ಮನುಷ್ಯನಿಗೆಷ್ಟು ಮಿದುಳು?
ಡಾ.ಲಕ್ಷ್ಮಣ ವಿ ಎ
ಇಂಟ್ರೊ: ದೇಹವೆಂಬ ತೊಟ್ಟಿಲು ಕರುಳು ಮತ್ತು ಮಿದುಳು ಮತ್ತು ಹೃದಯಕ್ಕೆ ಎಳೆದು ಕಟ್ಟಿದ ಹಗ್ಗದ ಹಾಗೆ.
ಅಕ್ಟೋಪಸ್ ಗೆ ಒಂಬತ್ತು ಮಿದುಳುಗಳಿವೆ ಎಂದು ಹೇಳುತ್ತಾರೆ. ಆದರೆ ಮನುಷ್ಯನಿಗೆ ಎಷ್ಟು ಮಿದುಳಿರುವುದು? ಮೂರು ಮಿದುಳು ಇವೆ.
ಮನುಷ್ಯನ ಮಿದುಳು ತನ್ನ ಮೇಲಿನ ಒತ್ತಡ ಕಡಿಮೆ ಮಾಡಿಕೊಳ್ಳಲು ಅಥವಾ ದೇಹದ ಇತರ ಭಾಗಗಳ ವಿಷಯದಲ್ಲಿಅನ್ಯಥಾ ಮೂಗು ತೂರಿಸದೆ ಇರಲು ನಿರ್ಧರಿಸಿದಂತೆ ತನ್ನ ಅಧಿಕಾರವನ್ನು ವಿಕೇಂದ್ರೀಕರಿಸಿ ಹೃದಯ ಮತ್ತು ಕರುಳಿಗೆ ಸ್ವತಂತ್ರ ನಿರ್ವಣೆಯ ಖಾತೆಯನ್ನು ಬಿಟ್ಟು ಕೊಟ್ಟಿದೆ.
ಸಾಮಾನ್ಯವಾಗಿ ಪ್ರೀತಿ ಪ್ರೇಮ ಸಂಬಂಧಗಳ ನಿರ್ವಣೆಯಲ್ಲಿನಾವು ಬುದ್ಧಿಯ ಮಾತು ನಿರ್ಲಕ್ಷಿಸಿ ಹೃದಯದ ಮಾತನ್ನು ಕೇಳಿ ಸೋತು ಗೆಲ್ಲುತ್ತೇವೆ. ಬುದ್ಧಿಯ ಮಾತು ಕೇಳಿ ಗೆದ್ದು ಸೋಲುತ್ತೇವೆ. ಕಣ್ಣು ಅರಿಯದು ಕರಳು ಅರಿಯದೇ ಎಂಬ ಮಾತನ್ನು ನಮ್ಮ ಕಾವ್ಯ ಲೋಕದ ಪೂರ್ವ ಸೂರಿಗಳೇ ಹೇಳಿದ್ದಾರೆ. ಯಾವುದಾದರೂ ಹೃದಯ ವಿದ್ರಾವಕ ದೃಶ್ಯ ನೋಡಿದಾಗ ಕೇಳಿದಾಗ ಮಿದುಳಿಗಿಂತ ಮೊದಲು ನಮ್ಮ ಕರಳು ಚುರ್ ಎನ್ನುವುದು ಇದೇ ಕಾರಣಕ್ಕೆ. ಇದಕ್ಕೆ ಪೂರಕವಾಗಿ ಕೇಂದ್ರ ಮಿದುಳಿನಲ್ಲಿಸುಮಾರು 86 ಶತಕೋಟಿ ನರಕೋಶಗಳಿದ್ದರೆ ದೇಹದ ಎರಡನೇ ಮಿದುಳು ಹೃದಯದ ಸ್ವಂತ ನರಮಂಡಲದಲ್ಲಿಸುಮಾರು 40,000 ನರಕೋಶಗಳಿವೆ. ಹಾಗೆಯೇ ಮೂರನೆಯ ಮಿದುಳು ಕರುಳಿನಲ್ಲಿಸುಮಾರು 200-600 ಮಿಲಿಯನ್ ನರಕೋಶಗಳಿವೆ.
ಜೋ ಮಾರ್ಟಿನೋ ಅವರ ಎಂಬೋಡೀಡ್ ಸೆನ್ಸ್ ಮೇಕಿಂಗ್ ಎಂಬ ಪರಿಕಲ್ಪನೆಯು ಈ ಮೂರು ಮಿದುಳಗಳ ಸಂಯೋಜಿತ ಕಾರ್ಯವನ್ನು ಚೆನ್ನಾಗಿ ವಿವರಿಸುತ್ತದೆ. ಇದು ನಮ್ಮ ತಲೆ, ಹೃದಯ ಮತ್ತು ಕರುಳು ಎಂಬ ಮೂರು ಮಿದುಳುಗಳು ಹೇಗೆ ಜಗತ್ತನ್ನು ಗ್ರಹಿಸುತ್ತವೆ ಎಂಬುದನ್ನು ವಿವರಿಸುತ್ತದೆ. ಪ್ರತಿಯೊಂದೂ ವಿಭಿನ್ನ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ಒಂದೇ ಸಮಯದಲ್ಲಿಮಾಹಿತಿಯನ್ನು ಪ್ರಕ್ರಿಯೆಗೊಳಿಸುತ್ತದೆ.
