ಮಾಸಿಕ ಋುತುಸ್ರಾವ ಈಗ ಕೇವಲ ದೇಹದಿಂದ ಹೊರ ಹೋಗುವ ತ್ಯಾಜ್ಯವಲ್ಲ. ಹಲವು ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸಕ. ಈಗಾಗಲೇ ಮುಟ್ಟಿನ ರಕ್ತ ಬಳಸಿ ತ್ವಚೆ ಸಂಬಂಧಿ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳ ನಿವಾರಕ ಎಂಬುದರ ಬಗ್ಗೆ ಸಾಕಷ್ಟು ಸಂಶೋಧನೆಗಳು ಬಂದಿವೆ. ಈಗ ಇನ್ನೊಂದು ಹಂತಕ್ಕೆ ಈ ಸಂಶೋಧನೆ ಮುಂದುವರಿದಿದ್ದು, ಮೂಳೆ ಸಂಬಂಧಿ ಸಮಸ್ಯೆಯನ್ನು ನಿವಾರಿಸಲು ಪೂರಕ ಎಂದು ಹೇಳಲಾಗಿದೆ.ಆಥ್ರೈಟಿಸ್ ನಂತಹ ಸಮಸ್ಯೆಗಳು ಗಣನೀಯವಾಗಿ ಹೆಚ್ಚುತ್ತಿದ್ದು, ಜಗತ್ತಿನಾದ್ಯಂತ ಕೋಟಿಗೂ ಹೆಚ್ಚು ಜನರು ಮೂಳೆ ಸಂಬಂಧಿ ವಿಶೇಷವಾಗಿ ಅಸ್ಥಿ ಸಂಧಿವಾತ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಮೂಳೆಗಳ ನಡುವಿನ ಕಾರ್ಟಿಲೆಜ್ ಸವೆಯುವಿಕೆಯಿಂದ ಉಂಟಾಗುವ ಸಮಸ್ಯೆ. ಪುರುಷರಿಗಿಂತ ಮಹಿಳೆಯರನ್ನೇ ಹೆಚ್ಚು ಕಾಡುವ ಈ ಸಮಸ್ಯೆ ಋುತುಬಂಧ ಮುಗಿದ ಮಹಿಳೆಯರಲ್ಲಿತೀವ್ರವಾಗಿರುತ್ತದೆ. ಆದರೆ ಈಗ ಮುಟ್ಟಿನ ಸ್ರಾವವೇ ಪರಿಹಾರ ಎನ್ನುತ್ತಿದ್ದಾರೆ ಸಂಶೋಧಕರು.
ಹೊಸ ಸಂಶೋಧನೆ ಪ್ರಕಾರ, ಮುಟ್ಟಿನ ರಕ್ತದಲ್ಲಿಮೆಸೆಂಕೈಮಲ್ ಸ್ಟೊ್ರೕಮಲ್ ಎಂಬ ವಿಶೇಷ ಕಾಂಡಕೋಶಗಳಿವೆ. ಇವುಗಳಿಗೆ ಗರ್ಭಾಶಯದ ಒಳಪದರವನ್ನು ಪ್ರತಿ ತಿಂಗಳು ಮರುನಿರ್ಮಾಣ ಮಾಡುವ ಅದ್ಭುತ ಶಕ್ತಿ ಇರುತ್ತದೆ. ಈ ಜೀವಕೋಶಗಳಿಂದ ಸ್ರವಿಸುವ ಸೂಕ್ಷ್ಮ ಕಣಗಳನ್ನು ಬೇರ್ಪಡಿಸಿ, ಹಾನಿಗೊಳಗಾದ ಮೃದು ಮೂಳೆಯ ಜೀವಕೋಶಗಳಿಗೆ ನೀಡಿದಾಗ ಅವು ಮೃದು ಮೂಳೆಯನ್ನು ಯಶಸ್ವಿಯಾಗಿ ಪುನರುತ್ಪಾದಿಸಿವೆ. ಈ ಸಂಶೋಧನೆ ಫಲ ನೀಡಿದರೆ ಶಸ್ತ್ರಚಿಕಿತ್ಸೆ ಇಲ್ಲದೆಯೇ ಕಾಯಿಲೆ ಗುಣಪಡಿಸಬಹುದು. ದೇಹದ ಇತರ ಭಾಗಗಳಿಂದ ನೋವಿನ ಮೂಲಕ ಜೀವಕೋಶಗಳನ್ನು ತೆಗೆಯುವ ಅಗತ್ಯವಿರುವುದಿಲ್ಲ.