ಹುಕ್ಕೇರಿ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನುಡಿ
ಹಿಂದೂ ಎಂದು ಹೇಳಲು ಹಿಂಜರಿಕೆ ಬೇಡ
ವಿಕ ಸುದ್ದಿಲೋಕ ಶಿರಸಿ
ಹಿಂದೂಗಳನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಬೆಳೆಸಿದರೆ ಹಿಂದುತ್ವ , ದೇಶ ಉಳಿಯುತ್ತದೆ ಎಂದು ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ತಾಲೂಕಿನ ಜಡ್ಡಿಗದ್ದೆಯ ಮಂಡಲ ವ್ಯಾಪ್ತಿಯಲ್ಲಿಹಿಂದೂ ಸಮ್ಮೇಳನ ಸಂಚಾಲನಾ ಸಮಿತಿಯಿಂದ ಭಾನುವಾರ ನಡೆದ ಹಿಂದೂ ಸಮಾವೇಶದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
‘‘ಹಿಂದುತ್ವ ಗಟ್ಟಿಗೊಳಿಸಿಕೊಳ್ಳಲು ಹಿಂದೂ ಸಮಾವೇಶ ಬೇಕು. ನಾವು ಹಿಂದೂ ಎಂದು ಹೇಳಲು ಯಾರೂ ಹಿಂಜರಿಯಬಾರದು. ಅಭಿಮಾನದಿಂದ ಹಿಂದೂ ಎಂದು ಹೇಳಬೇಕು. ಹಿಂದೂ ಸಮಾವೇಶ ನಿತ್ಯವೂ ಆಗಬೇಕು. ಹಿಂದುಗಳ ಹೊಸ ವರ್ಷ ಯುಗಾದಿ ದಿನದಂದು ಎಲ್ಲಹಿಂದೂಗಳ ಮನೆಗೆ ತೆರಳಿ ಬೇವು ಬೆಲ್ಲಕೊಟ್ಟು ಪ್ರೀತಿಯಿಂದ ಮಾತಾಡಿದರೆ ಅವರು ಎಂದೂ ಎಂಥ ವೇಳೆಯೂ ಮತಾಂತರ ಆಗುವದಿಲ್ಲ’’ ಎಂದರು.
ವಿಶ್ವ ಹಿಂದೂ ಪರಿಷತ್ ರಾಜ್ಯ ಸಂಚಾಲಕ ಸೂರ್ಯನಾರಾಯಣ, ‘‘ಭಾರತ ಕಾನೂನು ಬದಲಾಗದೇ ಹೋದರೆ, ಹಿಂದುಗಳು ಜಾಗೃತರಾಗದಿದ್ದರೆ ಮುಂದೆ ಅಪಾಯ ಕಾದಿದೆ. ದೇಶ ಉಳಿಯಬೇಕಾದರೆ ದೇಶ ಪ್ರೀತಿಸುವ ಜನ ಇರಬೇಕು’’ ಎಂದರು.
ಜಡ್ಡಿಗದ್ದೆ ಮಂಡಲದ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ಅಧ್ಯಕ್ಷ ಶಿವರಾಮ ಭಟ್ಟ ಹೊಸ್ಮನೆ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಪ್ರಮುಖರಾಗಿ ಗಿರಿಜಾ ಹೆಗಡೆ ಹಾಗೂ ರತ್ನಾವತಿ ನಾಯ್ಕ ಇದ್ದರು.
ಶಿವರಾಮ ಭಟ್ಟ, ಪ್ರಕಾಶ ಪೂಜಾರಿ, ನಾರಾಯಣ ಭಟ್ಟ, ಮಂಜು ಪೂಜಾರಿ ಶ್ರೀಗಳಿಗೆ ಫಲಸಮರ್ಪಣೆ ಮಾಡಿದರು. ರಾಘವೇಂದ್ರ ಹೆಗಡೆ ಮೆಣಸಿ ಸೀಮೆಯ ವಿಶೇಷ ಕಾಳುಮೆಣಸು ನೀಡಿದರು. ಶಿವರಾಮ ಭಟ್ ಸ್ವಾಗತಿಸಿದರು. ಪ್ರವೀಣ ಮಣ್ಮನೆ ಪ್ರಾಸ್ತಾವಿಕ ಮಾತನಾಡಿದರು. ಪಿ.ಜಿ.ಹೆಗಡೆ ನಿರೂಪಿಸಿದರು. ಚೈತ್ರಾ ಭಟ್ಟ ದೇಶಭಕ್ತಿಗೀತೆ ಹಾಡಿದರು. ರಮೇಶ ಪೂಜಾರಿ ವಂದಿಸಿದರು.
ಇದಕ್ಕೂ ಮುನ್ನ ಜಡ್ಡಿಗದ್ದೆಯ ದೇವಸ್ಥಾನದ ಆವರಣದಿಂದ ಸಮಾವೇಶ ನಡೆಯುವ ಸ್ಥಳದವರೆಗೆ ಭವ್ಯ ಶೋಭಾಯಾತ್ರೆ ನಡೆಯಿತು.
15ಎಸ್ಸಾರೆಸ್ 9
ಜಡ್ಡಿಗದ್ದೆಯಲ್ಲಿನಡೆದ ಹಿಂದೂ ಸಮ್ಮೇಳನವನ್ನು ಹುಕ್ಕೇರಿ ಮಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.