ಮೂರು ಮಿದುಳುಗಳ ಕಾರ್ಯ
ಮುಖ್ಯವಾಗಿ ಕೇಂದ್ರ ಮಿದುಳು ತರ್ಕ, ಮಾದರಿಗಳು ಮತ್ತು ವಿವರಣೆಗಳನ್ನು ಹುಡುಕುತ್ತದೆ. ‘ಏಕೆ ಇದು ನಡೆಯುತ್ತಿದೆ?’ ಮತ್ತು ‘ಅತ್ಯಂತ ಬುದ್ಧಿವಂತ ಕ್ರಮ ಯಾವುದು?’ ಎಂಬ ಪ್ರಶ್ನೆಗಳನ್ನು ಕೇಳುತ್ತದೆ. ಇದು ಸಮಸ್ಯೆ-ಪರಿಹಾರ ಮತ್ತು ಅಮೂರ್ತ ಚಿಂತನೆಯನ್ನು ಮಾಡಲು ಪ್ರೇರೇಪಿಸುತ್ತದೆ. ಆದರೆ ಕೆಲವೊಮ್ಮೆ ಈ ಯೋಚನೆ ದೇಹವು ಈಗಾಗಲೇ ತಪ್ಪು ಎಂದು ತಿಳಿದಿರುವ ಸಂದರ್ಭಗಳನ್ನು ಸಮರ್ಥಿಸಿಕೊಂಡು ತನ್ನ ಮೂಲ ತರ್ಕವೇ ಸರಿ ಎನ್ನುವ ಹಾಗೆ ಮಾಡಬಹುದು.
ಹೃದಯ ವೆನ್ನುವುದು ಹೆಚ್ಚು ಕಾಳಜಿಯ ಮೂಲಕ ವಿಷಯಗಳನ್ನು ವಿಮರ್ಶಿಸುತ್ತದೆ. ‘ಇದು ನಿಮಗೆ ಸರಿ ಎನಿಸುತ್ತಿದೆಯಾ? ಮತ್ತು ಇದು ಯಾರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ?’ ಎಂಬ ಪ್ರಶ್ನೆಗಳನ್ನು ಕೇಳುತ್ತದೆ. ಇದು ಸಂಬಂಧಗಳು ಮತ್ತು ಮುಖ್ಯ ವಿಷಯಗಳ ದೃಷ್ಟಿಯಿಂದ ಜಗತ್ತನ್ನು ನೋಡುತ್ತದೆ. ಕರುಣೆ ಮತ್ತು ನೈತಿಕ ಸ್ಪಷ್ಟತೆಯನ್ನು ತರುತ್ತದೆ.
ಕರುಳೆನ್ನುವುದು ನಿರಂತರವಾಗಿ ಸುರಕ್ಷತೆಗಾಗಿ ಸ್ಕ್ಯಾ ನ್ ಮಾಡುತ್ತಿರುತ್ತದೆ. ಹಿಂದಿನ ಅನುಭವ ಮತ್ತು ದೇಹದ ಸ್ಮರಣೆಯನ್ನು ಬಳಸಿಕೊಂಡು ಬೆದರಿಕೆ ಅಥವಾ ಅವಕಾಶವನ್ನು ಗ್ರಹಿಸುತ್ತದೆ. ಏನಾದರೂ ತಿನ್ನಬೇಕೆಂಬ ಕಡು ಮೋಹವಾದಾಗ ಕರಳು ಬೇಡ ಎಂದರೂ ಬಯಕೆ ಮೇಲುಗೈ ಪಡೆದಾಗ ಕರುಳಿಗೆ ಕಿರಿಕಿರಿಯೆನಿಸುತ್ತದೆ.ಈ ಮೂರೂ ‘ಮಿದುಳುಗಳು’ ವಾಸ್ತವವಾಗಿ ನೀವು ಗ್ರಹಿಸುವುದನ್ನು ರೂಪಿಸುತ್ತವೆ. ತಲೆ ‘ಏನು ನಿಜ?’ ಎಂದು ಕೇಳುತ್ತದೆ. ಹೃದಯ ‘ಏನು ಮುಖ್ಯ?’ ಎಂದು ಕೇಳುತ್ತದೆ. ಕರುಳು ‘ನಾನು ಸುರಕ್ಷಿತನೇ?’ ಎಂದು ಕೇಳುತ್ತದೆ. ಒಂದು ಪ್ರಾಬಲ್ಯ ಹೊಂದಿದಾಗ, ನಿಮ್ಮ ದೃಷ್ಟಿಕೋನ ಕಿರಿದಾಗುತ್ತದೆ.
ಬದುಕಲು ಕೇವಲ ಬುದ್ಧಿವಂತಿಕೆ ಇದ್ದರೆ ಸಾಲದು. ಹೃದಯವಂತಿಕೆಯೂ ಬೇಕು. ಬುದ್ಧಿ ಮತ್ತು ಮತ್ತು ಹೃದಯ ಆರೋಗ್ಯವಾಗಿರಲು ಹಿತಮಿತ ಆಹಾರವೂ ಅಷ್ಟೇ ಅವಶ್ಯಕ. ಶೇಕಡಾ ತೊಂಬತ್ತರಷ್ಟು ಭಾಗ ಸೆರೆಟೋನಿನ್ ಎಂಬ ಸಂತೋಷದ ಹಾರ್ಮೋನು ಉತ್ಪತ್ತಿಯಾಗುವುದು ಇದೇ ಕರುಳಿನಲ್ಲಿ. ಹೀಗೆ ಈ ದೇಹವೆಂಬ ತೊಟ್ಟಿಲು ಹೀಗೆ ಕರುಳು ಮತ್ತು ಮಿದುಳು ಮತ್ತು ಹೃದಯಕ್ಕೆ ಎಳೆದು ಕಟ್ಟಿದ ಹಗ್ಗದ ಹಾಗೆ. ಈ ಹಗ್ಗದ ಒಂದು ಎಳೆಯೂ ತುಂಡಾಗದಂತಹ ಆರೋಗ್ಯಕರ ಹವ್ಯಾಸಗಳು ನಮ್ಮದಾಗಲಿ.
****

