ದೇವಯ್ಯ ಗುತ್ತೇದಾರ್ , ಕಲಬುರಗಿ dಛಿvayya.ಜ್ಠಠಿಠಿಛಿda್ಟಃಠಿಜಿಞಛಿsಟ್ಛಜ್ಞಿdಜಿa.್ಚಟಞ ಇಲ್ಲಿನ ಮಹಾನಗರ ಪಾಲಿಕೆ ಆರ್ಥಿಕವಾಗಿ ದಿವಾಳಿಯಾಗಿದ್ದು, ಆಯುಕ್ತರಾಗಿರುವ ಐಎಎಸ್ ಅಧಿಕಾರಿಯಿಂದ ಹಿಡಿದು ಪೌರಕಾರ್ಮಿಕರಿಗೆ ಫೆಬ್ರವರಿ ತಿಂಗಳ ಸಂಬಳ ಪಾವತಿಯಾಗಿಲ್ಲ. ಪ್ರತಿ ತಿಂಗಳ 5ನೇ ತಾರೀಖಿಗೆ ಆಗಬೇಕಿದ್ದ ಸಂಬಳ ಈ ಬಾರಿ ಮಾರ್ಚ್ 10ನೇ ತಾರೀಖು ಮುಗಿದರೂ ಪಾವತಿಯಾಗಿಲ್ಲ. ಇದು ಸಿಬ್ಬಂದಿಯಲ್ಲಿಕಳವಳಕ್ಕೆ ಕಾರಣವಾಗಿದೆ. ಸಂಪನ್ಮೂಲಗಳ ಕೊರತೆಯಿಂದ ಹಣಕಾಸಿನ ತೀವ್ರ ಮುಗ್ಗಟ್ಟು ಎದುರಿಸುತ್ತಿದೆ. ಸಂಬಳ ಇಲ್ಲದೇ ಇದ್ದರಿಂದ ಪೌರ ಕಾರ್ಮಿಕರಿಂದ ಹಿಡಿದು ತಳ ಹಂತದ ಸಿಬ್ಬಂದಿ ಜೀವನ ನಿರ್ವಹಣೆ ಕಷ್ಟವಾಗಿದೆ. ಸಾಲ ಮಾಡಿ ಕುಟುಂಬ ನಿರ್ವಹಣೆ ಮಾಡುವುದು ಅನಿವಾರ್ಯವಾಗಿದೆ. ರಾಜ್ಯದ ಇತರ ಪಾಲಿಕೆಗಳು ಆರ್ಥಿಕವಾಗಿ ಸ್ಥಿತಿ ಚೆನ್ನಾಗಿದ್ದು, ಸಂಬಳಕ್ಕಾಗಿ ಪರದಾಡುವ ಸ್ಥಿತಿ ಇಲ್ಲ. ಆದರೆ ಕಲಬುರಗಿ ಪಾಲಿಕೆ ಮಾತ್ರ ಅಧೋಗತಿಗೆ ಹೋಗುತ್ತಿದೆ. ಸಂಬಳ ಯಾಕೆ ಇಲ್ಲ: ಪಾಲಿಕೆಯಲ್ಲಿಗ್ರೂಪ್ ‘ಎ’ದಿಂದ ಹಿಡಿದು ಗ್ರೂಪ್ ‘ಡಿ’ವರೆಗೆ ಒಟ್ಟು 346 ಸಿಬ್ಬಂದಿ ಇದ್ದು, 1,000 ಪೌರ ಕಾರ್ಮಿಕರಿದ್ದಾರೆ. ಪ್ರತಿ ತಿಂಗಳು 5.50 ಕೋಟಿ ರೂ. ಸಂಬಳಕ್ಕೆ ಪಾವತಿಸಲಾಗುತ್ತದೆ. ಸಿಬ್ಬಂದಿ ಸಂಬಳಕ್ಕೆ ಬೇಕಾಗುವ ಆರ್ಥಿಕ ಸಂಪನ್ಮೂಲಗಳನ್ನು ಪಾಲಿಕೆಯೇ ಕ್ರೋಡೀಕರಣ ಮಾಡಿಕೊಳ್ಳಬೇಕು. ತೆರಿಗೆ ಸಂಗ್ರಹ ಪರಿಣಾಮಕಾರಿಯಾಗಿ ಆಗದೇ ಇರುವುದು, ಪಾಲಿಕೆಯ ಆಸ್ತಿಗಳ ಬಾಡಿಗೆ ಸರಿಯಾಗಿ ಆಗದೇ ಇರುವುದು ಸೇರಿದಂತೆ ಹಲವು ಕಾರಣಗಳಿಂದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಿದೆ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ. ದಶಕಗಳ ಹಿಂದೆ ರಸ್ತೆ ಅಗಲೀಕರಣದಲ್ಲಿಭೂಮಿ ಕಳೆದುಕೊಂಡವರಿಗೆ 300 ಕೋಟಿ ರೂ.ಗಳ ಪರಿಹಾರ ನೀಡಬೇಕೆಂದು ಕೋರ್ಟ್ ಆದೇಶಿಸಿದೆ. ಆದರೆ ಪಾಲಿಕೆಯಲ್ಲಿಹಣ ಇಲ್ಲ. ಪರಿಹಾರ ವಿಳಂಬವಾಗಿದ್ದರಿಂದ ಪಾಲಿಕೆ ಕಂಪ್ಯೂಟರ್ ಗಳು ಜಪ್ತಿಯಾಗಿದ್ದು, ತೆರಿಗೆ ಸಂಗ್ರಹದಿಂದ ಹಿಡಿದು ಜನನ ಪ್ರಮಾಣ ಪತ್ರ ಕೊಡಲು ಸಹ ಕಂಪ್ಯೂಟರ್ ಗಳು ಇಲ್ಲ. ಹೀಗಾಗಿ ತೆರಿಗೆ ಸಂಗ್ರಹ ಆಗದೇ ಇದ್ದರಿಂದ ಪಾಲಿಕೆಯ ಹಣಕಾಸು ಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎನ್ನುತ್ತಾರೆ ಅಧಿಕಾರಿಗಳು. ಕಾಯಂ ಸಿಬ್ಬಂದಿಯ ಸಂಬಳದಲ್ಲಿಶೇ 80ರಷ್ಟನ್ನು ರಾಜ್ಯ ಸರಕಾರ ನೀಡಿದೆ. ಆದರೆ ಉಳಿದ ಶೇ 20ರಷ್ಟು ಸ್ಥಳೀಯ ಸಂಪನ್ಮೂಲಗಳಿಂದ ಸಂಗ್ರಹಿಸಿ ಸಂಬಳ ಪಾವತಿಸಬೇಕು. ಆದರೆ ಅಷ್ಟು ಸಂಪನ್ಮೂಲ ಸಂಗ್ರಹ ಆಗದೇ ಇರುವುದರಿಂದ ಸಂಬಳ ನೀಡಲು ಟ್ರಬಲ್ ಆಗುತ್ತಿದೆ ಎಂದು ಮೂಲಗಳು ತಿಳಿಸಿವೆ.

