ರಾಮನಗರದ ಅಂಬೇಡ್ಕರ್ ಭವನದಲ್ಲಿಜನ ಜಾಗೃತಿ ವೇದಿಕೆ ನಮ್ಮವರು ತಂಡದಿಂದ ಸವಿ ನೆನಪು ಕಾರ್ಯಕ್ರಮ
ವಿಕ ಸುದ್ದಿಲೋಕ ರಾಮನಗರ
ಭಾರತ ಏಕೀಕರಣ , ಕರ್ನಾಟಕ ಏಕೀಕರಣ ಹೋರಾಟದಲ್ಲಿಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಅವರ ಪಾತ್ರವೂ ಪ್ರಮುಖ. ಅಧಿಕಾರ ಹೋದರೂ ಲೆಕ್ಕಿಸದೆ ಏಕೀಕರಣಕ್ಕೆ ಕೊಡುಗೆ ನೀಡಿದ ಇವರ ತತ್ವಾದರ್ಶ ಮತ್ತು ಸ್ವಾಭಿಮಾನದ ರಾಜಕಾರಣವನ್ನು ಪ್ರಸ್ತುತ ಪೀಳಿಗೆಗೆ ಪರಿಚಯಿಸಬೇಕಾದ ಅನಿವಾರ್ಯತೆ ಇದೆ ಎಂದು ಇತಿಹಾಸ ತಜ್ಞ ಹಾಗೂ ಚಿಂತಕ ತಲಕಾಡು ಚಿಕ್ಕರಂಗೇಗೌಡ ಅವರು ಹೇಳಿದರು.
ರಾಮನಗರದ ಅಂಬೇಡ್ಕರ್ ಭವನದಲ್ಲಿಭಾನುವಾರ ಮಧ್ಯಾಹ್ನ ಜನ ಜಾಗೃತಿ ವೇದಿಕೆ ಹಾಗೂ ನಮ್ಮವರು ಬಳಗದ ವತಿಯಿಂದ ನಡೆದ ‘ಸ್ವಾಭಿಮಾನಿ ರಾಜಕಾರಣಿ ಕೆಂಗಲ್ ಹನುಮಂತಯ್ಯ ಅವರ ಸವಿ ನೆನಪು’ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ಆಸಕ್ತಿದಾಯಕ ವಿಷಯಗಳನ್ನು ಪ್ರಸ್ತಾಪಿಸಿದ ಅವರು, ಕೆಂಗಲ್ ಅವರು ತೀರಿಕೊಂಡಾಗ ವಿಧಾನಸೌಧದ ಸುತ್ತ ಮೃತ ದೇಹವನ್ನು ಮೆರವಣಿಗೆ ಮಾಡುತ್ತಾರೆ. ಅಂದಿನ ಪತ್ರಿಕೆಗಳು ‘ಶಿಲ್ಪಕ್ಕೆ ಶಿಲ್ಪಿಯ ನಮನ’ ಎಂದು ಶೀರ್ಷಿಕೆ ನೀಡಿ ಬರೆದಿದ್ದರು. ಅಖಂಡ ಭಾರತ ನಿರ್ಮಾಣಕ್ಕೆ ಕೆಂಗಲ್ ಅವರ ಅರಮನೆ ಚಳವಳಿ ಸಹ ಕಾರಣ. ದೇಶ ಒಗ್ಗೂಡಿಸಿದ ವಲ್ಲಭಬಾಯಿ ಪಟೇಲ್ ಗೆ ಶಕ್ತಿ ತುಂಬಿದ್ದರು.
ಟಿಪ್ಪು ಸೋತ ಬಳಿಕ ಬ್ರಿಟಿಷರು ಮೈಸೂರನ್ನು ಮೂರು ಭಾಗ ಮಾಡುತ್ತಾರೆ. ಅದರಲ್ಲಿಉತ್ತರ ಕರ್ನಾಟಕ ನಿಜಾಮರಿಗೆ ಮಹಾರಾಷ್ಟ್ರ ಭಾಗವನ್ನು ಪೇಶ್ವೆಗಳಿಗೆ ಕೊಟ್ಟು, ಮೈಸೂರು ಭಾಗವನ್ನು ತಾವೇ ನೋಡಿಕೊಳ್ಳುತ್ತಾರೆ. 1947ರಲ್ಲಿಸ್ವಾತಂತ್ರ್ಯ ಕೊಟ್ಟ ಬ್ರಿಟಿಷರು ಭಾರತ ಅಥವಾ ಪಾಕಿಸ್ತಾನದ ಜತೆ ಸೇರಿಕೊಳ್ಳುವ ಆಮಿಷ ನೀಡುತ್ತಾರೆ. ಆಗ ಕೆಲ ಸಂಸ್ಥಾನದವರು ಹೈದರಾಬಾದ್ ನಿಜಾಮನ ನೇತೃತ್ವದಲ್ಲಿಭಾರತದ ಒಕ್ಕೂಟದ ಸೇರದಿರಲು ತೀರ್ಮಾನಿಸುತ್ತಾರೆ. ಅದರಲ್ಲಿಮೈಸೂರು ಸಂಸ್ಥಾನದವರು ಇದ್ದಾರೆ ಎಂದು ಗೊತ್ತಾದಾಗ ಕೆ.ಸಿ. ರೆಡ್ಡಿ, ಕೆಂಗಲ್ , ನಿಜಲಿಂಗಪ್ಪ ಅವರ ನೇತೃತ್ವದಲ್ಲಿಅರಮನೆ ಅಥವಾ ಮೈಸೂರು ಚಲೋ ಹೋರಾಟ ಮಾಡುತ್ತಾರೆ. ಈ ವೇಳೆ ಕೆಂಗಲ್ ಅವರನ್ನು ಮಹಾರಾಜರು ಜೈಲಿಗೆ ಹಾಕಿಸುತ್ತಾರೆ. ಅವರ ಹೋರಾಟ ಯಶಸ್ವಿಯಾಗುತ್ತದೆ. ಭಾರತದ ಏಕತೆ ಕಾಪಾಡುವಲ್ಲಿಕೆಂಗಲ್ ಕೊಡುಗೆ ದೊಡ್ಡದು. ಇಲ್ಲದಿದ್ದರೆ ಅಂದು ಮೈಸೂರು ಪಾಕಿಸ್ತಾನ ಸೇರುತ್ತಿತ್ತು ಎಂದರು.
ಏಕೀಕರಣಕ್ಕೆ ದುಡಿದಿದ್ದಕಾಗಿ ಕೆಂಗಲ್ ಅಧಿಕಾರ ಕಳೆದುಕೊಂಡರು. ಭಾರತ ಸರಕಾರದ ಆಡಳಿತ ಯಂತ್ರ ಹೇಗಿರಬೇಕು ಎಂದು ರೂಪರೇಷೆ ಹಾಕಿಕೊಟ್ಟಿದ್ದು ಕೆಂಗಲ್ . ಅವರ ಪ್ರತಿಮೆಯನ್ನು ವಿಧಾನಸೌಧದ ಮುಂಭಾಗ ಇಡಬೇಕು ಎಂದು ನಾವು ಹೋರಾಟ ಮಾಡಿದೆವು. ಆಗಲೂ ಪಿತೂರಿ ಮಾಡಿ ಅವರ ಪ್ರತಿಮೆಯನ್ನು ವಿಧಾನಸೌಧದ ಹಿಂದೆ ಇಟ್ಟು ಅವಮಾನ ಮಾಡುತ್ತಾರೆ. ಅವರ ಪ್ರತಿಮೆ ಮುಂದೆ ಬರಬೇಕಿದೆ ಎಂದರು.
ಹಿರಿಯ ಸಾಹಿತಿ ಬಂಜಗೆರೆ ಜಯಪ್ರಕಾಶ್ ಅವರು ಮಾತನಾಡಿ, ಕೆಂಗಲ್ ಅವರ ಕಾಲದ್ದು ಕಟ್ಟುವ ಕಾಲದ ರಾಜಕಾರಣ. ಈಗಿನದ್ದು ತಿನ್ನುವ ಮತ್ತು ಕೆಡವುವ ರಾಜಕಾರಣ. ಅವರು ಮೊದಲ ಚುನಾಯಿತ ಮುಖ್ಯಮಂತ್ರಿ. ಪ್ರಜಾಪ್ರಭುತ್ವದ ಕಲ್ಲನ್ನು ಮೊದಲ ಸಲ ನೆಟ್ಟವರು. ರಾಜ್ಯದಲ್ಲಿಪ್ರಜಾಪ್ರಭುತ್ವ ಕಟ್ಟಲು ಮುನ್ನುಡಿ ಬರೆದರು. ಜನರ ಕೆಲಸವನ್ನು ದೇವರ ಕೆಲಸ ಎಂದು ಪರಿಭಾವಿಸಿ ಸರಕಾರದ ಕೆಲಸ ದೇವರ ಕೆಲಸ ಎಂದು ಬರೆಯಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯ ಆಡಳಿತದ ದೇವಾಲಯವಾಗಿ ವಿಧಾನಸೌಧವನ್ನು ಕಟ್ಟಿಸಿದರು. ಏಕೀಕರಣ ಎಂಬುದು ಕನ್ನಡಿಗರ ಆಕಾಂಕ್ಷೆಯ ಪ್ರಶ್ನೆ ಎಂದು ಪರಿಗಣಿಸಿ ಅಧಿಕಾರ ಹೋದರೂ ಲೆಕ್ಕಿಸದೆ ಏಕೀಕರಣಕ್ಕೆ ಕೊಡುಗೆ ನೀಡಿದರು. ರಾಜಕಾರಣಕ್ಕೆ ಒಳ್ಳೆಯ ಮಾದರಿ ಕೊಟ್ಟರು. ಆ ಹಾದಿಯಲ್ಲಿಕಾರ್ಯಕ್ರಮದ ರುವಾರಿ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಶಶಿ ಅವರು ಸಾಗುತ್ತಾ ಅರ್ಥಪೂರ್ಣವಾಗಿ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಅವರಿಗೆ ಇರುವ ಆಡಳಿತ ಬದ್ಧತೆಗೆ ಇತ್ತೀಚೆಗೆ ಮಂಡಿಸಿರುವ ಬಜೆಟ್ ಸಾಕ್ಷಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಶೇಷಾದ್ರಿ ಶಶಿ ಅವರು ಮಾತನಾಡಿ, ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿತಮ್ಮ ಛಾಪು ಮೂಡಿಸಿದ್ದ ನಮ್ಮ ತಾಲೂಕಿನವರೇ ಆದ ಕೆಂಗಲ್ ಹನುಮಂತಯ್ಯ ಅವರಂತಹ ಧೀಮಂತ ರಾಜಕಾರಣಿ ಕಡು ಸ್ವಾಭಿಮಾನಿ, ಕಡು ಪ್ರಾಮಾಣಿಕ ವ್ಯಕ್ತಿತ್ವವನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ರಾಮನಗರ ತಾಲೂಕಿನವರಲ್ಲಿಅಭಿಮಾನ ಶೂನ್ಯತೆ ಕಾಣುತ್ತಿದೆ. ನಮ್ಮ ನೆಲದ ಸಾಧಕರ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕು ಎಂದರು.
ರಾಮನಗರದಲ್ಲಿಕೆಂಗಲ್ ಪ್ರತಿಮೆ ನಿರ್ಮಾಣಕ್ಕೆ ಆರ್ಥಿಕವಾಗಿ ಹೆಚ್ಚು ಸಹಕಾರ ನೀಡಿದ್ದ ಬಮೂಲ್ ನಿರ್ದೇಶಕರಾದ ಪಿ. ನಾಗರಾಜ್ ಅವರನ್ನು ಕಾರ್ಯಕ್ರಮದಲ್ಲಿಸನ್ಮಾನಿಸಲಾಯಿತು. ಸಾಹಿತಿ ಡಾ.ರವಿಕುಮಾರ್ ಬಾಗಿ, ಹಿರಿಯ ರೈತ ಮುಖಂಡರಾದ ಸಿ.ಪುಟ್ಟಸ್ವಾಮಿ, ಅನುಸೂಯಮ್ಮ, ರಾಜಕೀಯ ಚಿಂತಕ ದೊಡ್ಡಬೋರಯ್ಯ, ಕನ್ನಡ ಪರ ಹೋರಾಟಗಾರ ಕುಮಾರಸ್ವಾಮಿ, ಲೇಖಕ ಕೊತ್ತೀಪುರ ಜಿ ಶಿವಣ್ಣ, ಲಯನ್ಸ್ ಸಂಸ್ಥೆಯ ಸಾಹುಕಾರ್ ಅಮ್ಜದ್ ಸೇರಿದಂತೆ ಹಲವರು ಮಾತನಾಡಿದರು.
