ವಿಕ ಸುದ್ದಿಲೊಕ ಬೆಂಗಳೂರು ಕರ್ನಾಟಕದ ಜೀವನಾಡಿ ಕಾವೇರಿ ನದಿಯ ಉಗಮ ಸ್ಥಳ ಹಾಗೂ ರಾಜ್ಯದ ಅತ್ಯಂತ ಅಮೂಲ ನೈಸರ್ಗಿಕ ಸಂಪತ್ತಿನ ತಾಣವಾದ ಕೊಡಗನ್ನು ಯಾವುದೇ ಕಾರಣಕ್ಕೂ ಅತಿಯಾದ ನಗರೀಕರಣ ಮತ್ತು ವಿನಾಶಕಾರಿ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿಹಾಳು ಮಾಡ ಬಾರದು. ರಾಜ್ಯದ ‘ಹಸಿರು ಚಿನ್ನದ ಭಂಡಾರ’ವಾಗಿರುವ ಕೊಡಗು ಮತ್ತು ಮಲೆನಾಡು ಪ್ರದೇಶಗಳ ಸಂರಕ್ಷಣೆಗೆ ಸರಕಾರ ವಿಶೇಷ ಆದ್ಯತೆ ನೀಡಬೇಕು ಎಂದು ಕೊಡಗು- ಕಾವೇರಿ ರಕ್ಷಣಾ ವೇದಿಕೆ ಆಗ್ರಹಿಸಿದೆ. ‘‘ಕೊಡಗು ಕೇವಲ ಒಂದು ಜಿಲ್ಲೆಮಾತ್ರವಲ್ಲ, ಅದು ಕರ್ನಾಟಕದ ಪರಿಸರ ಸಮತೋಲನವನ್ನು ಕಾಪಾಡುವ ಜೀವಾಳ ವಾಗಿದೆ. ಇಲ್ಲಿನ ಅರಣ್ಯ ಸಂಪತ್ತು, ಜೀವ ವೈವಿಧ್ಯತೆ ಹಾಗೂ ಜಲಮೂಲಗಳು ಮುಂದಿನ ಪೀಳಿಗೆಯ ಬದುಕಿಗೆ ಆಧಾರ ವಾಗಿವೆ. ಕೊಡಗು ಮತ್ತು ಮಲೆನಾಡು ಪ್ರದೇಶವನ್ನು ರಾಜ್ಯ ಸರಕಾರ ‘ಗ್ರೀನ್ ಸೇಫ್ಟಿ ಕಾರಿಡಾರ್ ’ (ಹಸಿರು ಸುರಕ್ಷತಾ ಕಾರಿಡಾರ್ ) ಎಂದು ಘೋಷಿಸಿ ವಿಶೇಷ ಪರಿಸರ ಸಂರಕ್ಷಣಾ ವಲಯವಾಗಿ ಅಭಿವೃದ್ಧಿಪಡಿಸಬೇಕು,’’ ಎಂದು ವೇದಿಕೆಯ ಸಂಚಾಲಕ ನಿವೃತ್ತ ಕರ್ನಲ್ ಸಿ.ಪಿ. ಮುತ್ತಣ್ಣ ಪತ್ರಿಕಾಗೋಷ್ಠಿಯಲ್ಲಿಮಂಗಳವಾರ ಒತ್ತಾಯಿಸಿದರು. ‘‘ಪೊನ್ನಂಪೇಟೆಯನ್ನು ಪಟ್ಟಣ ಪಂಚಾಯತ್ ಆಗಿ ಪರಿವರ್ತಿಸಿರುವ ಆದೇಶವನ್ನು ಮರುಪರಿಶೀಲಿಸಬೇಕು ಹಾಗೂ ಕೆ. ನಿಡುಗಣೆ ಗ್ರಾ.ಪಂ. ವ್ಯಾಪ್ತಿಯಲ್ಲಿಕರ್ನಾಟಕ ಗೃಹ ಮಂಡಳಿಯಿಂದ 94 ಎಕರೆಯಲ್ಲಿಕೈಗೆತ್ತಿಕೊಳ್ಳಲಾಗಿರುವ ವಸತಿ ಯೋಜನೆಯನ್ನು ಕೈಬಿಡಬೇಕು,’’ ಎಂದು ಆಗ್ರಹಿಸಿದರು.