ಚೂರು

Contributed byVinayaka Naik P|Vijaya Karnataka

ದಾವಣಗೆರೆಯಲ್ಲಿ ನಿರ್ಮಾಣ ಹಂತದಲ್ಲಿರುವ ಡಾ.ಎಂ.ಸಿ. ಮೋದಿ ವೃತ್ತದ ಕಾಮಗಾರಿ ಅವೈಜ್ಞಾನಿಕವಾಗಿದೆ. ಸಂಚಾರ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ರಸ್ತೆ ಸುರಕ್ಷತೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕಾಮಗಾರಿಯನ್ನು ತಕ್ಷಣವೇ ಮರುಪರಿಶೀಲಿಸಬೇಕು ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಹಳ್ಳಿ ರಮೇಶ್‌ ಆಗ್ರಹಿಸಿದ್ದಾರೆ. ನಿಯಮ ಉಲ್ಲಂಘನೆಯಿಂದ ಅಪಘಾತಗಳಿಗೆ ಆಹ್ವಾನ ನೀಡಿದಂತಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

dr mc modi circle construction poses threat to public safety immediate reassessment needed

ಅವೈಜ್ಞಾನಿಕ ಕಾಮಗಾರಿ ಮರು ಪರಿಶೀಲಿಸಿ

ದಾವಣಗೆರೆ: ನಗರದಲ್ಲಿಇತ್ತೀಚೆಗೆ ನಿರ್ಮಾಣವಾಗುತ್ತಿರುವ ಡಾ.ಎಂ.ಸಿ. ಮೋದಿ ವೃತ್ತದ ಕಾಮಗಾರಿಯು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಸಂಚಾರ ನಿಯಮ ಹಾಗೂ ಸರಕಾರಿ ಗೆಜೆಟ್ ಆದೇಶಗಳನ್ನು ಗಾಳಿಗೆ ತೂರಿ ನಿರ್ಮಿಸಲಾಗುತ್ತಿದೆ. ನಗರದ ರಸ್ತೆ ಸುರಕ್ಷತೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕಾಮಗಾರಿಯನ್ನು ತಕ್ಷಣವೇ ಮರುಪರಿಶೀಲಿಸಬೇಕು ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಹಳ್ಳಿ ರಮೇಶ್ ಒತ್ತಾಯಿಸಿದ್ದಾರೆ.

ಸರಕಾರಿ ಗೆಜೆಟ್ ನಿಯಮಗಳು ಹಾಗೂ ಐಆರ್ ಸಿ ನಿಯಮಾವಳಿಗಳ ಪ್ರಕಾರ, ಯಾವುದೇ ವೃತ್ತದ ಮಧ್ಯಭಾಗದಲ್ಲಿನಿರ್ಮಿಸುವ ಸ್ಟ್ರಕ್ಚರ್ ಕನಿಷ್ಠ ಅಡಿ ಎತ್ತರ ಇರಬೇಕು. ವೃತ್ತದ ಒಂದು ಬದಿಯಲ್ಲಿನಿಂತರೆ ಉಳಿದ ಮೂರು ಬದಿಗಳಿಂದ ಬರುವ ವಾಹನ ಚಾಲಕರಿಗೆ ಸ್ಪಷ್ಟವಾಗಿ ಕಾಣಿಸುವಂತೆ ಗೋಚರತೆಯ ತ್ರಿಕೋನ ಕಾಪಾಡಿಕೊಳ್ಳಬೇಕಿದೆ. ಪಾಲಿಕೆ ವ್ಯಾಪ್ತಿಯಲ್ಲಿಇಂತಹ ವೃತ್ತಗಳನ್ನು ನಿರ್ಮಿಸುವಾಗ 3ಐ ವಿಷನ್ ನಿಯಮ ಪಾಲಿಸಬೇಕು. ಆದರೆ, ಪ್ರಸ್ತುತ ನಿರ್ಮಾಣವಾಗುತ್ತಿರುವ ವೃತ್ತದಲ್ಲಿಕಾಂಕ್ರೀಟ್ ಸ್ಟ್ರಕ್ಚರ್ ಎತ್ತರ ತೀರಾ ಹೆಚ್ಚಾಗಿರುವುದರಿಂದ ಎದುರುಗಡೆಯಿಂದ ಬರುವ ವಾಹನಗಳು ಕಾಣಿಸದಂತಾಗಿದೆ. ನಿಯಮ ಉಲ್ಲಂಘನೆಯಾಗಿ, ಅಪಘಾತಗಳಿಗೆ ಮುಕ್ತ ಆಹ್ವಾನ ನೀಡುವಂತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ವೃತ್ತದ ವಿನ್ಯಾಸಕ್ಕೆ ಲೋಕೋಪಯೋಗಿ ಇಲಾಖೆ ಅನುಮತಿ ಪಡೆದಿದ್ದರೂ, ತಾಂತ್ರಿಕ ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ. ಯಾವುದೇ ಕಾಂಕ್ರೀಟ್ ಸ್ಟ್ರಕ್ಚರ್ ಅಥವಾ ಜಾಹೀರಾತು ಫಲಕಗಳು ವಾಹನ ಸವಾರರ ದೃಷ್ಟಿಗೆ ಅಡ್ಡಿಪಡಿಸಬಾರದು ಎಂಬ ನಿಯಮವಿದ್ದರೂ ಪ್ರಸ್ತುತ ಕಾಮಗಾರಿಗಳಲ್ಲಿಈ ಎಲ್ಲನಿಯಮಗಳನ್ನು ನಿರ್ಲಕ್ಷಿಸಲಾಗಿದೆ. ಮಹಾನಗರ ಪಾಲಿಕೆಯು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆ ಅಡಿಯಲ್ಲಿಮತ್ತು ಲೋಕೋಪಯೋಗಿ ಇಲಾಖೆಯ ನಿಯಮಗಳ ಪ್ರಕಾರ ಯೋಜನಾ ನಕ್ಷೆಯನ್ನು ಅನುಮೋದಿಸಬೇಕಿರುತ್ತದೆ. ಈ ಎಲ್ಲಾನಿಯಮ ಹಾಗೂ ಷರತ್ತುಗಳನ್ನು ಅಳವಡಿಸಿಕೊಂಡು ವೃತ್ತ ನಿರ್ಮಿಸಿದರೆ ಮುಂದಿನ ಪೀಳಿಗೆಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ, ಲೋಪದೋಷಗಳನ್ನು ಸರಿಪಡಿಸಬೇಕು ಎಂದು ಅವರು ಪ್ರಕಟಣೆಯಲ್ಲಿಆಗ್ರಹಿಸಿದ್ದಾರೆ.

