ಬೆಂಗಳೂರು ದಕ್ಷಿಣ: ಜಿಗಣಿ ಪುರಸಭೆ 5ನೇ ವಾರ್ಡ್ ನ ಮಧುಮಿತ್ರ ಬಡಾವಣೆ ಸುತ್ತ ರಾಜಕಾಲುವೆ ಹೂಳು ತೆರವಾಗದ ಹಿನ್ನೆಲೆಯಲ್ಲಿನಿವಾಸಿಗಳು ನೆರೆ ಭೀತಿಯಲ್ಲಿದ್ದಾರೆ.
ಜಿಗಣಿ ಕೆರೆಗೆ ಹೊಂದಿಕೊಂಡಿರುವ ಬಡಾವಣೆ ಇದಾಗಿದೆ. ಇತ್ತೀಚೆಗೆ ಸುರಿದ ಮಳೆಗೆ ಕೆರೆಯ ಎಸ್ ಟಿಪಿಗೆ ಹೊಂದಿಕೊಂಡಿರುವ ಪ್ರದೇಶಗಳು ಜಲಾವೃತಗೊಂಡಿದ್ದವು. ರಾಜಕಾಲುವೆ ಸ್ವಚ್ಛಗೊಳಿಸಿ ನೀರಿನ ಸರಾಗ ಹರಿವಿಗೆ ಅನುವು ಮಾಡಿಕೊಡದಿದ್ದರೆ ಮಳೆಗಾಲದಲ್ಲಿತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.‘‘ಮಳೆ ಬಂದರೆ ಮನೆಗಳಿಗೆ ನೀರು ನುಗ್ಗುವ ಸ್ಥಿತಿ ಇದೆ. ರಾಜಕಾಲುವೆಯಲ್ಲಿಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಸೊಳ್ಳೆ, ನೊಣಗಳು ಹೆಚ್ಚಿದ್ದು, ಸಾಂಕ್ರಾಮಿಕ ರೋಗ ಭೀತಿ ಇದೆ. ಹತ್ತಿರದಲ್ಲೇ ಶಾಲೆ ಇದ್ದು, ಅಲ್ಲಿನ ಮಕ್ಕಳಿಗೂ ಸಮಸ್ಯೆಯಾಗುತ್ತಿದೆ,’’ ಎಂದು ಸ್ಥಳೀಯ ನಿವಾಸಿ ನಾಗರಾಜ್ ಹೇಳಿದರು.
‘‘ದಶಕದ ಹಿಂದೆಯೇ ನಿರ್ಮಾಣವಾದ ಬಡಾವಣೆ ಇದಾಗಿದೆ. ರಸ್ತೆಗೆ ಡಾಂಬರು ಹಾಕಿಲ್ಲ, ಮೂಲಸೌಕರ್ಯ ಒದಗಿಸುವ ಕಾಮಗಾರಿಯೂ ನಡೆಯಬೇಕಿದೆ,’’ ಎಂದು ಅವರು ಒತ್ತಾಯಿಸಿದರು.
‘‘ಒತ್ತುವರಿಯಾಗಿರುವುದರಿಂದ ಸಮರ್ಪಕವಾಗಿ ನೀರು ಹರಿದು ಹೋಗುತ್ತಿಲ್ಲ. ಪುರಸಭೆ ಸಭೆಯಲ್ಲಿಈ ಬಗ್ಗೆ ಗಮನಸೆಳೆದಿದ್ದೇನೆ. ಆದರೂ ಅಧಿಕಾರಿಗಳು ಈ ಬಗ್ಗೆ ಗಮನಹರಿಸುತ್ತಿಲ್ಲ,’’ ಎಂದು 5ನೇ ವಾರ್ಡ್ ಪುರಸಭೆ ಸದಸ್ಯ ಪುನೀತ್ ಹೇಳಿದರು.
--- ಕೋಟ್
ರಾಜಕಾಲುವೆ ಸ್ವಚ್ಛತೆ ಕಾಮಗಾರಿ ಆರಂಭಿಸಿದ್ದೇವೆ. ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು.