ಆರೋಗ್ಯ ರಕ್ಷಣೆಯತ್ತ ಮಹಿಳೆಯರು ಲಕ್ಷ್ಯವಹಿಸಲಿ

Contributed byRAJESH BHAVIKATTI|Vijaya Karnataka

ಹಿರೇಕೆರೂರಿನಲ್ಲಿ ಮಹಿಳೆಯರ ಆರೋಗ್ಯಕ್ಕಾಗಿ ಕ್ಯಾನ್ಸರ್ ಮತ್ತು ಸ್ತ್ರೀರೋಗ ಸಮಸ್ಯೆಗಳ ಕುರಿತು ಜಾಗೃತಿ ಹಾಗೂ ಉಚಿತ ತಪಾಸಣೆ ಶಿಬಿರ ನಡೆಯಿತು. ಋುತುಬಂಧ, ಗರ್ಭಕಂಠದ ಕ್ಯಾನ್ಸರ್ ಬಗ್ಗೆ ವೈದ್ಯರು ಮಾಹಿತಿ ನೀಡಿದರು. ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆ ಮುಖ್ಯ ಎಂದರು. ಆರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿ ಬಗ್ಗೆ ಸಲಹೆ ನೀಡಲಾಯಿತು. ಕರಾಟೆ ಪಟು ಮನಿಷಾ ಕಬ್ಬೂರ ಅವರನ್ನು ಸನ್ಮಾನಿಸಲಾಯಿತು.

empowering womens health camp awareness on cancer and gynecological issues
ಹಿರೇಕೆರೂರು: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹಿರೇಕೆರೂರಿನ ಮಾಗನೂರ ಆಸ್ಪತ್ರೆಯಲ್ಲಿ ಶಿವಮೊಗ್ಗದ ನಂಜಪ್ಪ ಲೈಫ್‌ ಕೇರ್‌, ಹಿರೇಕೆರೂರಿನ ಲಯನ್ಸ್‌ ಕ್ಲಬ್‌ ಪರಿವಾರ ಮತ್ತು ಮಾಗನೂರ ಹಾಸ್ಪಿಟಲ್ ಸಹಯೋಗದಲ್ಲಿ ಕ್ಯಾನ್ಸರ್ ಹಾಗೂ ಸ್ತ್ರೀರೋಗ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ಮತ್ತು ಉಚಿತ ತಪಾಸಣೆ ನಡೆಸುವ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಲಯನ್ಸ್ ಕ್ಲಬ್‌ನ ಝೋನಲ್‌ ಚೇರ್‌ ಪರ್ಸನ್‌ ಸಂದೀಪ್ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಮಹಿಳೆಯರ ಆರೋಗ್ಯದ ಮಹತ್ವ, ಋುತುಬಂಧದ ಸಮಸ್ಯೆಗಳು, ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ, ಕ್ಯಾನ್ಸರ್‌ನ ಇತ್ತೀಚಿನ ಬದಲಾವಣೆಗಳು ಮತ್ತು ಅದರ ಚಿಕಿತ್ಸೆಯ ಬಗ್ಗೆ ತಜ್ಞರು ಮಾಹಿತಿ ನೀಡಿದರು.

