ಜಿಪಿಟಿ ಶಿಕ್ಷಕರಿಗೆ ನ್ಯಾಯ ಸಿಗಲಿ

Contributed bychandruhiremath06@gmail.com|Vijaya Karnataka

ಕಲಬುರಗಿಯಲ್ಲಿ ನಡೆದ ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಪದವೀಧರ ಪ್ರಾಥಮಿಕ ಶಿಕ್ಷಕರು ತಮ್ಮ ಬೇಡಿಕೆಗಳನ್ನು ಎಂಎಲ್ಸಿ ಶಶೀಲ್‌ ನಮೋಶಿಗೆ ಸಲ್ಲಿಸಿದರು. 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಜಿಪಿಟಿ ಶಿಕ್ಷಕರಿಗೆ ಮುಂಬಡ್ತಿಯಲ್ಲಿ 5 ವರ್ಷಗಳ ಸೇವಾವಧಿ ನಿಯಮ ಮುಂದುವರಿಸುವಂತೆ ಒತ್ತಾಯಿಸಿದರು. ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಾಗಿ ಎಂಎಲ್ಸಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ 130 ಶಿಕ್ಷಕರಿಗೆ ಗುರುಸರ್ವೋತ್ತಮ ಪ್ರಶಸ್ತಿ ಪ್ರದಾನ ಮಾಡಲಾಯಿತು.

steps to bring justice to gpt teachers will progress

*ಚಿತ್ರ:15ಜಿಎಲ್ ಬಿ15

ನಗರದ ವಿಶ್ವೇಶ್ವರಯ್ಯ ಭವನದಲ್ಲಿರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಾಗಾರದಲ್ಲಿರೇಣುಕ ಕುಮಾರ ಕೆ.ಪಿ.ಮಾತನಾಡಿದರು.

**

ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಾಗಾರದಲ್ಲಿಎಂಎಲ್ಸಿ ಶಶೀಲ್ ನಮೋಶಿಗೆ ಹಕ್ಕೊತ್ತಾಯ

ಜಿಪಿಟಿ ಶಿಕ್ಷಕರಿಗೆ ನ್ಯಾಯ ಸಿಗಲಿ

ವಿಕ ಸುದ್ದಿಲೋಕ ಕಲಬುರಗಿ

ಪದವೀಧರ ಪ್ರಾಥಮಿಕ(6-8) ಶಿಕ್ಷಕರಿಗೆ ಮುಂಬಡ್ತಿಯಲ್ಲಿ10 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಾವಿರಾರು ಜಿಪಿಟಿ ಶಿಕ್ಷಕರಿಗೆ ಬಡ್ತಿಗೆ ಈ ಹಿಂದೆ ಇದ್ದ 5 ವರ್ಷಗಳ ಸೇವಾವಧಿ ನಿಯಮ ಮುಂದುವರಿಸಿ ನ್ಯಾಯ ಒದಗಿಸಬೇಕು ಎಂಬುದು ಸೇರಿ ಅನೇಕ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರಾಜ್ಯ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ಶಿಕ್ಷಕರು ಭಾನುವಾರ ನಡೆದ ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಾಗಾರದಲ್ಲಿಎಂಎಲ್ಸಿ ಶಶೀಲ್ ನಮೋಶಿಗೆ ಹಕ್ಕೊತ್ತಾಯ ಮಂಡಿಸಿದರು.

ನಗರದ ವಿಶ್ವೇಶ್ವರಯ್ಯ ಭವನದಲ್ಲಿಕರ್ನಾಟಕ ರಾಜ್ಯ(6-8 ತರಗತಿ) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದಿಂದ ಭಾನುವಾರ ನಡೆದ 2025-26ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ, ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಾಗಾರ , ಜಿಲ್ಲಾ ಮಟ್ಟದ ಗುರು ಸರ್ವೋತ್ತಮ ಪ್ರಶಸ್ತಿ ಪ್ರದಾನ ಮತ್ತು ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿಸಂಘದ ರಾಜ್ಯಾಧಕ್ಷ ಮುರಳೀಧರ ಪಿ.ನೇತೃತ್ವದಲ್ಲಿಜಿಪಿಟಿ ಶಿಕ್ಷಕರ ಅನೇಕ ಬೇಡಿಕೆಗಳ ಹಕ್ಕೊತ್ತಾಯ ಸಲ್ಲಿಸಿದರು.

ಮುಖ್ಯ ಶಿಕ್ಷಕರ ಮುಂಬಡ್ತಿಗೆ 12 ವರ್ಷ ಕಡ್ಡಾಯ ಸೇವೆ ನಿಗದಿಪಡಿಸಿರುವುದು, 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಾವಿರಾರು ಪ್ರತಿಭಾವಂತ ಜಿಪಿಟಿ ಶಿಕ್ಷಕರಿಗೆ ನಿರಾಸೆ ಮೂಡಿಸಿದೆ. ಈ ಹಿಂದೆ ಇದ್ದ 5 ವರ್ಷಗಳ ಸೇವಾವಧಿ ನಿಯಮ ಮುಂದುವರಿಸಿ ಜಿಪಿಟಿ ಶಿಕ್ಷಕರಿಗೆ ನ್ಯಾಯ ಒದಗಿಸಬೇಕು, ಜಿಪಿಟಿ ಶಿಕ್ಷಕರಿಗೆ ಕನ್ನಡ, ಆಂಗ್ಲ, ಸಮಾಜ ವಿಜ್ಞಾನ ವಿಷಯ ಬೋಧಿಸಲು ಸಮ್ಮತಿ ಇದ್ದು, ಕಾರ್ಯನಿರತ ಶಿಕ್ಷಕರಿರದ ಸರಕಾರಿ ಶಾಲೆಗಳ ಖಾಲಿ ಹುದ್ದೆಗೆ ಆಂಗ್ಲಭಾಷಾ, ಸಮಾಜ ವಿಜ್ಞಾನ ಶಿಕ್ಷಕರಿಗೆ ಸ್ಥಳ ಆಯ್ಕೆಮಾಡಿಕೊಳ್ಳಲು ಮುಂಬರುವ ವರ್ಗಾವಣೆಯಲ್ಲಿಅವಕಾಶ ಕಲ್ಪಿಸಬೇಕು. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿಮತ್ತೊಂದು ಬಾರಿ ಅಭಿಮತ ವರ್ಗಾವಣೆಗೆ ಅವಕಾಶ ಮಾಡಿಕೊಟ್ಟು ಶಿಕ್ಷಕರಿಗೆ ಅನುಕೂಲ ಮಾಡಿಕೊಡಬೇಕು. ಶಿಕ್ಷಕರಿಗೆ ಸಿ ವಲಯಕ್ಕೆ ಕೌನ್ಸೆಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು. 2022-23ನೇ ಸಾಲಿನಲ್ಲಿನೇಮಕವಾದ ಶಿಕ್ಷಕರು ನೇಮಕಾತಿ ಹೊಂದಿದ ಪೂರ್ವದಲ್ಲಿಹಿಂದಿನ ಹುದ್ದೆಯಲ್ಲಿಸಲ್ಲಿಸಿದ ಸೇವೆಯನ್ನು ಅರ್ಹದಾಯಕ ಸೇವೆಯೆಂದು ಪರಿಗಣಿಸುವಂತೆ, ರಜೆ ಮತ್ತು ವೇತನ ಸಂರಕ್ಷಣೆ ಪರಿಗಣಿಸಲು ಇಲಾಖೆ ಉನ್ನತ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ಎಂಎಲ್ಸಿ ಶಶೀಲ್ ನಮೋಶಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಪಿಟಿ ಶಿಕ್ಷಕರ ವೇತನ ನಿಗದಿ, ಮುಂಬಡ್ತಿ, ಭತ್ಯೆಗಳ ಪರಿಷ್ಕರಣೆ ಹೀಗೆ ಅನೇಕ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸಂಘದ ಮಾನ್ಯತೆ ನವೀಕರಣಕ್ಕೂ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಪ.ಪೂ.ಕಾಲೇಜು ಪ್ರಾಚಾರ್ಯ ಸಂಘದ ಜಿಲ್ಲಾಧ್ಯಕ್ಷ ಜೆ.ಮಲ್ಲಪ್ಪ ಮಾತನಾಡಿ, ಜಿಪಿಟಿ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿಯುವಕರಿದ್ದಾರೆ. ಸಿ.ಆ್ಯಂಡ್ ಆರ್ ನಿಯಮ ಬದಲಾದರೆ ಮಾತ್ರ ಬಡ್ತಿಯಲ್ಲೂಹೆಚ್ಚಿನ ಸೌಲಭ್ಯ ದೊರೆಯಲಿದೆ. ಈ ನಿಟ್ಟಿನಲ್ಲಿಎಲ್ಲರೂ ಹೋರಾಡಬೇಕಿದೆ ಎಂದರು.

ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಮಾತನಾಡಿ, ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿಪದವೀಧರ ಶಿಕ್ಷಕರ ಪಾತ್ರ ಬಹಳ ಮುಖ್ಯ. ಅವರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು. ರಾಜ್ಯ ಸರಕಾರಿ ನೌಕರರ ಸಂಘದಲ್ಲಿಜಿಪಿಟಿ ಶಿಕ್ಷಕರಿಗೂ ಅವಕಾಶ ಕಲ್ಪಿಸಲು, ಪ್ರತ್ಯೇಕ ಮೀಸಲಾತಿ ಕುರಿತು ರಾಜ್ಯಾಧ್ಯಕ್ಷರಿಗೆ ಮಾತನಾಡುತ್ತೇನೆ ಎಂದರು.

ಈ ವೇಳೆ 130 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಗುರು ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಘದ ರಾಜ್ಯಾಧ್ಯಕ್ಷ ಮುರುಳೀಧರ ಪಿ, ಪ್ರೌಢಶಾಲೆ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹೇಶ ಹೂಗಾರ, ಸಂಘದ ಜಿಲ್ಲಾ ಗೌರವಾಧ್ಯಕ್ಷ ಚಂದ್ರಕಾಂತ ತಳವಾರ, ಜಿಲ್ಲಾಧ್ಯಕ್ಷ ಸಯ್ಯದ ಎಸ್ .ಜೆ.ಇನಾಮದಾರ ಮಾತನಾಡಿದರು. ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಧರ ಭಾವಿಕಟ್ಟಿ, ಮಹಾದೇವ ಚಿತಲಿ, ಪ್ರಭಾಕರ ಶೀಲವಂತ, ನರಸಿಂಹಮೂರ್ತಿ ಕೆ.ಆರ್ , ಪವನ ಅಮಟೆ, ಸಂತೋಷ, ಸಿಂಧು ಎಚ್ .ಎಂ, ಪ್ರಕಾಶ್ ಕೆ.ಎಸ್ , ಪ್ರದೀಪ ಎಂ.ಬಿ, ಗೋವಿಂದರಾಜು, ರೇಣುಕಾಕುಮಾರ ಕೆ.ಪಿ., ಶಂಕರ್ ಕೆ.ಎಸ್ .ಇತರರಿದ್ದರು.

*ಕೋಟ್ *

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಜಿಪಿಟಿ ಮಾದರಿ ತರಲಾಗಿದೆ. ಕಲ್ಯಾಣ ಕರ್ನಾಟಕದಂತಹ ಹಿಂದುಳಿದ ಭಾಗದಲ್ಲಿಶಿಕ್ಷಕರು ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿ ಕಾಪಾಡಬೇಕು.

-ಶಶೀಲ್ ನಮೋಶಿ ವಿಧಾನಪರಿಷತ್ ಸದಸ್ಯ

**

ಜಿಪಿಟಿ ಶಿಕ್ಷಕ ಕಲ್ಯಾಣಕ್ಕಾಗಿ ಸಂಘವು ಅನೇಕ ಸಂಘರ್ಷಗಳನ್ನು ಎದುರಿಸಿ ಮಾನ್ಯತೆ ಪಡೆದುಕೊಂಡಿದೆ. ಸಂಘ ಅಸ್ಥಿರಗೊಳಿಸಲು ಹವಣಿಸುತ್ತಿರುವ ಶಕ್ತಿಗಳಿಗೆ ಅವಕಾಶ ನೀಡಬೇಡಿ. ಒಂದು ವೇಳೆ ಅವರಿಗೆ ನೀವು ಮಣೆ ಹಾಕಿದರೆ, ಸಂಘದ ಮಾನ್ಯತೆ ರದ್ದಾದರೆ ನಿಮ್ಮ ಮೇಲೆ ನೀವೇ ಮಣ್ಣು ಹಾಕಿಕೊಂಡಂತೆ. ರಾಜ್ಯದಲ್ಲಿನ 25 ಸಾವಿರ ಜಿಪಿಟಿ ಶಿಕ್ಷಕರು ಅತಂತ್ರಗೊಳ್ಳುತ್ತಾರೆ. ಅದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಶಕ್ತಿ ಹಿಮ್ಮೆಟ್ಟಿಸಬೇಕು.

-ಯಲ್ಲಪ್ಪ ಗೌಡ್ರು, ರಾಜ್ಯ ಗೌರವಾಧ್ಯಕ್ಷ

ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