ಬಾಕ್ಸ್ :
ಸ್ವಾಭಿಮಾನಿ ಪ್ರಾಮಾಣಿಕ ರಾಜಕಾರಣಿ
ಕಡು ಪ್ರಾಮಾಣಿಕ ರಾಜಕಾರಣಿಯಾಗಿದ್ದ ಕೆಂಗಲ್ ಅವರನ್ನು ಕಂಡರೆ, ಇಡೀ ಸದನ ಗೌರವಿಸುತ್ತಿತ್ತು. ಬಡತನದ ಕುಟುಂಬದ ಮೊದಲನೇ ಮಗ. ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಓದುತ್ತಾರೆ. ಪುಣೆಯಲ್ಲಿಕಾನೂನು ಪದವಿ ಓದಿ ಖ್ಯಾತ ವಕೀಲರಾಗುತ್ತಾರೆ. ಮುಖ್ಯಮಂತ್ರಿ ಆಗುವುದಕ್ಕೆ ಮುಂಚೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಸಂವಿಧಾನ ರಚನೆ ಸಲಹಾ ಸಮಿತಿ ಸದಸ್ಯರಾಗಿ ಕೆಲಸ ಮಾಡುತ್ತಾರೆ. ಅಂಬೇಡ್ಕರ್ ಅವರು ಸಹ ಕೆಂಗಲ್ ಅವರನ್ನು ಮೆಚ್ಚಿಕೊಳ್ಳುತ್ತಾರೆ. ಅಂಬೇಡ್ಕರ್ ಅವರಿಗೆ ಕೆಂಗಲ್ ಅವರು, ನಾನು ನನ್ನ ಪಕ್ಷ ಬೇಕಿದ್ದರೆ ಬಿಡುವೆ. ನಿಮ್ಮ ಸಂಗವನ್ನಲ್ಲಎನ್ನುತ್ತಾರೆ. 1952ರಲ್ಕಿ ರಾಜ್ಯದ ಮೊದಲ ಚುನಾಯಿತ ಮುಖ್ಯಮಂತ್ರಿ ಆಗುತ್ತಾರೆ. ರೈಲ್ವೆ ಸಚಿವರಾಗಿ ನಷ್ಟದಲ್ಲಿದ್ದ ಇಲಾಖೆಯನ್ನು ಲಾಭಕ್ಕೆ ತರುತ್ತಾರೆ. ಇಂದಿರಾ ಗಾಂಧಿ ಅವರು ಚೀಟಿ ಕೊಟ್ಟು ಪಕ್ಷಕ್ಕೆ ಹಣ ಕೇಳುತ್ತಾರೆ. ಅದಕ್ಕೆ ಕೆಂಗಲ್ ಅವರು ಆಗಲ್ಲ. ನಾನು ಬೇರೆಯವರಿಂದ ಹಣ ಸಂಗ್ರಹಿಸಿದರೆ ಆಡಳಿತದಲ್ಲಿಬಿಗಿ ಹೋಗುತ್ತದೆ. ಬೇಕಿದ್ದರೆ ರಾಜೀನಾಮೆ ಕೊಡುವೆ. ಆದರೆ, ಹಣ ಕೇಳುವುದಿಲ್ಲಎಂದು ರಾಜೀನಾಮೆ ಕೊಟ್ಟಂತಹ ಸ್ವಾಭಿಮಾನಿ ಪ್ರಾಮಾಣಿಕ ರಾಜಕಾರಣಿ ಅವರು ಎಂದರು.
- ಸಿ.ಎಂ. ಲಿಂಗಪ್ಪ, ಮಾಜಿ ಶಾಸಕರು
ಫೋಟೊ:
15ಆರ್ ಎನ್ ಆರ್ ಎಂ1:
ರಾಮನಗರದ ಅಂಬೇಡ್ಕರ್ ಭವನದಲ್ಲಿಜನ ಜಾಗೃತಿ ವೇದಿಕೆ ಹಾಗೂ ನಮ್ಮವರು ಬಳಗದ ವತಿಯಿಂದ ನಡೆದ ‘ಸ್ವಾಭಿಮಾನಿ ರಾಜಕಾರಣಿ ಕೆಂಗಲ್ ಹನುಮಂತಯ್ಯ ಅವರ ಸವಿ ನೆನಪು’ ಕಾರ್ಯಕ್ರಮ ನಡೆಯಿತು.
15ಆರ್ ಎನ್ ಆರ್ ಎಂ2:
ರಾಮನಗರದ ಹಳೆ ಬಸ್ ನಿಲ್ದಾಣದ ಬಳಿ ನವೀಕೃತಗೊಂಡ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಾಯಿತು.

