ಹಿಸ್ಟರಿ ಮೆಲುಕು ಜೂನ್ 25

Contributed byDHEERAJ K|Vijaya Karnataka
june 25 the beginning of emergency in india
ತುರ್ತು ಪರಿಸ್ಥಿತಿ

ಜೂನ್ 25, 1975
ಸ್ವತಂತ್ರ ಭಾರತದ ಇತಿಹಾಸದ ಪುಟಗಳಲ್ಲಿ1975ರ ಜೂನ್ 25 ಕರಾಳ ದಿನವಾಗಿ ದಾಖಲಾಗಿದೆ. ಅಂದು ಪ್ರಧಾನಿ ಇಂದಿರಾ ಗಾಂಧಿಯವರ ನೇತೃತ್ವದ ಕಾಂಗ್ರೆಸ್ ಸರಕಾರವು ದೇಶದಾದ್ಯಂತ ಆಂತರಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿತು. ಪ್ರಧಾನಿ ಇಂದಿರಾ ಗಾಂಧಿಯವರ ಸಲಹೆಯ ಮೇರೆಗೆ ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರು ಸಂವಿಧಾನದ 352ನೇ ವಿಧಿಯ ಅಡಿಯಲ್ಲಿಈ ಪ್ರಕಟಣೆಗೆ ಸಹಿ ಹಾಕಿದರು. ಈ ಒಂದು ನಿರ್ಧಾರವು ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ವಿವಾದಾತ್ಮಕ ಮತ್ತು ಕಠಿಣ ಅವಧಿಗೆ ನಾಂದಿ ಹಾಡಿತು.

ತುರ್ತು ಪರಿಸ್ಥಿತಿ ಜಾರಿಯಾಗುತ್ತಿದ್ದಂತೆ ದೇಶದ ನಾಗರಿಕರ ಮೂಲಭೂತ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಅಮಾನತುಗೊಳಿಸಲಾಯಿತು. ಸರಕಾರದ ವಿರುದ್ಧ ಧ್ವನಿ ಎತ್ತುವ ಹಕ್ಕನ್ನು ಜನರಿಂದ ಕಸಿದುಕೊಳ್ಳಲಾಯಿತು. ಇದರ ಬೆನ್ನಲ್ಲೇ ಮಾಧ್ಯಮಗಳ ಮೇಲೆ ಕಠಿಣ ಸೆನ್ಸಾರ್ ಶಿಪ್ ಹೇರಲಾಯಿತು; ಪತ್ರಿಕೆಗಳು ಸರಕಾರದ ಅನುಮತಿಯಿಲ್ಲದೆ ಯಾವುದೇ ಸುದ್ದಿ ಅಥವಾ ಲೇಖನಗಳನ್ನು ಪ್ರಕಟಿಸುವಂತಿರಲಿಲ್ಲ. ರಾತ್ರೋರಾತ್ರಿ ಪ್ರಮುಖ ಪತ್ರಿಕೋದ್ಯಮ ಸಂಸ್ಥೆಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವ ಮೂಲಕ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಯಿತು.

ರಾಜಕೀಯವಾಗಿ ಈ ಅವಧಿಯು ವಿರೋಧ ಪಕ್ಷದ ನಾಯಕರ ಸಾರಾಸಗಟು ಬಂಧನಕ್ಕೆ ಸಾಕ್ಷಿಯಾಯಿತು. ಜಯಪ್ರಕಾಶ್ ನಾರಾಯಣ್ , ಅಟಲ್ ಬಿಹಾರಿ ವಾಜಪೇಯಿ, ಎಲ್ .ಕೆ. ಅಡ್ವಾಣಿ ಮತ್ತು ಮೊರಾರ್ಜಿ ದೇಸಾಯಿ ಸೇರಿದಂತೆ ಸಾವಿರಾರು ರಾಜಕೀಯ ನಾಯಕರು ಹಾಗೂ ಕಾರ್ಯಕರ್ತರನ್ನು ಯಾವುದೇ ವಿಚಾರಣೆಯಿಲ್ಲದೆ ಜೈಲಿಗೆ ತಳ್ಳಲಾಯಿತು. ಕಾನೂನುಬಾಹಿರ ಬಂಧನದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವ ಹಕ್ಕನ್ನು ಸಹ ನಾಗರಿಕರು ಕಳೆದುಕೊಂಡಿದ್ದರು.

ಈ ತುರ್ತು ಪರಿಸ್ಥಿತಿ ಸುಮಾರು 21 ತಿಂಗಳುಗಳ ಕಾಲ ಮುಂದುವರಿಯಿತು. ಅಂತಿಮವಾಗಿ, ಜಗತ್ತಿನಾದ್ಯಂತ ಉಂಟಾದ ತೀವ್ರ ಆಕ್ರೋಶ ಮತ್ತು ದೇಶದೊಳಗಿನ ಆಂತರಿಕ ಒತ್ತಡಕ್ಕೆ ಮಣಿದ ಇಂದಿರಾ ಗಾಂಧಿಯವರು 1977ರ ಮಾರ್ಚ್ನಲ್ಲಿತುರ್ತು ಪರಿಸ್ಥಿತಿಯನ್ನು ಹಿಂಪಡೆದರು. ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿಇಂದಿರಾ ಗಾಂಧಿ ಸರಕಾರ ಅಧಿಕಾರವನ್ನು ಕಳೆದುಕೊಂಡಿತು.