ವಿಕ ಸುದ್ದಿಲೋಕ ಕಲಬುರಗಿ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿನಡೆಸಲು ಉದ್ದೇಶಿಸಿರುವ ‘ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶ’ದ ಅನುಮತಿ ಕುರಿತ ಅರ್ಜಿಯ ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್ ಪೀಠ, ಹಲವು ಷರತ್ತುಗಳ ಒಪ್ಪಿಗೆಯ ಅಫಿಡವಿಟ್ ಸಲ್ಲಿಸಲು ಅರ್ಜಿದಾರರಿಗೆ ಸೂಚನೆ ನೀಡಿದೆ. ಅರ್ಜಿ ವಿಚಾರಣೆ ಜು.24ರ ಮಧ್ಯಾಹ್ನ 2.30ಕ್ಕೆ ಮುಂದೂಡಿದೆ. ಮಠಾಧೀಶರ ಒಕ್ಕೂಟ, ಹಿಂದೂ ಸರ್ವ ಸಮಾಜಗಳ ಒಕ್ಕೂಟ ಜಂಟಿಯಾಗಿ ಜೂ. 28ರಂದು ಬಸವಕಲ್ಯಾಣದಲ್ಲಿಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದ್ದವು. ಇದಕ್ಕೆ ತಾಲೂಕು ಆಡಳಿತ ಅನುಮತಿ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಸಮಾವೇಶದ ಆಯೋಜಕ ಗುಂಡುರೆಡ್ಡಿ ಕಮಲಾಪುರೆ ಕಲಬುರಗಿ ಹೈಕೋರ್ಟ್ ಪೀಠದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ .ಆರ್ .ಕೃಷ್ಣಕುಮಾರ್ ಹಲವು ಷರತ್ತುಗಳನ್ನು ಸೇರಿಸಿರುವ ಅಫಿಡವಿಟ್ ಸಲ್ಲಿಕೆ ಗೆ ಅರ್ಜಿದಾರರ ಪರ ವಕೀಲರಿಗೆ ಸೂಚನೆ ನೀಡಿದ್ದಾರೆ. ‘‘ಕಾರ್ಯಕ್ರಮದಲ್ಲಿಕನ್ಹೇರಿ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಭಾಷಣ ಮಾತನಾಡದಿದ್ದರೆ ನಡೆಯುತ್ತದೆಯೇ,’’ ಎಂದು ಪ್ರಶ್ನಿಸಿದ ನ್ಯಾಯಮೂರ್ತಿಗಳು, ‘‘ಅದರಂತೆ ಅಫಿಡವಿಟ್ ನಲ್ಲಿಉಲ್ಲೇಖಿಸಬೇಕು,’’ ಎಂದು ಸೂಚನೆ ನೀಡಿದರು. ಇದರ ಜತೆಗೆ ‘‘ಕನ್ಹೇರಿ ಸ್ವಾಮೀಜಿ ಸಮ್ಮುಖದಲ್ಲಿಬೇರೆಯವರು ಕೂಡ ಪ್ರಚೋದನಕಾರಿ ಮಾತಾಡಬಾರದು ಹಾಗೂ ಕಾನೂನು ಸುವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಕಾನೂನು ಸುವ್ಯವಸ್ಥೆ ಹಾಳಾದ್ರೆ ಅದಕ್ಕೆ ಕಾರ್ಯಕ್ರಮ ಆಯೋಜಕರೇ ಹೊಣೆ ಹೊರುತ್ತೀರಾ,’’ ಎಂದು ನ್ಯಾಯಮೂರ್ತಿ ಪ್ರಶ್ನಿಸಿದರು. ಅನುಮತಿ ಬೇಡ ಎಂದ ಎಜಿ:ಸರಕಾರದ ಪರವಾಗಿ ಎ.ಜಿ ಶಶಿಕಿರಣ್ ಶೆಟ್ಟಿ ಅವರು ವಾದ ಮಂಡಿಸಿ, ‘‘ಈ ಹಿಂದೆ ಕನ್ಹೇರಿ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಭಾಷಣದಲ್ಲಿಹಲವು ಅಸಾಂವಿಧಾನಿಕ ಪದಗಳನ್ನು ಬಳಸಿದ್ದಾರೆ. ಈಗಾಗಲೇ ಸ್ಥಳೀಯರು ಕಾರ್ಯಕ್ರಮ ನಡೆಯಬಾರದು ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ ಎಂದು ಈಗಾಗಲೇ ಪೊಲೀಸ್ ವರದಿ ನೀಡಿದೆ. ಇವೆಲ್ಲವುಗಳನ್ನು ನೋಡಿಕೊಂಡು ಕಾರ್ಯಕ್ರಮ ನಡೆಸಲು ತಾಲೂಕು ಆಡಳಿತ ಅನುಮತಿ ನಿರಾಕರಣೆ ಮಾಡಿದೆ. ತಾವೂ ಕೂಡ ಅನುಮತಿ ನೀಡಬಾರದು,’’ ಎಂದು ವಾದ ಮಂಡಿಸಿದರು. ಅರ್ಜಿದಾರರ ಪರ ವಕೀಲರಾದ ವೆಂಕಟೇಶ್ ದಳವಾಯಿ ಅವರು, ‘‘ಸ್ವಾಮೀಜಿಗಳು ಆ ರೀತಿಯ ಭಾಷೆ ಬಳಸುವುದಿಲ್ಲ. ಕನ್ಹೇರಿ ಸ್ವಾಮೀಜಿ ಕೂಡ ಲಿಂಗಾಯತ ಪರಂಪರೆ ಮಠದ ಪೀಠಾಧಿಪತಿಗಳಾಗಿದ್ದಾರೆ. ಆದ್ದರಿಂದ ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕು,’’ ಎಂದು ಮನವಿ ಮಾಡಿದರು. ಎರಡೂ ಕಡೆಯ ವಾದ ಆಲಿಸಿದ ನಂತರ ಹಲವು ಷರತ್ತು ಹಾಕಿರುವ ಅಫಿಡವಿಟ್ ಸಲ್ಲಿಕೆ ಮಾಡುವಂತೆ ಸೂಚನೆ ನೀಡಿದ ಪೀಠ, ವಿಚಾರಣೆಯನ್ನು ಬುಧವಾರ ಮಧ್ಯಾಹ್ನಕ್ಕೆ ಮುಂದೂಡಿದೆ.