28 ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ

Contributed bydhanushkulal9@gmail.com|Vijaya Karnataka
pulse polio campaign on 28th health departments reminders
ಎಲ್ಲಾಇಲಾಖೆಗಳ ಸಮನ್ವಯ ಅಗತ್ಯ : ರವಿಚಂದ್ರ ನಾಯಕ್

ಮಂಗಳೂರು: ಜೂ. 28 ರಂದು ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನವನ್ನು ಯಶಸ್ವಿಯಾಗಿ ಜಾರಿಗೊಳಿಸಲು ಸಂಬಂಧಿಸಿದ ಎಲ್ಲಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಮಂಗಳೂರು ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಸೂಚಿಸಿದರು.
ಸೋಮವಾರ ಮನಪಾ ಮಂಗಳಾ ಸಭಾಂಗಣದಲ್ಲಿನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ನಗರ ಮಟ್ಟದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

0 ರಿಂದ 5 ವರ್ಷದೊಳಗಿನ ಯಾವುದೇ ಮಗು ಪೋಲಿಯೋ ಲಸಿಕೆಯಿಂದ ವಂಚಿತರಾಗದಂತೆ ವ್ಯವಸ್ಥಿತವಾಗಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಬೇಕು. ಕಾರ್ಮಿಕರ ಮಕ್ಕಳಿಗೂ ಲಸಿಕೆ ದೊರೆಯುವಂತೆ ವಿಶೇಷ ಕ್ರಮ ಕೈಗೊಳ್ಳಬೇಕು. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿಪಲ್ಸ್ ಪೋಲಿಯೋ ಟ್ರಾನ್ಸಿಟ್ ಬೂತ್ ಗಳನ್ನು ತೆರೆಯಲಾಗಿದ್ದು, ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಜೂ. 29 ರಿಂದ ಜು. 1 ರವರೆಗೆ ಲಸಿಕಾ ಕಾರ್ಯಕರ್ತರು ಮನೆ-ಮನೆಗೆ ಭೇಟಿ ನೀಡಿ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಿದ್ದಾರೆ. ಈ ಸಂದರ್ಭದಲ್ಲಿಮನೆಯಲ್ಲಿರುವ ನವಜಾತ ಶಿಶುಗಳನ್ನು ಗುರುತಿಸಿ ಅವರಿಗೆ ಕಡ್ಡಾಯವಾಗಿ ಲಸಿಕೆ ನೀಡಬೇಕು. ತಾಯಂದಿರ ಸಭೆಗಳ ಮೂಲಕ ಪಲ್ಸ್ ಪೋಲಿಯೋ ಕಾರ್ಯಕ್ರಮದ ದಿನಾಂಕ ಹಾಗೂ ಮಹತ್ವದ ಕುರಿತು ಅರಿವು ಮೂಡಿಸಬೇಕು ಎಂದು ಸೂಚಿಸಿದರು.

ಡೆಂಗೆ, ಮಲೇರಿಯಾ ನಿಯಂತ್ರಣ ಅಗತ್ಯ : ಸಭೆಯಲ್ಲಿಡೆಂಗೆ ಹಾಗೂ ಮಲೇರಿಯಾ ನಿಯಂತ್ರಣ ಕುರಿತೂ ಚರ್ಚೆ ನಡೆಸಲಾಯಿತು. ಆರೋಗ್ಯ ಇಲಾಖೆ ಹಾಗೂ ಸಂಬಂಧಿತ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಸಾರ್ವಜನಿಕರಲ್ಲಿರೋಗ ನಿಯಂತ್ರಣ ಕುರಿತು ಜಾಗೃತಿ ಮೂಡಿಸಬೇಕು ಎಂದು ರವಿಚಂದ್ರ ನಾಯಕ್ ಹೇಳಿದರು.

ಕಟ್ಟಡ ನಿರ್ಮಾಣ ಸ್ಥಳಗಳಲ್ಲಿವಾರಕ್ಕೊಮ್ಮೆ ಲಾರ್ವಾ ವಿರೋಧಿ ಕಾರ್ಯಾಚರಣೆಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು. ಸೊಳ್ಳೆಗಳು ನಿಂತ ನೀರಿನಲ್ಲಿಮೊಟ್ಟೆಯಿಟ್ಟು ಸಂತಾನೋತ್ಪತ್ತಿ ಮಾಡುವುದರಿಂದ, ಅನಗತ್ಯ ನೀರಿನ ಸಂಗ್ರಹವನ್ನು ತಡೆಯುವ ಮೂಲಕ ರೋಗಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಇತರ ಜಿಲ್ಲೆಗಳಿಂದ ಕೆಲಸಕ್ಕೆ ಬರುವ ಕಾರ್ಮಿಕರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ, ಕಟ್ಟಡ ನಿರ್ಮಾಣ ಸಂಸ್ಥೆಗಳು ಮುಂಜಾಗ್ರತಾ ಕ್ರಮಗಳ ಕುರಿತು ಜಾಗೃತಿ ಸಭೆಗಳನ್ನು ಆಯೋಜಿಸಬೇಕು. ಕಾರ್ಮಿಕರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಬೇಕು ಹಾಗೂ ಸೊಳ್ಳೆಗಳ ನಿಯಂತ್ರಣಕ್ಕಾಗಿ ಫಾಗಿಂಗ್ ಕಾರ್ಯಾಚರಣೆಗಳನ್ನು ಕಟ್ಟುನಿಟ್ಟಾಗಿ ನಡೆಸಬೇಕು ಎಂದು ಸೂಚಿಸಿದರು.

ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ತಿಮ್ಮಯ್ಯ, ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ. ಶಿವಪ್ರಕಾಶ್ , ಆರ್ ಸಿಎಚ್ ಅಧಿಕಾರಿ ರಾಜೇಶ್ , ಜಿಲ್ಲಾಸರ್ವೇಕ್ಷಣಾಧಿಕಾರಿ ಡಾ. ನವೀನ್ ಕುಲಾಲ್ , ಡಾ. ಹರ್ಷಿತ್ ಮತ್ತಿತರರು ಉಪಸ್ಥಿತರಿದ್ದರು.

ಫೊಟೋ :

22ಜೂ-ಪೋಲಿಯೋ

ಪಲ್ಸ್ ಪೋಲಿಯೋ ಕಾರ್ಯಕ್ರಮದ ನಗರ ಮಟ್ಟದ ಚಾಲನಾ ಸಮಿತಿ ಸಭೆ ನಡೆಯಿತು.