘‘ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸರಕಾರಿ ಸ್ವಾಮ್ಯದ ನಿಗಮ ಮತ್ತು ಇಲಾಖೆಗಳನ್ನು ಖಾಸಗೀಕರಗೊಳಿಸುವುದು ಬಿಟ್ಟರೆ ಬೇರೇನೂ ಕೆಲಸವಿಲ್ಲ. ರೈತರ ಹಿಡಿತದಲ್ಲಿದ್ದ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಈಗಾಗಲೇ ಖಾಸಗಿ ಅವರಿಗೆ ಗುತ್ತಿಗೆ ನೀಡಿದ್ದಾರೆ. ಇದೇ ರೀತಿ ಹಲವಾರು ಕಾರ್ಖಾನೆಗಳನ್ನು ಖಾಸಗೀಕರಗೊಳಿಸುವ ಹುನ್ನಾರ ನಡೆಯುತ್ತಿದೆ. ವಿದ್ಯುತ್ ನಿಗಮ ಖಾಸಗೀಕರಣಗೊಂಡರೆ ರೈತರ ಪಂಪ್ ಸೆಟ್ ಗಳಿಗೆ ಉಚಿತವಾಗಿ ನೀಡುತ್ತಿರುವ ವಿದ್ಯುತ್ ಸ್ಥಗಿತಗೊಳ್ಳುತ್ತದೆ. ಸರಕಾರ ವಿವಿಧ ಯೋಜನೆಗಳಾದ ಕುಟೀರ ಜ್ಯೋತಿ, ಗಂಗಾ ಕಲ್ಯಾಣ, ಭಾಗ್ಯ ಜ್ಯೋತಿ ಸೇರಿದಂತೆ ವಿವಿಧ ಜನಪರ ಕಾರ್ಯಗಳಿಗೆ ಮೊಟಕುಗೊಳ್ಳುತ್ತದೆ. ಹೀಗಾಗಿ ರೈತ ಸಂಘ ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗೀಕರಣಕ್ಕೆ ಬಿಡುವುದಿಲ್ಲ,’’ಎಂದರು.

ರೈತ ಸಂಘದ ತಾಲೂಕು ಅಧ್ಯಕ್ಷ ವೈ.ಪಿ.ಮಂಜು ಮಾತನಾಡಿ, ‘‘ವಿದ್ಯುತ್ ಇಲಾಖೆ ಖಾಸಗೀಕರಣಗೊಂಡರೆ ನಿಗಮದ 55 ಸಾವಿರ ನೌಕರರ ಭವಿಷ್ಯ ಬೀದಿಗೆ ಬೀಳುತ್ತದೆ. ಅನುಮತಿ ಪಡೆಯುವ ಮುನ್ನ ಸರಕಾರದ ಎಲ್ಲಾಯೋಜನೆಗಳನ್ನು ಮುಂದುವರಿಸುವುದಾಗಿ ಭರವಸೆ ನೀಡುತ್ತಾರೆ. ಆನಂತರದಲ್ಲಿನಿರ್ವಹಣಾ ವೆಚ್ಚ ಸರಿದೂಗಿಸಲು ಸಾದ್ಯವಾಗುತ್ತಿಲ್ಲಎಂಬ ಕಾರಣ ನೀಡಿ ಯೋಜನೆಗಳನ್ನು ಕಡಿತಗೊಳಿಸುವ ಜತೆಗೆ ದರ ಏರಿಸುತ್ತಾರೆ. ಒಮ್ಮೆ ಖಾಸಗೀಕರಣಗೊಂಡರೆ ಬಿಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನಿಗಮವನ್ನು ಸರಕಾರಿ ಸ್ವಾಮ್ಯದಲ್ಲೇ ಇಟ್ಟುಕೊಂಡು ಗುಣಮಟ್ಟದ ವಿದ್ಯುತ್ ಪೂರೈಸಲಿ,’’ ಎಂದು ಒತ್ತಾಯಿಸಿದರು.

ಬಳಿಕ ತಾಲೂಕು ಕಚೇರಿ ಮುತ್ತಿಗೆ ಹಾಕಿ ಉಪ ತಹಸೀಲ್ದಾರ್ ಮೋಹನ್ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘ ತಾಲೂಕು ಅಧ್ಯಕ್ಷ ವೈ.ಪಿ.ಮಂಜು, ಉಪಾಧ್ಯಕ್ಷ ಡಾಮಡಹಳ್ಳಿ ಅಶೋಕ್ , ಕಾರ್ಯದರ್ಶಿ ವೈ.ಜಿ.ರಘು, ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಅರಳಕುಪ್ಪೆ ರೂಪ, ಸೆಸ್ಕ್ ಸುಷ್ಮಾ, ದೇವರಾಜು ಮತ್ತಿತರರು ಇದ್ದರು.

ಎಂಡಿವೈ23ಪಿಎನ್ ಡಿ01

ಪಾಂಡವಪುರ ಪಟ್ಟಣದ ಐದು ದೀಪ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ವಿದ್ಯುತ್ ಇಲಾಖೆ ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ರೈತಸಂಘ ಕಾರ್ಯಕರ್ತರು ಮತ್ತು ಸೆಸ್ಕ್ ನೌಕರರು ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಎಂಡಿವೈ23ಪಿಎನ್ ಡಿ02

ಪಾಂಡವಪುರ ಪಟ್ಟಣದ ಐದು ದೀಪ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ವಿದ್ಯುತ್ ಇಲಾಖೆ ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ರೈತಸಂಘ ಕಾರ್ಯಕರ್ತರು ಮತ್ತು ಸೆಸ್ಕ್ ನೌಕರರು ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.