ನಾಳೆ ಸುತ್ತೂರಿನಲ್ಲಿಪಂಚಾಂಗ ಪಠಣ,
ಅಲ್ಲಮಪ್ರಭು ಜಯಂತಿ
ನಂಜನಗೂಡು : ತಾಲೂಕಿನ ಸುತ್ತೂರು ಶ್ರೀ ವೀರಸಿಂಹಾಸನಾ ಮಹಾಸಂಸ್ಥಾನ ಮಠದಲ್ಲಿಮಾ.19ರಂದು ಯುಗಾದಿ, ಅಲ್ಲಮಪ್ರಭು ಜಯಂತಿ ಹಾಗೂ ಪಂಚಾಂಗ ಪಠಣ ಕಾರ್ಯಕ್ರಮಗಳನ್ನು ಸುತ್ತೂರು ಮಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿಏರ್ಪಡಿಸಿದೆ.
ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಕರ್ತೃಗದ್ದುಗೆಯಲ್ಲಿಬೆಳಗ್ಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ, ಬೆಳ್ಳಿರಥ ಪ್ರಾಕಾರೋತ್ಸವ ನೆರವೇರುತ್ತದೆ. ಶ್ರೀ ಮಹದೇಶ್ವರ ಸನ್ನಿಧಿ, ಶ್ರೀ ಸೋಮೇಶ್ವರ, ಶ್ರೀ ವೀರಭದ್ರೇಶ್ವರ, ಶ್ರೀ ನಂಜುಂಡೇಶ್ವರ ಮತ್ತು ಶ್ರೀ ನಾರಾಯಣಸ್ವಾಮಿ ದೇವಸ್ಥಾನಗಳಲ್ಲಿಯೂ ವಿಶೇಷ ಪೂಜೆ ನಡೆಯುತ್ತದೆ.
ಬೆಳಗ್ಗೆ 8ಕ್ಕೆ ಶ್ರೀಮಠದ ಹಾಗೂ ಗ್ರಾಮದ ಹೊನ್ನೇರು ಬಂಡಿಗಳು ಮಂಗಳವಾದ್ಯ ಹಾಗೂ ಕಲಾತಂಡಗಳೊಂದಿಗೆ ಶ್ರೀ ಮಠದಿಂದ ಹೊರಟು, ಭೂಮಿತಾಯಿಗೆ ಪೂಜೆ ಸಲ್ಲಿಸಿ, ಹೊಸ ವರ್ಷದ ಕೃಷಿ ಕಾಯಕಕ್ಕೆ ಚಾಲನೆ ನೀಡಿ, ಕರ್ತೃಗದ್ದುಗೆಯನ್ನು ಸಂದರ್ಶಿಸಿ ಶ್ರೀಮಠಕ್ಕೆ ಹಿಂದಿರುಗಲಿವೆ.
ಬೆಳಗ್ಗೆ 9.30ಕ್ಕೆ ಜೆಎಸ್ ಸ್ ವಸತಿ ಶಾಲೆಯ ಸಂಗೀತ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ಭಕ್ತಿ ಗೀತೆಗಳ ಕಾರ್ಯಕ್ರಮವಿದೆ. 10.30ಕ್ಕೆ ಹೊಳಲ್ಕೆರೆಯ ಕೊಟ್ರೆ ನಂಜಪ್ಪ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾ.ಜಿ.ವಿ. ಮಂಜುನಾಥ ಅವರು ‘ಅಲ್ಲಮಪ್ರಭು ಜೀವನ ಮತ್ತು ವಚನ Êವೈಭವ’ ವಿಷಯದ ಕುರಿತು ಉಪನ್ಯಾಸ ನೀಡುವರು. ಮೈಸೂರಿನ ಭಾರತೀಯ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರದಿಂದ ಪ್ರಕಟವಾಗಿರುವ ಶ್ರೀ ಪರಾಭವ ನಾಮ ಸಂವತ್ಸರದ ‘ಸುತ್ತೂರು ಶ್ರೀ ಶಿವರಾತ್ರೀಶ್ವರ ಪಂಚಾಂಗ’ವನ್ನು ಪಂಚಾಂಗಕರ್ತರಾದ ಸಿದ್ಧಾಂತಿ ಡಾ.ಕೆ.ಜಿ. ಪುಟ್ಟಹೊನ್ನಯ್ಯನವರು ಪಠಣ ಮಾಡಿ, ಸಂವಾದ ನಡೆಸಲಿದ್ದಾರೆ,’’ ಎಂದು ಪ್ರಕಟಣೆ ತಿಳಿಸಿದೆ.