ಲಯನ್ಸ್ ಕ್ಲಬ್‌ನ ಝೋನಲ್‌ ಚೇರ್‌ ಪರ್ಸನ್‌ ಸಂದೀಪ್ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, "ಋುತುಬಂಧ (ಮೆನೊಪಾಸ್‌) ಮತ್ತು ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಅತ್ಯಗತ್ಯ. ಹೆಣ್ಣು ಮಕ್ಕಳು ದೇಶದ ಮತ್ತು ಕುಟುಂಬದ ಬೆನ್ನೆಲುಬು. ಅವರ ಆರೋಗ್ಯದ ಬಗ್ಗೆ ಕಾಳಜಿ ಮತ್ತು ಜಾಗೃತಿ ಬಹಳ ಮುಖ್ಯ. ಅವರು ಆರೋಗ್ಯವಾಗಿದ್ದರೆ ಇಡೀ ಕುಟುಂಬ ಆರೋಗ್ಯವಾಗಿರುತ್ತದೆ" ಎಂದರು.
ಸ್ತ್ರೀರೋಗ ತಜ್ಞೆ ಡಾ. ಶಾಂತಲ. ಆರ್‌ ಅವರು ಋುತುಬಂಧದ ಸಮಯದಲ್ಲಿ ಮಾನಸಿಕ ಆರೋಗ್ಯದ ಮಹತ್ವವನ್ನು ಒತ್ತಿ ಹೇಳಿದರು. "ಋುತುಬಂಧದ ಸಮಯದಲ್ಲಿ ದೈಹಿಕವಾಗಿ ಬಹಳ ತೊಂದರೆಯಾಗುತ್ತದೆ. ಅಂತಹ ಸಂದರ್ಭದಲ್ಲಿ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು. ಬಿಪಿ, ಶುಗರ್‌, ಲಿಪಿಡ್‌ ಪ್ರೊಫೈಲ್‌, ಬೋನ್‌ ಅಸೆಸ್ಮೆಂಟ್‌ ಪರೀಕ್ಷೆ ಮತ್ತು ಚಿಕಿತ್ಸೆ ಪಡೆದುಕೊಳ್ಳಬೇಕು. ಪ್ರತಿನಿತ್ಯ ವಾಕಿಂಗ್, ಯೋಗ ಮತ್ತು ವ್ಯಾಯಾಮ ಮಾಡಿದರೆ ಹೆಣ್ಣು ಮಕ್ಕಳಿಗೆ ಮೆನೋಪಾಸ್ ಸಮಯದಲ್ಲಿ ಆಗುವ ತೊಂದರೆಗಳನ್ನು ತಡೆಗಟ್ಟಬಹುದು" ಎಂದು ತಿಳಿಸಿದರು.

ಕ್ಯಾನ್ಸರ್ ವೈದ್ಯ ಡಾ. ನಮ್ರತಾ ಉಡುಪ ಅವರು ಕ್ಯಾನ್ಸರ್ ಬಗ್ಗೆ ಆತಂಕಕಾರಿ ಮಾಹಿತಿ ನೀಡಿದರು. "ಮೊದಲು ಕ್ಯಾನ್ಸರ್ 65 ರಿಂದ 70 ವರ್ಷ ಮೇಲ್ಪಟ್ಟವರಲ್ಲಿ ಕಾಣುತ್ತಿತ್ತು. ಆದರೆ ಈಗ 45 ವರ್ಷದ ಒಳಗಿನವರಲ್ಲೂ ಹೆಚ್ಚುತ್ತಿದೆ. ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಕಣಗಳು ಬಹಳ ಕಡಿಮೆ ಇದ್ದು, ನಂತರ ಬಹಳ ವೇಗವಾಗಿ ಹರಡುತ್ತದೆ. ಇತ್ತೀಚಿನ ದಿನಗಳಲ್ಲಿ ದೈಹಿಕ ಕೆಲಸ ಕಡಿಮೆಯಾಗುತ್ತಿದ್ದು, ಮಾನಸಿಕ ಕೆಲಸ ಹೆಚ್ಚುತ್ತಿದೆ. ಪ್ರತಿನಿತ್ಯ ತಾಜಾ, ವಿಟಮಿನ್ ಹಾಗೂ ಪ್ರೊಟೀನ್ ಯುಕ್ತ ಆಹಾರ ಬಳಸುವುದು ಉತ್ತಮ" ಎಂದು ಸಲಹೆ ನೀಡಿದರು.

ಸರ್ಜಿಕಲ್‌ ಅಂಕೋಲಾಜಿಸ್ಟ್‌ ಡಾ. ಅರವಿಂದನ್‌.ಆರ್‌ ಅವರು ಕ್ಯಾನ್ಸರ್ ಬಂದಾಗ ಭಯಪಡದೆ, ಮುಚ್ಚಿಡದೆ ಬಹಳ ಬೇಗ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಕರಾಟೆ ಪಟು ಮನಿಷಾ ಕಬ್ಬೂರ ಅವರನ್ನು ಸನ್ಮಾನಿಸಲಾಯಿತು. ಮಾಗನೂರ ಆಸ್ಪತ್ರೆಯ v. ಮನು, ಡಾ. ನಿರಂಜನ್‌ ಮಾನಿಬಣಕರ ಹಾಗೂ ಲಯನ್ಸ್ ಕ್ಲಬ್‌ನ ನಿರ್ದೇಶಕರು ಉಪಸ್ಥಿತರಿದ್ದರು. ಈ ಉಚಿತ ತಪಾಸಣಾ ಕಾರ್ಯಕ್ರಮವು ಮಹಿಳೆಯರ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಸಹಕಾರಿಯಾಯಿತು.