ತಾಲೂಕು ಕಚೇರಿಯಲ್ಲಿಮೂಲಸೌಕರ್ಯಗಳನ್ನು ಒದಗಿಸಿ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಿ, ಪಿ.ನಂಬರ್ ದುರಸ್ತಿ ಹಾಗೂ ಸರಕಾರಿ ಆಸ್ತಿಗಳ ಒತ್ತುವರಿ ತೆರವುಗೊಳಿಸಲು ವಿಶೇಷ ತಂಡ ರಚನೆ ಮಾಡಿ ಮುಂಗಾರು ಮಳೆಯಿಂದ ಬಡವರ ಬದುಕು ರೈತರ ಬೆಳೆ ರಕ್ಷಣೆ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ತಹಸೀಲ್ದಾರ್ ಶ್ರೀನಿವಾಸ್ ಗೆ ಮನವಿ ಸಲ್ಲಿಸಲಾಯಿತು.ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಪ್ರತಿವರ್ಷ ಮುಂಗಾರು ಮಳೆ ಪ್ರಾರಂಭವಾದಾಗ ಮಳೆ ನೀರು ಸರಾಗವಾಗಿ ಹರಿಯಲು ರಾಜಕಾಲುವೆ, ಚರಂಡಿಗಳ ಅಭಿವೃದ್ಧಿಯಿಲ್ಲದೆ ಒತ್ತುವರಿ ಆಗಿರುವುದರಿಂದ ಮಳೆ ನೀರು ರೈತರ ಕೃಷಿ ಜಮೀನಿಗೆ ನುಗ್ಗಿ ಬೆಳೆ ನಾಶವಾಗುತ್ತಿದ್ದು, ಬಗೆಹರಿಸಬೇಕಾದ ಅಧಿಕಾರಿಗಳು ಒತ್ತುವರಿದಾರರ ಪರ ನಿಂತಿರುವುದು ಸರಿಯಲ್ಲಎಂದು ಕಿಡಿಕಾರಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ದಾಖಲೆಗಳ ಸಮೇತ ಒತ್ತುವರಿಯಾಗಿರುವ ಸರಕಾರಿ ಆಸ್ತಿಗಳ ಬಗ್ಗೆ ಮಾಹಿತಿ ನೀಡಿದರೂ ಭೂಗಳ್ಳರ ಜತೆ ಕಂದಾಯ, ಸರ್ವೆ ಅಧಿಕಾರಿಗಳು ಶಾಮೀಲಾಗಿ ನೆಪ ಮಾತ್ರಕ್ಕೆ ಒತ್ತುವರಿ ತೆರವುಗೊಳಿಸಿದ ಫೋಟೊಗಳನ್ನು ಕಳುಹಿಸಿ ಕೈತೊಳೆದುಕೊಳ್ಳುತ್ತಿದ್ದಾರೆಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ತಾಲೂಕು ಕಚೇರಿಯಲ್ಲಿಮೂಲಸೌಕರ್ಯಗಳನ್ನು ಒದಗಿಸಿ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಿ, ದಶಕಗಳಿಂದ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಸಾವಿರಾರು ರೈತರ ಪಿ ನಂಬರ್ ದುರಸ್ತಿ ಹಾಗೂ ಸರಕಾರಿ ಕೆರೆ, ರಾಜಕಾಲುವೆ, ಗೋಮಾಳ ತೆರವುಗೊಳಿಸಲು ವಿಶೇಷ ತಂಡ ರಚನೆ ಮಾಡಬೇಕೆಂದು ಒತ್ತಾಯ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಶ್ರೀನಿವಾಸ್ , ಸರ್ವೇಯರ್ ಗಳ ಸಮಸ್ಯೆ ಇರುವುದರಿಂದ ಒತ್ತುವರಿ ಆಗಿರುವ ಬಂಡಿದಾರಿ, ಸ್ಮಶಾನ ಮತ್ತಿತರ ಸರಕಾರಿ ಆಸ್ತಿಗಳ ಒತ್ತುವರಿ ತೆರೆವುಗೊಳಿಸಲು ವಿಳಂಬವಾಗುತ್ತಿದೆ. ಪಿ ನಂಬರ್ ದುರಸ್ತಿ ಹಾಗೂ ಭೂ ಪರಿವರ್ತನೆಗೆ ಲಕ್ಷಲಕ್ಷ ಲಂಚ ಪಡೆಯುವ ಬಗ್ಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುವ ಮತ್ತು ಕಚೇರಿಗೆ ಮೂಲಸೌಕರ್ಯಗಳ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.