ನಾಗರಾಜ್ ನವೀಮನೆ ಮೈಸೂರು ್ಞaಜa್ಟa್ಜ.್ಞavಜಿಞa್ಞಛಿಃಠಿಜಿಞಛಿsಟ್ಛಜ್ಞಿdಜಿa.್ಚಟಞ ಈ ಬಾರಿ ಎನ್ ನಿನೊ ಪ್ರಭಾವದಿಂದಾಗಿ ಮುಂಗಾರು ಮಳೆ ವಾಡಿಕೆಗಿಂತ ಕುಂಠಿತ ಗೊಳ್ಳುವ ಮುನ್ಸೂಚನೆ ರೈತರನ್ನು ಆತಂಕಕ್ಕೆ ದೂಡಿದೆ. ಆದರೆ, ಮೈಸೂರಿನ ಕೃಷಿ ತಜ್ಞ, ಪರಿಸರವಾದಿ ಡಾ. ರಾಮಕೃಷ್ಣಪ್ಪ ಅವರು ಒಣಬೇಸಾಯದ ನೆಲದಲ್ಲಿಬೇರೂರಿದ್ದ ಬದುಕನ್ನು ಪ್ರಕೃತಿಯ ಪರಮ ಸೇವಕನಾಗಿ ರೂಪಿಸಿಕೊಂಡು ತಮ್ಮ 8 ಎಕರೆ ಪ್ರದೇಶ ದಲ್ಲಿ14 ಪರಿಸರ ಕೃಷಿ ಮಾದರಿಗಳನ್ನು ಅಭಿವೃದ್ಧಿ ಪಡಿಸಿ ನೆಮ್ಮದಿ ಕಂಡುಕೊಂಡಿದ್ದಾರೆ. ಮೃದು ಮಣ್ಣು. ಸುತ್ತೆಲ್ಲಒಡ್ಡು. ಬೀಳುವ ಮಳೆ ನೀರು ಸುಲಭಕ್ಕೆ ಜಾರಿ ಹೋಗುವುದಿಲ್ಲ. ಸಮಗ್ರ ಹೀರಿಕೊಳ್ಳುತ್ತದೆ ಸಹಜ ಭೂಮಿ. ಬಾನಿನತ್ತ ಚಾಚುತ್ತಿರುವ ತರಹೇವಾರಿ ಮರಗಳು. ಮಧ್ಯದಲ್ಲಿರಾಗಿ, ತರಕಾರಿ ಸಸ್ಯ ಸಮೃದ್ಧಿ ಇಲ್ಲಿಕಾಣಸಿಗುವ ಸಹಜ ಸೊಬಗು. ತೇವ ನೆಲದಲ್ಲಿಒಮ್ಮೆ ನಾಟಿ ಮಾಡಿದರೆ ಸಾಕು, ಮರಳಿ ನೀರುಣಿಸುವ ಅಗತ್ಯ ಇಲ್ಲ. ತಮ್ಮಷ್ಟಕ್ಕೆ ತಾವೇ ಬೆಳೆಯುತ್ತಾ ಹೋಗುತ್ತವೆ. ಮಳೆಗಾಗಿಯೂ ಇವು ಬಾಯ್ತೆರೆಯುವುದಿಲ್ಲ. ಬಾಡುವುದೂ ಇಲ್ಲ. ಸಸಿಗಳಿಗೆ ಅಗತ್ಯ ಇದ್ದಷ್ಟು ತೇವಾಂಶ ವನ್ನು ಈ ಸಾವಯವ ಭೂಮಿ ಆಟೊಮಾದರಿಯಲ್ಲಿಒದಗಿಸುತ್ತಿರುವುದು ಪವಾಡವಲ್ಲಎನ್ನುತ್ತಾರೆ ಡಾ.