ಪ್ರಯಾಣಿಕನ ಕಿತಾಪತಿ: ಆಸ್ಪತ್ರೆಗೆ ಪ್ರಯಾಣಿಕರು

Contributed bytvlbdr@gmail.com|Vijaya Karnataka
passenger chaos on bus 18 injured a prelude to mayhem
ವಿಕ ಸುದ್ದಿಲೋಕ ಬೀದರ್ ಪ್ರಯಾಣಿಕನೊಬ್ಬ ಬಸ್ ನ ಸ್ಟೇರಿಂಗ್ ಏಕಾ ಏಕೀ ತಿರುಗಿಸಿದ ಪರಿಣಾಮ ಬಸ್ ಮರಕ್ಕೆ ಡಿಕ್ಕಿ ಹೊಡೆದು 18 ಜನರಿಗೆ ತೀವ್ರ ಗಾಯಗಳಾಗಿರುವ ಘಟನೆ ಸೋಮವಾರ ಸಂಜೆ ಬೀದರ್ ಹೊರವಲಯದ ಶಹಾಪುರ ಗೇಟ್ ಬಳಿ ಸಂಭವಿಸಿದೆ. ಮಹಾರಾಷ್ಟ್ರ ಸಾರಿಗೆ ಸಂಸ್ಥೆಗೆ ಸೇರಿದ ಈ ಬಸ್ ಹೈದರಾಬಾದ್ ನಿಂದ ಉದಗೀರ್ ಕಡೆಗೆ ಹೊರಟಿತ್ತು. ಬೀದರ್ ಹೊರವಲಯದ ಶಹಾಪುರ ಗೇಟ್ ಬಳಿ ಬಂದಾಗ ಬಸ್ ನಲ್ಲೇ ಪ್ರಯಾಣಿಕನೊಬ್ಬ ವಾಹನ ಚಾಲಕನ ಕ್ಯಾಬಿನ್ ಗೆ ನುಗ್ಗಿ, ಏಕಾ ಏಕೀ ಸ್ಟೇರಿಂಗ್ ತಿರುಗಿಸಿದ. ಇದರ ಪರಿಣಾಮವಾಗಿ ಬಸ್ ಮರಕ್ಕೆ ಡಿಕ್ಕಿ ಹೊಡೆಯಿತು. ಬಸ್ ನಲ್ಲಿದ್ದ ಎಲ್ಲರಿಗೂ ಸಣ್ಣಪುಟ್ಟ ಹಾಗೂ ಕೆಲವರಿಗೆ ಗಂಭೀರ ಗಾಯಗಳಾಗಿವೆ ಎಂದು ಎಂಎಸ್ ಆರ್ ಟಿಸಿ ಸಂಸ್ಥೆಯ ಬಸ್ ನಿರ್ವಾಹಕ ಅಮುಲ್ ತಿಳಿಸಿದ್ದಾರೆ. ಮಧ್ಯಾಹ್ನವೇ ಹೈದರಾಬಾದ್ ನಿಂದ ಹೊರಟಿದ್ದ ಬಸ್ ಸಂಜೆ ವೇಳೆ ಬೀದರ್ ಹೊರವಲಯಕ್ಕೆ ಆಗಮಿಸಿತ್ತು. ಗಾಯಾಳುಗಳನ್ನು ಬ್ರಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಬಸ್ ಚಾಲಕನ ಕಾಲಿನ ಮೂಳೆಗೆ ಹಾಗೂ ದೇಹದ ಹಲವೆಡೆ ಗಂಭೀರ ಪೆಟ್ಟಾಗಿದ್ದು, ಹಲವು ಪ್ರಯಾಣಿಕರ ಕೈ ಕಾಲು, ತಲೆಗೆ ಎಲ್ಲೆಂದರಲ್ಲಿಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬಸ್ ನಿರ್ವಾಹಕನಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಟೇರಿಂಗ್ ತಿರುಗಿಸಿದ ಪ್ರಯಾಣಿಕ ಮದ್ಯ ಸೇವಿಸಿದ್ದ. ಅಲ್ಲದೆ, ತನ್ನ ಪತ್ನಿ ಜತೆ ಜಗಳವಾಡುತ್ತಲೇ ಬರುತ್ತಿದ್ದ. ಏಕಾ ಏಕೀ ಸಿಟ್ಟಿನಿಂದ ಸೀಟು ಬಿಟ್ಟು ಎದ್ದು, ಚಾಲಕನ ಬಳಿ ಹೋಗಿ ಸ್ಟೇರಿಂಗ್ ತಿರುಗಿಸಿದ್ದಾನೆ ಎಂದು ತಿಳಿದು ಬಂದಿದೆ. ಸ್ಟೇರಿಂಗ್ ತಿರುಗಿಸಿದ ಸಹ ಪ್ರಯಾಣಿಕ ಮದ್ಯ ಸೇವನೆ ಮಾಡಿದ್ದಾನೋ ಅಥವಾ ಮಾನಸಿಕವಾಗಿ ಅಸ್ವಸ್ಥನಾಗಿದ್ದನೋ ಎಂಬುದರ ಕುರಿತು ತನಿಖೆಯ ಬಳಿಕವೇ ತಿಳಿದು ಬರಬೇಕಿದೆ.