--------

ಕಾನ್ವೆಂಟ್ ನಲ್ಲಿಪರಿಸರ ದಿನಾಚರಣೆ

ದಾವಣಗೆರೆ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಗರದ ಆಂಜನೇಯ ಬಡಾವಣೆಯ ಎಂ.ಇ.ಎಸ್ . ಕಾನ್ವೆಂಟ್ ಶಾಲೆಯಲ್ಲಿಸಸಿ ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು.

ಬಿಇಒ ಪುಷ್ಪಲತಾ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿಶಾಲೆಯ ಅಧ್ಯಕ್ಷ ಕೆ.ಪಿ.ಮಲ್ಲೇಶ್ , ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಪ್ರದೀಪ್ , ಆಡಳಿತ ಸಂಯೋಜನಾಧಿಕಾರಿ ಸೌಮ್ಯ ಎಚ್ .ಟಿ.ಬಿ, ಪ್ರಾಂಶುಪಾಲ ಡಾ. ವಾಗೀಶ್ ಹಿರೇಮಠ ಇದ್ದರು.

-----

ರಾಷ್ಟ್ರೀಯ ವಿಚಾರ ಸಂಕಿರಣ ಇಂದು

ದಾವಣಗೆರೆ: ಬಾಪೂಜಿ ವಿದ್ಯಾಸಂಸ್ಥೆಯ ಆರ್ ಎಲ್ ಕಾನೂನು ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ವತಿಯಿಂದ ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ‘ಆಡಳಿತದಲ್ಲಿಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಬಲಪಡಿಸುವಲ್ಲಿಲೋಕಪಾಲ ವ್ಯವಸ್ಥೆಯ ಪಾತ್ರ’ ವಿಷಯ ಕುರಿತು ಜೂ.6ರಂದು ಬೆಳಗ್ಗೆ 10 ಗಂಟೆಗೆ ರಾಷ್ಟ್ರೀಯ ವಿಚಾರಸಂಕಿರಣ ಏರ್ಪಡಿಸಲಾಗಿದೆ.

ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಹಾಗೂ ಹೊಸದಿಲ್ಲಿಯ ಲೋಕಪಾಲ ಭಾರತದ ನ್ಯಾಯಾಂಗ ಸದಸ್ಯ ಎಲ್ . ನಾರಾಯಣಸ್ವಾಮಿ ಆಗಮಿಸಲಿದ್ದಾರೆ. ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಆರ್ .ಎಲ್ . ಉಮಾಶಂಕರ್ ಅಧ್ಯಕ್ಷತೆ ವಹಿಸುವರು. ಆರ್ .ಎಲ್ . ಕಾನೂನು ಕಾಲೇಜಿನ ಪ್ರಾಚಾರ್ಯ ಬಿ.ಪಿ. ಬಸವನಗೌಡ, ನಿರ್ದೇಶಕ ಎಂ. ಸೋಮಶೇಖರಪ್ಪ ಉಪಸ್ಥಿತರಿರುವರು.

-------

7ಕ್ಕೆ ರಕ್ತದಾನ ಶಿಬಿರ

ದಾವಣಗೆರೆ: ಜಿಲ್ಲಾವಿತರಕರ ಸಂಘ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ದಾವಣಗೆರೆ ಶಾಖೆ ಇವರ ಆಶ್ರಯದಲ್ಲಿಜೂನ್ 7ರ ಭಾನುವಾರ ಬೆಳಗ್ಗೆ 10:30 ಗಂಟೆಯಿಂದ ನಗರದ ದೇವರಾಜ್ ಅರಸ್ ಬಡಾವಣೆಯ ಅನ್ನಪೂರ್ಣೇಶ್ವರಿ ದೇವಸ್ಥಾನದ ಹಿಂಭಾಗದಲ್ಲಿರುವ ಲಯನ್ಸ್ ವನದಲ್ಲಿರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.

ಶಿಬಿರದಲ್ಲಿಹೆಚ್ಚಿನ ಜನರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ದಾವಣಗೆರೆ ಶಾಖೆಯ ಅಧ್ಯಕ್ಷ ದತ್ತರಾಜ್ ಆರ್ ಜಿ, ಉಪಾಧ್ಯಕ್ಷ ಬೆಳ್ಳೊಡಿ ಶಿವಕುಮಾರ್ , ಕಾರ್ಯದರ್ಶಿ ಆನಂದ್ ಸಂಗಪ್ಪ ಜಿರಲಿ ಹಾಗೂ ಖಜಾಂಚಿ ಕಿರಣ್ ಎಂ. ಜೈನ್ ಪ್ರಕಟಣೆಯಲ್ಲಿಕೋರಿದ್ದಾರೆ.