ರಾಮಕೃಷ್ಣಪ್ಪ. ಪರಿಸರಕ್ಕೆ ತನ್ನನ್ನು ತಾನು ಶೃಂಗರಿಸಿಕೊಂಡು ಸಾಗುವುದು ಗೊತ್ತು. ನೀರಾವರಿ, ಅತಿಯಾದ ಉಳುಮೆ, ರಾಸಾಯನಿಕ, ರಸಗೊಬ್ಬರಗಳೆಲ್ಲಇತ್ತೀಚಿನ ಆವಿಷ್ಕಾರ. ಇವುಗಳಿಂದಲೇ ಇಂದಿನ ಪ್ರಕೃತಿಯ ಸಂಕಷ್ಟಗಳು ಉಲ್ಬಣಿಸಿವೆ. ಆಹಾರ ಉತ್ಪನ್ನ ದ್ವಿಗುಣ ಗೊಳಿಸುವ ಧಾವಂತದಲ್ಲಿಮನುಷ್ಯ ಇಟ್ಟ ಹೆಜ್ಜೆಗಳಿಂದ ಸಾವಿರ ಸಂಕಷ್ಟ ಸೃಷ್ಟಿಯಾಗಿವೆ ಎನ್ನುವುದನ್ನು ರಾಮಕೃಷ್ಣಪ್ಪ ಅವರ ನೈಸರ್ಗಿಕ ಕೃಷಿ ಮಾದರಿ ಮನವರಿಕೆ ಮಾಡಿಕೊಡುತ್ತದೆ. ನೆಲ, ನೀರು, ಮರ ಮತ್ತು ಮಣ್ಣಿನ ನಡುವಿನ ಸಂಬಂಧವನ್ನು ತಮ್ಮ ಉಸಿರಾಗಿಸಿ ಕೊಂಡ ಜೀವನಯೋಗಿ ರಾಮಕೃಷ್ಣಪ್ಪ. ರಾಜ್ಯದ ತೋಟಗಾರಿಕೆ ಇಲಾಖೆಯಲ್ಲಿಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಲೇ ಅಂಗಾಂಶ ಕೃಷಿ ತಂತ್ರಜ್ಞಾನ ದಂತಹ ನವೀನ ಮಾದರಿ ಕರ್ನಾಟಕಕ್ಕೆ ಪರಿಚಯಿಸಿದವರು. ದೇಶಕ್ಕೆ ಮೊದಲ ಬಾರಿಗೆ ಸಾವಯವ ಕೃಷಿ ನೀತಿಯನ್ನು ರೂಪಿಸಿದ ಪ್ರಮುಖ ಶಿಲ್ಪಿ. ಇವರು ರೂಪಿಸಿದ ಜೀವಸಾರ ಘಟಕಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಕೂಡ ಲಭಿಸಿದೆ. ಇವರ ತೋಟದಲ್ಲಿ200ಕ್ಕೂ ಹೆಚ್ಚು ಬಗೆಯ ಹಣ್ಣಿನ ಮರಗಳಿವೆ. ಮಾವು, ಪಪ್ಪಾಯಿ, ಪ್ಲಂ, ಪೀಚ್ , ಗೋಡಂಬಿ, ಅವಕಾಡೊ, ಪಾಲಕ್ ಸೊಪ್ಪು, ಅಪರೂಪದ ಮಸಾಲೆ ಬೆಳೆಗಳು, ಔಷಧೀಯ ಸಸ್ಯಗಳು ಸೇರಿದಂತೆ ಅನೇಕ ಬಗೆಯ ಬೆಳೆಗಳನ್ನು ಯಾವುದೇ ರಾಸಾಯನಿಕ ಗೊಬ್ಬರ ಅಥವಾ ಕೀಟನಾಶಕ ಬಳಕೆ ಯಿಲ್ಲದೆ ಬೆಳೆಸಲಾಗುತ್ತಿದೆ. ಪಂಚಗವ್ಯ ಮತ್ತು ಜೀವಾಮೃತದಂಥ ಸಾವಯವ ಗೊಬ್ಬರ ಉಣ್ಣಿಸಿಯೇ ಭೂಮಿ ಯನ್ನು ಇಷ್ಟೊಂದು ಫಲವತ್ತುಗೊಳಿಸ ಲಾಗಿದೆ. ಸಾವಯವ ಭೂಮಿಗೆ ಬರ ಎದುರಿಸುವ ಸಾಮರ್ಥ್ಯ ಹೆಚ್ಚಿರುತ್ತದೆ.