ಚಿರತೆ ದಾಳಿಗೆ ಎರಡು ಕುರಿ ಬಲಿ
ವಿಕ ಸುದ್ದಿಲೋಕ ಚನ್ನಪಟ್ಟಣ: ಕಳೆದ ಹಲವು ತಿಂಗಳಿಂದ ಅವ್ಯಾಹತವಾಗಿರುವ ಚಿರತೆ ಹಾವಳಿಯಿಂದ ಅಕ್ಕೂರು ಜಿಲ್ಲಾಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜನರು ಹೈರಾಣಾಗಿದ್ದು, ಬುಧವಾರ ರಾತ್ರಿ ಕೊಟ್ಟಿಗೆಯಲ್ಲಿದ್ದ ಕುರಿಗಳ ಮೇಲೆ ದಾಳಿ ಮಾಡಿರುವ ಚಿರತೆ ಎರಡು ಕುರಿಗಳನ್ನು ಬಲಿ ಪಡೆದಿದೆ.
ತಾಲೂಕಿನ ಅಂಬಾಡಹಳ್ಳಿ ಗ್ರಾಮದ ಶಿವಬೋರಯ್ಯ ಎಂಬುವವರ ಕುರಿ ಶೆಡ್ಡಿನಲ್ಲಿದ್ದ ಎರಡು ಕುರಿಗಳನ್ನು ಚಿರತೆ ಸಾಯಿಸಿದ್ದು, ಜೀವನೋಪಾಯಕ್ಕೆ ಸಾಕಿದ್ದ ಕುರಿಗಳನ್ನು ಕಳೆದುಕೊಂಡಿರುವ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಉಂಟಾಗಿದೆ.
ಈ ಭಾಗದಲ್ಲಿಚಿರತೆಗಳ ಸಂಖ್ಯೆ ಹೆಚ್ಚಾಗಿದ್ದು, ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿ ಸಾಯಿಸುತ್ತಿರುವ ಘಟನೆ
ಪ್ರತಿದಿನ ವರದಿಯಾಗುತ್ತಿದ್ದು, ಆನೆದಾಳಿಯಿಂದ ಹೈರಾಣಾಗಿರುವ ರೈತ ಸಮುದಾಯ ಇದೀಗ ಚಿರತೆ ಹಾವಳಿಯಿಂದ ಮತ್ತಷ್ಟು ಕಂಗಾಲಾಗಿದೆ.
ಅರಣ್ಯಾಧಿಕಾರಿಗಳ ಭೇಟಿ: ಚಿರತೆ ದಾಳಿಯಿಂದ ಕುರಿಗಳು ಬಲಿಯಾಗಿರುವ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಪಶು ವೈದ್ಯಾಧಿಕಾರಿಗಳ ಜತೆ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿ ಕುರಿಗಳ ಮಾಲೀಕರಿಗೆ ಇಲಾಖೆ ವತಿಯಿಂದ ಸೂಕ್ತ ಪರಿಹಾರ ಓದಗಿಸಿಕೊಡುವ ಭರವಸೆ ನೀಡಿ ಜತೆಗೆ ಚಿರತೆ ಸೆರೆಗೆ ಬೋನ್ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.
ಪೋಟೊ13ಸಿಪಿಟಿ2: ಚಿರತೆ ದಾಳಿಗೆ ಸಿಲುಕಿ ಸಾವನ್ನಪ್ಪಿರುವ ಕುರಿಗಳು.

