7.6 ಲಕ್ಷ ಸಸಿ ನೆಡುವ ಆಂದೋಲನ

Contributed byprakashvkhsn@gmail.com|Vijaya Karnataka

ಹಾಸನ ಜಿಲ್ಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ 7.6 ಲಕ್ಷ ಸಸಿ ನೆಡುವ ಮಹತ್ವಾಕಾಂಕ್ಷೆಯ ಆಂದೋಲನಕ್ಕೆ ಚಾಲನೆ ನೀಡಲಾಗಿದೆ. ಪರಿಸರ ಸಂರಕ್ಷಣೆ, ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು, ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡಲು ಹಸಿರು ಸಂರಕ್ಷಣೆಗೆ ಎಲ್ಲರೂ ಪಣತೊಡಬೇಕು.

76 lakh tree planting movement world environment day

*ಕೇಂದ್ರ ಗ್ರಂಥಾಲಯ, ಹುಣಸಿನಕೆರೆ ಅಂಗಳದಲ್ಲಿಗಿಡ ನೆಟ್ಟು ಚಾಲನೆ | ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ

ವಿಕ ಸುದ್ದಿಲೋಕ ಹಾಸನ

‘ಪರಿಸರ ರಕ್ಷಿಸಿ, ನಾಡು ಉಳಿಸಿ’ ಎಂಬ ಘೋಷಣೆಯೊಂದಿಗೆ ಜಿಲ್ಲಾದ್ಯಂತ 7.6 ಲಕ್ಷ ಸಸಿ ನೆಡುವ ಆಂದೋಲನಕ್ಕೆ ಶುಕ್ರವಾರ ಚಾಲನೆ ನೀಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು.

ಜಿಲ್ಲಾಡಳಿತ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ಮಹಾನಗರ ಪಾಲಿಕೆ, ಹಾಸನ ಮತ್ತು ಕೈಗಾರಿಕೆಗಳು ಇವರ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಕೇಂದ್ರ ಗ್ರಂಥಾಲಯ, ಹುಣಸಿನಕೆರೆ ಅಂಗಳದಲ್ಲಿಗಿಡ ನೆæಡಲಾಯಿತು.

ನಂತರ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿಜಿಲ್ಲಾಡಳಿತ, ಸಂಘ-ಸಂಸ್ಥೆಗಳ ಸಹಯೋಗದಲ್ಲಿಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಕೌಟುಂಬಿಕ ನ್ಯಾಯಾಲಯದ ಒಂದನೇ ಅಧಿಕ ಪ್ರಧಾನ ನ್ಯಾಯಾಧೀಶ ಪದ್ಮಪ್ರಸಾದ್ ಅವರು ಜ್ಯೋತಿ ಬೆಳಗಿಸಿ ಹಾಗೂ ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿ, ‘‘ಕಲುಷಿತವಾದ ಪರಿಸರವನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿಪರಿಸರದ ಕಡೆಗೆ ಸಾಗೋಣ. ಪರಿಸರ ಜಾಗೃತಿ ಮೂಡಿಸುವ ಕಾರ್ಯ ಇನ್ನಷ್ಟು ಪರಿಣಾಮಕಾರಿಯಾಗಿ ಆಗಬೇಕಿದೆ. ವಿಶ್ವ ಸಂಸ್ಥೆಯು 1972ರಲ್ಲಿಪರಿಸರ ಸಂರಕ್ಷಣೆಯ ಮಹತ್ವವನ್ನು ಜಗತ್ತಿಗೆ ಸಾರುವ ಉದ್ದೇಶದಿಂದ ವಿಶ್ವ ಪರಿಸರ ದಿನವನ್ನು ಆಚರಿಸಲು ಆರಂಭಿಸಿತು. ಇಂದಿನ ದಿನಗಳಲ್ಲಿಪರಿಸರ ಮಾಲಿನ್ಯ, ಹವಾಮಾನ ಬದಲಾವಣೆ, ಜೈವಿಕ ವೈವಿಧ್ಯತೆಯ ನಾಶ ಹಾಗೂ ನೈಸರ್ಗಿಕ ಸಂಪನ್ಮೂಲಗಳ ದುರ್ಬಳಕೆ ಜಾಗತಿಕ ಮಟ್ಟದಲ್ಲಿಗಂಭೀರ ಸವಾಲುಗಳಾಗಿ ಪರಿಣಮಿಸಿವೆ,’’ ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿ ಕೆ.ಎಸ್ .ಲತಾಕುಮಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ‘‘ಜನರಲ್ಲಿಪರಿಸರ ಜಾಗೃತಿ ಮೂಡಿಸುವ ಕಾರ್ಯ ಹೆಚ್ಚಾಗಬೇಕು. ಪರಿಸರ ಸಂರಕ್ಷಣೆ ಮನೆಯ ಸ್ವಚ್ಛತೆಯಿಂದಲೇ ಆರಂಭವಾಗಬೇಕು. ಪ್ರತಿಯೊಬ್ಬ ನಾಗರಿಕರು ತಮ್ಮ ಮನೆಯಲ್ಲಿಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸ್ನೇಹಿ ಜೀವನಶೈಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ,’’ ಎಂದು ಹೇಳಿದರು.

