ಅರ್ಜಿದಾರರ ಅರ್ಹತೆ ಮತ್ತು ಇತರ ಮಾನದಂಡಗಳನ್ನು ನಿರ್ಣಯಿಸಿದ ನಂತರ ಸಾಲದಾತರು ಗೃಹಸಾಲ ಮಂಜೂರಾತಿ ಗೆ ಅನುಮೋದನೆ ನೀಡುತ್ತಾರೆ. ಇನ್ನು ಹೆಸರೇ ಸೂಚಿಸುವಂತೆ ವಿತರಣೆ ಎಂದರೆ ಹಣ ಬಿಡುಗಡೆ ಅಥವಾ ಪಾವತಿ ಎಂದರ್ಥ. ಗೃಹಸಾಲದ ಮೂಲಭೂತ ವಿಷಯಗಳ ಬಗ್ಗೆ ಸ್ಪಷ್ಟತೆಯ ಕೊರತೆಯು ಕೆಲವು ಗೊಂದಲಕ್ಕೆ ಕಾರಣವಾಗಬಹುದು ಮತ್ತು ಬುಕಿಂಗ್ ಗಳು ಹಾಗೂ ಪಾವತಿಗಳನ್ನು ಒಳಗೊಂಡಂತೆ ಮನೆ ಖರೀದಿದಾರರ ಮೇಲೆ ಪರಿಣಾಮ ಬೀರುತ್ತದೆ. ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಇದು ನಿರ್ಣಾಯಕವಾಗಿದೆ. ಹಾಗಾಗಿ ಮನೆ ಖರೀದಿದಾರರು ಸರಿಯಾದ ಆಸ್ತಿ ಖರೀದಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡಲು ಗೃಹಸಾಲದಲ್ಲಿಮಂಜೂರಾದ ಮತ್ತು ವಿತರಿಸಿದ ಮೊತ್ತಗಳ ನಡುವಿನ ವ್ಯತ್ಯಾಸ ತಿಳಿಯುವುದು ಮುಖ್ಯ. ಗೃಹಸಾಲದಲ್ಲಿಮಂಜೂರಾದ ಮೊತ್ತ: ಮನೆ ಖರೀದಿದಾರರು ಬ್ಯಾಂಕ್ ಅಥವಾ ಸಾಲ ನೀಡುವ ಸಂಸ್ಥೆಗೆ ಅರ್ಜಿ ಸಲ್ಲಿಸಿದಾಗ ಗೃಹಸಾಲದ ಚಕ್ರ ಪ್ರಾರಂಭವಾಗುತ್ತದೆ. ಸಾಲದಾತರು ಅರ್ಜಿದಾರರ ಆದಾಯ, ಕ್ರೆಡಿಟ್ ಸ್ಕೋರ್ , ವಯಸ್ಸು ಮತ್ತು ಇತರ ಋುಜುವಾತುಗಳನ್ನು ಪರಿಶೀಲಿಸಿದ ನಂತರ, ಅದು ಸಾಲ ನೀಡುವ ನಿರ್ಧಾರವನ್ನು ದೃಢೀಕರಿಸುವ ಮಂಜೂರಾತಿ ಪತ್ರ ನೀಡುತ್ತದೆ. ಇದರಲ್ಲಿ ಉಲ್ಲೇಖಿಸಲಾದ ಮಂಜೂರಾದ ಮೊತ್ತವು ಸಾಲಗಾರನ ಅರ್ಹತೆ ಮತ್ತು ಆಸ್ತಿ ಮೌಲ್ಯದ ಮೌಲ್ಯಮಾಪನದ ಆಧಾರದ ಮೇಲೆ ಸಾಲದಾತರು ಮಂಜೂರು ಮಾಡಿದ ಗರಿಷ್ಠ ಮೊತ್ತವನ್ನು ಸೂಚಿಸುತ್ತದೆ. ನಿಯಮ ಮತ್ತು ಷರತ್ತು: ಇದರಲ್ಲಿಮನೆ ಖರೀದಿದಾರರು ತಿಳಿದುಕೊಳ್ಳಬೇಕಾದ ವಿಷಯವೆಂದರೆ ಗೃಹಸಾಲ ಮಂಜೂರಾತಿ ಪತ್ರವು ನಿಯಮ, ಷರತ್ತುಗಳು ಮತ್ತು ಸಾಲ ಸಂಬಂಧಿತ ಮಾಹಿತಿ ಒಳಗೊಂಡಿರುತ್ತದೆ. ಅವುಗಳೆಂದರೆ ಸಾಲದಾತರು ಮಂಜೂರು ಮಾಡಿದ ಒಟ್ಟು ಗೃಹಸಾಲದ ಮೊತ್ತ, ಬಡ್ಡಿ ದರ, ಬಡ್ಡಿದರದ ಪ್ರಕಾರ (ಫ್ಲೋಟಿಂಗ್ ಅಥವಾ ಫಿಕ್ಸ್ $್ಡ), ಲೆಕ್ಕಾಚಾರಕ್ಕೆ ಪರಿಗಣಿಸಲಾದ ಮೂಲದರ, ಇಎಂಐ ವಿವರ ಸೇರಿದಂತೆ ಮರುಪಾವತಿ ರಚನೆ, ಸಾಲ ಮರುಪಾವತಿಯ ಅವಧಿ, ಮಂಜೂರಾತಿ ಪತ್ರದ ಸಿಂಧುತ್ವ, ತೆರಿಗೆ ಪ್ರಯೋಜನಗಳು ಮತ್ತು ವಿಶೇಷ ಯೋಜನೆ. ಗೃಹಸಾಲ ಪಡೆಯುವವರು ಗಮನಿಸಬೇಕಾದ ಅಂಶವೆಂದರೆ ಮಂಜೂರಾದ ಮೊತ್ತವು ಸಾಲದಾತರಿಂದ ಸಾಲಗಾರನಿಗೆ ತಕ್ಷಣದ ಹಣ ವರ್ಗಾಯಿಸುವುದನ್ನು ಸೂಚಿಸುವುದಿಲ್ಲ. ಇದರರ್ಥ ಸಾಲಗಾರನು ಬ್ಯಾಂಕ್ ನಿರ್ದಿಷ್ಟಪಡಿಸಿದ ಮೊತ್ತದವರೆಗೆ ಸಾಲಕ್ಕೆ ಅರ್ಹನಾಗಿರುತ್ತಾನೆ. ಮಂಜೂರಾದ ಪತ್ರಗಳು ಸಿಂಧುತ್ವ ಹೊಂದಿರುತ್ತವೆ ಮತ್ತು ಈ ಅವಧಿಯಲ್ಲಿಆದಾಯ, ಕ್ರೆಡಿಟ್ ಪ್ರೊಫೈಲ್ ಅಥವಾ ಆಸ್ತಿ ವಿವರಗಳಲ್ಲಿಬದಲಾವಣೆಗಳಿದ್ದರೆ ಅದು ಅಂತಿಮ ಸಾಲದ ಮೊತ್ತದ ಮೇಲೆ ಪರಿಣಾಮ ಬೀರಬಹುದು. ಗೃಹಸಾಲದಲ್ಲಿವಿತರಿಸಲಾದ ಮೊತ್ತ: ಬ್ಯಾಂಕ್ ನಲ್ಲಿಮಂಜೂರಾದ ಸಾಲವನ್ನು ಸಾಲಗಾರನ ಖಾತೆಗೆ ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಗೃಹಸಾಲದ ವಿತರಣೆಯು ಸೂಚಿಸುತ್ತದೆ. ಸಾಮಾನ್ಯವಾಗಿ ಈ ವಿತರಣೆಯು ಮಂಜೂರಾತಿ ಪತ್ರ ಸ್ವೀಕರಿಸಿದ ಕೆಲವು ದಿನಗಳ ನಂತರ ನಡೆಯುತ್ತದೆ. ಸಾಲವನ್ನು ನೇರವಾಗಿ ಖರೀದಿದಾರರಿಗೆ ವರ್ಗಾಯಿಸಲಾಗು ವುದಿಲ್ಲ. ಬದಲಾಗಿ ಅದನ್ನು ಹೊಸ ಆಸ್ತಿಗಳ ಡೆವಲಪರ್ ಗೆ ಮತ್ತು ಆಸ್ತಿಯನ್ನು ಮರುಮಾರಾಟ ಮಾಡುವ ಮಾರಾಟಗಾರರಿಗೆ ವರ್ಗಾಯಿಸಲಾಗುತ್ತದೆ. ಮೂಲಭೂತ ವ್ಯತ್ಯಾಸ: ಅನುಮೋದಿತ ಮೊತ್ತಕ್ಕಿಂತ ಭಿನ್ನವಾಗಿ ಸಾಲಗಾರನು ಸಾಲಗಾರರಿಂದ ಪಡೆಯುವ ಅಂತಿಮ ಸಾಲದ ಮೊತ್ತವೇ ವಿತರಣೆಯಾಗಿದೆ. ಮತ್ತೊಂದೆಡೆ, ಮಂಜೂರಾದ ಮೊತ್ತವು ಸಾಲಗಾರನ ಸಾಲದ ಅರ್ಹತೆ ಮಾತ್ರ ಸೂಚಿಸುತ್ತದೆ ಮತ್ತು ಸಾಲದಾತನು ಸಾಲದ ಅರ್ಜಿಯನ್ನು ಅನುಮೋದಿಸಿದ್ದಾನೆ ಎಂಬುದಕ್ಕೆ ದೃಢೀಕರಣವಾಗಿ ಕಾರ್ಯ ನಿರ್ವಹಿಸುತ್ತದೆ. ಸಾಲಗಾರನು ಷರತ್ತುಗಳನ್ನು ಪೂರೈಸದಿದ್ದರೆ ಮಂಜೂರಾದ ಮೊತ್ತವನ್ನು ಪರಿಷ್ಕರಿಸಬಹುದು ಅಥವಾ ಹಿಂಪಡೆಯಬಹುದು. ಆದರೆ ಸಾಲಗಾರನು ಎಲ್ಲಾ ಷರತ್ತುಗಳನ್ನು ಪೂರೈಸಿದ ನಂತರವೇ ಅದನ್ನು ಬಿಡುಗಡೆ ಮಾಡಲಾಗುವುದರಿಂದ ವಿತರಿಸಿದ ಸಾಲದ ಮೊತ್ತಕ್ಕೂ ಅದೇ ರೀತಿ ಮಾಡಲು ಸಾಧ್ಯವಿಲ್ಲ. ಆದಾಗ್ಯೂ, ವಿತರಿಸಿದ ಮೊತ್ತವು ಮಂಜೂರಾದ ಮೊತ್ತಕ್ಕಿಂತ ಕಡಿಮೆಯಿರಬಹುದು. ವಿಶೇಷವಾಗಿ ಸಾಲವನ್ನು ಹಂತಗಳಲ್ಲಿಬಿಡುಗಡೆ ಮಾಡಿದಾಗ ಅಥವಾ ಅಪೂರ್ಣ ದಾಖಲೆ, ಬಾಕಿ ಇರುವ ಅನುಮೋದನೆ ಅಥವಾ ಟೈಟಲ್ ವೆರಿಫಿಕೇಷನ್ ಮತ್ತು ನಿರ್ಮಾಣ ಪ್ರಗತಿಯಂತಹ ಕೆಲವು ಷರತ್ತುಗಳು ಬಾಕಿ ಇರುವಾಗ ಮೊತ್ತ ಕಡಿಮೆಯಾಗಬಹುದು. ಉಳಿದ ಮೊತ್ತವನ್ನು ಷರತ್ತುಗಳ ನೆರವೇರಿಕೆಯನ್ನು ಅವಲಂಬಿಸಿ ನಂತರ ವಿತರಿಸಬಹುದು. ಇದು ಗಮನಾರ್ಹ ವಿಳಂಬಗಳಿಗೆ ಕಾರಣವಾಗಬಹುದು. ಇದಲ್ಲದೆ ಮಂಜೂರಾದ ಪತ್ರದ ಸಿಂಧುತ್ವವು ವಿತರಣೆಯ ಮೊದಲು ಮುಗಿದಿದ್ದರೆ ಹೊಸ ಮೌಲ್ಯಮಾಪನ ಅಗತ್ಯವಾಗಬಹುದು. ಮಂಜೂರಾದ ಮತ್ತು ವಿತರಿಸಲಾದ ಮೊತ್ತ: ಸಾಲದ ಮಂಜೂರಾತಿ ಮತ್ತು ವಿತರಣೆಯು ಖರೀದಿದಾರರ ಗೃಹಸಾಲದ ಪ್ರಕ್ರಿಯೆಯು ವಿವಿಧ ಹಂತಗಳಲ್ಲಿನಡೆಯುತ್ತದೆ ಮತ್ತು ಮನೆ ಖರೀದಿದಾರರಿಗೆ ನಿರ್ದಿಷ್ಟ ಪರಿಣಾಮಗಳನ್ನು ಬೀರುತ್ತದೆ. ಗೃಹಸಾಲ ಪ್ರಕ್ರಿಯೆಯ ಆರಂಭಿಕ ಹಂತದಲ್ಲಿಸಾಲ ಮಂಜೂರಾತಿ ಆದರೂ, ಸಾಲದಾತನು ಸಾಲಗಾರನ ವಿವರಗಳನ್ನು ಸಂಪೂರ್ಣ ಪರಿಶೀಲಿಸಿದ ನಂತರ ಮತ್ತು ಆಸ್ತಿಯ ಪರಿಶೀಲನೆ ಸೇರಿದಂತೆ ಕಾನೂನುಬದ್ಧ ಶ್ರದ್ಧೆ ನಿರ್ವಹಿಸಿದ ನಂತರ ವಿತರಣೆಯಾಗುತ್ತದೆ. ವಿತರಣಾ ಮೊತ್ತವು ಸಾಲಗಾರನ ಮರುಪಾವತಿ ಬಾಧ್ಯತೆಗಳ ಸ್ಪಷ್ಟ ಚಿತ್ರಣ ಒದಗಿಸುತ್ತದೆ. ಆದರೆ ಮಂಜೂರಾದ ಮೊತ್ತವು ಸಾಲಗಾರನು ಪಡೆಯಲು ಅರ್ಹನಾಗಿರುವ ಸಾಲದ ಸೂಚನೆಯಾಗಿದೆ. ಮತ್ತೊಂದೆಡೆ ಮಂಜೂರಾದ ಮೊತ್ತವು ಮನೆ ಖರೀದಿದಾರರಿಗೆ ಸಹ ಪ್ರಯೋಜನಕಾರಿ. ಏಕೆಂದರೆ ಇದು ಸಾಲದ ಲಭ್ಯತೆ ಅರ್ಥ ಮಾಡಿಕೊಳ್ಳಲು ಮತ್ತು ಅವರ ಆದ್ಯತೆಯ ವ್ಯಾಪ್ತಿಯಲ್ಲಿಕೈಗೆಟಕುವ ಆಸ್ತಿಗಳನ್ನು ಶಾರ್ಟ್ ಲಿಸ್ಟ್ ಮಾಡುವ ಮೂಲಕ ಅವರ ಬಜೆಟನ್ನು ಅದಕ್ಕೆ ಅನುಗುಣವಾಗಿ ಯೋಜಿಸಲು ಅನುವು ಮಾಡಿಕೊಡುತ್ತದೆ. ವಿವಿಧ ರೀತಿಯ ಆಸ್ತಿಗಳಿಗೆ ವಿತರಣಾ ಪ್ರಕ್ರಿಯೆ: ಸಾಲಗಾರರು ಆಸ್ತಿ ಆಯ್ಕೆ ಮಾಡಿ ಮಾರಾಟಗಾರ ಅಥವಾ ಬಿಲ್ಡರ್ ನೊಂದಿಗೆ ಒಪ್ಪಂದವನ್ನು ಅಂತಿಮಗೊಳಿಸಿದ ನಂತರ ಅದಕ್ಕೆ ಅನ್ವಯವಾಗುವಂತೆ ಗೃಹಸಾಲ ವಿತರಣೆ ನಡೆಯುತ್ತದೆ. ನಿರ್ಮಾಣ ಹಂತದಲ್ಲಿರುವ ಅಥವಾ ಮರುಮಾರಾಟದಂತಹ ಆಸ್ತಿಯ ಪ್ರಕಾರವನ್ನು ಅವಲಂಬಿಸಿ ವಿತರಣಾ ಪ್ರಕ್ರಿಯೆ ಭಿನ್ನವಾಗಿರಬಹುದು. ನಿರ್ಮಾಣ ಹಂತದಲ್ಲಿರುವ ಆಸ್ತಿಗಳಿಗೆ, ಸಾಲ ವಿತರಣೆಯನ್ನು ವಿವಿಧ ನಿರ್ಮಾಣ ಹಂತಗಳಿಗೆ ಲಿಂಕ್ ಮಾಡಲಾಗುತ್ತದೆ. ಯೋಜನೆಯು ಪೂರ್ಣಗೊಂಡಿದೆ ಎಂದು ಪರಿಶೀಲಿಸಿದ ನಂತರ ಬ್ಯಾಂಕ್ ಗಳು ಬಿಲ್ಡರ್ ಗೆ ಹಣ ಬಿಡುಗಡೆ ಮಾಡುತ್ತವೆ. ಈ ಹಂತದಲ್ಲಿಸಾಲಗಾರರು ಪೂರ್ವ ಇಎಂಐ ಬಡ್ಡಿ ಪಾವತಿಸಬೇಕಾಗುತ್ತದೆ. ಮತ್ತೊಂದೆಡೆ ಹೊಸ ಮತ್ತು ಮರುಮಾರಾಟದ ಆಸ್ತಿಗಳನ್ನು ಒಳಗೊಂಡಂತೆ ಪೂರ್ಣಗೊಂಡ ಯೋಜನೆ ಗಳಿಗೆ ಸಾಲವನ್ನು ಒಂದೇ ಕಂತಿನಲ್ಲಿವಿತರಿಸಲಾಗುತ್ತದೆ ಮತ್ತು ಇಎಂಐ ಪಾವತಿಗಳನ್ನು ತಕ್ಷಣವೇ ಮಾಡಲಾಗುತ್ತದೆ. ಗೃಹಸಾಲದ ಪ್ರಯಾಣದಲ್ಲಿತಮ್ಮ ಹಣಕಾಸಿನ ಬಾಧ್ಯತೆಗಳು ಯಾವಾಗ ಪ್ರಾರಂಭವಾಗುತ್ತವೆ ಎಂಬುದನ್ನು ಮನೆ ಖರೀದಿದಾರರು ಅರ್ಥ ಮಾಡಿಕೊಳ್ಳಬೇಕು. ಅಂದರೆ ಗೃಹಸಾಲದ ವಿತರಣೆ ಪೂರ್ಣಗೊಂಡ ನಂತರವೇ ಅವರು ತಮ್ಮ ಇಎಂಐಗಳನ್ನು ಪಾವತಿಸಲು ಪ್ರಾರಂಭಿಸುತ್ತಾರೆ.