‘‘ಜಿಲ್ಲಾದ್ಯಂತ ಏಳರಿಂದ ಎಂಟು ಲಕ್ಷ ಸಸಿಗಳನ್ನು ನೆಡುವ ಮಹತ್ವಾಕಾಂಕ್ಷೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಜೂನ್ ನಿಂದ ಆಗಸ್ಟ್ ತಿಂಗಳವರೆಗೆ ಜಿಲ್ಲೆಯಾದ್ಯಂತ ಸಸಿ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಶಾಲೆಗಳು, ಕಾಲೇಜುಗಳು, ಸರಕಾರಿ ಕಚೇರಿಗಳು, ಕೈಗಾರಿಕೆಗಳು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು,’’ ಎಂದು ತಿಳಿಸಿದರು.

‘‘ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡಬೇಕಾದರೆ ಈಗಿನಿಂದಲೇ ಹಸಿರು ಸಂರಕ್ಷಣೆಯತ್ತ ಎಲ್ಲರೂ ಪಣತೊಡಬೇಕು,’’ ಎಂದರು.

ರಾಜ್ಯಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಆರ್ .ಭಾಸ್ಕರ್ , ಹಿರಿಯ ಸಿವಿಲ್ ನ್ಯಾಯಾಧೀಶೆ ಜಿ.ಕೆ.ದಾಕ್ಷಾಯಿಣಿ, ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣವರ್ , ಡಿವೈಎಸ್ಪಿ ಪರಶುರಾಮ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು, ಸ್ಕೌಟ್ಸ್ , ಗೈಡ್ಸ್ ವಿದ್ಯಾರ್ಥಿಗಳು, ಪರಿಸರ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹಾಜರಿದ್ದರು.

ಪರಿಸರ ರಕ್ಷಣೆ ಅಮೂಲ್ಯ ಉಡುಗೊರೆ

ಪರಿಸರ ರಕ್ಷಣೆ ಅಮೂಲ್ಯ ಉಡುಗೊರೆ, ಹಸಿರು ಪರಿಸರವೇ ಆರೋಗ್ಯಕರ ಸಮಾಜದ ಅಡಿಪಾಯ ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ಹೇಳಿದರು.

ಹಾಸನ ಮಹಾನಗರ ಪಾಲಿಕೆ ಸಹಯೋಗದಲ್ಲಿಶುಕ್ರವಾರ ನಗರದ 80 ಅಡಿ ರಸ್ತೆಯ ಮಧ್ಯದ ರಸ್ತೆ ವಿಭಜಕದಲ್ಲಿಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘‘ಹಸಿರು ಹಾಸನ - ಸ್ವಚ್ಛ ಹಾಸನ - ಸುಂದರ ಹಾಸನ ಎಂಬ ಸಂಕಲ್ಪದೊಂದಿಗೆ ಪರಿಸರ ಸಂರಕ್ಷಣೆ ಹಾಗೂ ಹಸಿರು ಅಭಿವೃದ್ಧಿಯತ್ತ ಮಹತ್ವದ ಹೆಜ್ಜೆ ಇಡಲಾಗಿದೆ,’’ ಎಂದು ಸಂತಸ ವ್ಯಕ್ತಪಡಿಸಿದರು.

‘‘ಹವಾಮಾನ ವೈಪರೀತ್ಯ, ಪರಿಸರ ಮಾಲಿನ್ಯ, ಜಾಗತಿಕ ತಾಪಮಾನ ಏರಿಕೆಯಂತಹ ಗಂಭೀರ ಸವಾಲುಗಳಿಗೆ ಗಿಡಮರಗಳೇ ಪರಿಣಾಮಕಾರಿ ಪರಿಹಾರ. ಒಂದು ಗಿಡ ಕೇವಲ ಮರವಾಗಿ ಬೆಳೆಯುವುದಲ್ಲ, ಅದು ಮುಂದಿನ ಪೀಳಿಗೆಗೆ ಶುದ್ಧ ಗಾಳಿ, ನೆರಳು, ಜೀವವೈವಿಧ್ಯ ಮತ್ತು ಆರೋಗ್ಯಕರ ಪರಿಸರವನ್ನು ಕೊಡುಗೆಯಾಗಿ ನೀಡುತ್ತದೆ,’’ ಎಂದು ತಿಳಿಸಿದರು.

‘‘ಹೆಚ್ಚುತ್ತಿರುವ ನಗರೀಕರಣ, ಅರಣ್ಯ ನಾಶ, ಪ್ಲಾಸ್ಟಿಕ್ ಬಳಕೆ ಹಾಗೂ ಮಾಲಿನ್ಯದಿಂದ ಪ್ರಕೃತಿಯ ಸಮತೋಲನ ಹದಗೆಡುತ್ತಿದೆ. ಇದರಿಂದ ಹವಾಮಾನ ವೈಪರೀತ್ಯ, ನೀರಿನ ಕೊರತೆ, ಉಷ್ಣಾಂಶ ಏರಿಕೆ ಸಮಸ್ಯೆ ಎದುರಾಗುತ್ತಿದೆ. ಗಿಡ ನೆಟ್ಟು ಪೋಷಿಸುವ ಮೂಲಕ ಎಲ್ಲರೂ ಪರಿಸರ ಸಂರಕ್ಷಣೆಗೆ ಕೈಜೋಡಿಸ ಬೇಕಿರುವುದು ಅನಿವಾರ್ಯವಾಗಿದೆ,’’ ಎಂದು ಹೇಳಿದರು.