ರೈಲ್ವೆ ದ್ವಿಪಥೀಕರಣ ಕಾಧಿಮಧಿಗಾರಿ ಶೇ.86ರಷ್ಟು ಪ್ರಗತಿ

Contributed byDHANANJAYAGOWDA|Vijaya Karnataka

ಬೈಯಪ್ಪನಹಳ್ಳಿ-ಹೊಸೂರು ರೈಲು ಮಾರ್ಗದ ದ್ವಿಪಥೀಕರಣ ಕಾಮಗಾರಿ ಶೇ.86ರಷ್ಟು ಪೂರ್ಣಗೊಂಡಿದೆ. ಯಶವಂತಪುರ-ಚನ್ನಸಂದ್ರ ಮಾರ್ಗದಲ್ಲಿ ಶೇ.55ರಷ್ಟು ಪ್ರಗತಿಯಾಗಿದೆ. ಈ ಕಾಮಗಾರಿಗಳು ಪ್ರಯಾಣಿಕರ ಅನುಕೂಲ, ಸಮಯ ಉಳಿತಾಯ ಮತ್ತು ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿವೆ. ಬೈಯಪ್ಪನಹಳ್ಳಿ-ಹೊಸೂರು ಮಾರ್ಗವನ್ನು 2027ರ ಫೆಬ್ರವರಿ ವೇಳೆಗೆ ಪೂರ್ಣಗೊಳಿಸುವ ಗುರಿ ಇದೆ. ಯಶವಂತಪುರ-ಚನ್ನಸಂದ್ರ ಮಾರ್ಗವನ್ನು 2027ರ ಮಾರ್ಚ್‌ಗೆ ಪೂರ್ಣಗೊಳಿಸಲಾಗುವುದು.

railway doubling from baiyappanahalli to hosur progress at 86
ಬೆಂಗಳೂರಿನಲ್ಲಿ ರೈಲು ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಬೈಯಪ್ಪನಹಳ್ಳಿ-ಹೊಸೂರು ಮತ್ತು ಯಶವಂತಪುರ-ಚನ್ನಸಂದ್ರ ನಡುವೆ ರೈಲ್ವೆ ಮಾರ್ಗಗಳ ದ್ವಿಪಥೀಕರಣ ಕಾಮಗಾರಿ ಭರದಿಂದ ಸಾಗಿದೆ. ಬೈಯಪ್ಪನಹಳ್ಳಿ-ಹೊಸೂರು 48 ಕಿ.ಮೀ. ಉದ್ದದ ಮಾರ್ಗದಲ್ಲಿ ಶೇ.86ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, 2027ರ ಫೆಬ್ರವರಿ ವೇಳೆಗೆ ಸಂಪೂರ್ಣಗೊಳ್ಳುವ ನಿರೀಕ್ಷೆಯಿದೆ. ಆದರೆ, ಯಶವಂತಪುರ-ಚನ್ನಸಂದ್ರ 21.7 ಕಿ.ಮೀ. ಮಾರ್ಗದಲ್ಲಿ ಕೇವಲ ಶೇ.55ರಷ್ಟು ಮಾತ್ರ ಪ್ರಗತಿಯಾಗಿದ್ದು, ಇದು 2027ರ ಮಾರ್ಚ್‌ವರೆಗೂ ಮುಗಿಯುವ ಸಾಧ್ಯತೆಯಿದೆ. ಈ ಕಾಮಗಾರಿಗಳು ರೈಲುಗಳ ಸಂಚಾರ ದಟ್ಟಣೆ ಕಡಿಮೆ ಮಾಡಿ, ಪ್ರಯಾಣಿಕರು, ಕಾರ್ಮಿಕರಿಗೆ ಅನುಕೂಲ ಮಾಡಿಕೊಡಲು, ಸಮಯ ಉಳಿಸಲು ಮತ್ತು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲು ರೂಪಿಸಲಾಗಿದೆ.

ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆ-ರೈಡ್‌) 2020ರಲ್ಲಿ ಈ ಕಾಮಗಾರಿಯ ಹೊಣೆ ಹೊತ್ತಿತ್ತು. ಬೈಯಪ್ಪನಹಳ್ಳಿ-ಹೊಸೂರು ಮಾರ್ಗದಲ್ಲಿ ಈಗಾಗಲೇ 14 ಕಿ.ಮೀ. ದ್ವಿಪಥದಲ್ಲಿ ರೈಲು ಸಂಚಾರ ಆರಂಭವಾಗಿದೆ. ಬೆಳ್ಳಂದೂರು ರಸ್ತೆ-ಕಾರ್ಮೆಲರಾಂ ಬ್ಲಾಕ್ ಸೆಕ್ಷನ್ 3.522 ಕಿ.ಮೀ. ಮತ್ತು ಹುಸ್ಕೂರು ಹೊಸ ನಿಲ್ದಾಣ ಯಾರ್ಡ್‌ ಕಾಮಗಾರಿ ನವೆಂಬರ್‌ನಲ್ಲಿಯೇ ಪೂರ್ಣಗೊಂಡಿದೆ. ಹೀಲಲಿಗೆಯಿಂದ ಬೆಳ್ಳಂದೂರು ರಸ್ತೆ ತನಕ 14 ಕಿ.ಮೀ. ದ್ವಿಪಥ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಿದೆ.
ಬೆಳ್ಳಂದೂರು ರಸ್ತೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗಿದೆ. ಇಲ್ಲಿ 5 ಲೈನ್‌ಗಳಿದ್ದು, ಪ್ರತಿ 600 ಮೀಟರ್‌ಗೆ ಎರಡು ಎತ್ತರದ ಪ್ಲಾಟ್‌ಫಾರ್ಮ್‌ಗಳು, ಪ್ರಯಾಣಿಕರ ಸುಗಮ ಸಂಚಾರಕ್ಕೆ 7.5 ಮೀಟರ್ - 3.0 ಮೀಟರ್ ಗಾತ್ರದ ಸುರಂಗ ಮಾರ್ಗ ನಿರ್ಮಿಸಲಾಗಿದೆ. ಪ್ರತಿ ಪ್ಲಾಟ್‌ಫಾರ್ಮ್‌ ಮೇಲೆ 48 ಮೀಟರ್ - 8 ಮೀಟರ್ ಗಾತ್ರದ ಆರು ಶೆಲ್ಟರ್‌ಗಳು, 672 ಚದರ ಮೀಟರ್ ವಿಸ್ತೀರ್ಣದ ಜಿ+1 ಹೊಸ ನಿಲ್ದಾಣ ಕಟ್ಟಡವನ್ನು ಲಿಫ್ಟ್ ಸೌಲಭ್ಯದೊಂದಿಗೆ ನಿರ್ಮಿಸಲಾಗಿದೆ. ರಸ್ತೆ ಕೆಳ ಸೇತುವೆ, ವರ್ತೂರು ರಸ್ತೆಯಿಂದ ನಿಲ್ದಾಣಕ್ಕೆ ಸಂಪರ್ಕಿಸುವ ಕಾಂಕ್ರೀಟ್ ರಸ್ತೆ, ಕುಳಿತುಕೊಳ್ಳಲು ಬೆಂಚುಗಳು, ಕುಡಿಯುವ ನೀರಿನ ವ್ಯವಸ್ಥೆ ಎಲ್ಲವೂ ಸಿದ್ಧವಾಗಿದೆ.

ಬೈಯಪ್ಪನಹಳ್ಳಿ ಜಂಕ್ಷನ್‌ನಿಂದ ಆರಂಭವಾಗುವ ಈ ಹೊಸ ದ್ವಿಪಥ ಮಾರ್ಗವು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು ನಗರ ರೈಲು ನಿಲ್ದಾಣ, ಕೃಷ್ಣರಾಜಪುರ, ಧರ್ಮಾವರಂ ಮತ್ತು ಬಾಣಸವಾಡಿಯನ್ನು ಸಂಪರ್ಕಿಸುವ ಪ್ರಮುಖ ಮಾರ್ಗಗಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ಭೂಕಾಮಗಾರಿ ಶೇ.98ರಷ್ಟು, ಬ್ಲಾಂಕೆಟಿಂಗ್‌ ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿದೆ. 101 ಸಣ್ಣ ಸೇತುವೆಗಳ ನಿರ್ಮಾಣ ಶೇ.96ರಷ್ಟು, 7 ದೊಡ್ಡ ಸೇತುವೆಗಳ ಕಾಮಗಾರಿ ಶೇ.75ರಷ್ಟು, ನಾಲ್ಕು ನಿಲ್ದಾಣಗಳ ಕಾಮಗಾರಿ ಶೇ.98ರಷ್ಟು ಮುಗಿದಿದೆ. ಟ್ರ್ಯಾಕ್ ಲಿಂಕಿಂಗ್‌ ಶೇ.55ರಷ್ಟು ಬಾಕಿ ಇದೆ. ಬೈಯಪ್ಪನಹಳ್ಳಿ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಸೇತುವೆ ಸಂಖ್ಯೆ 531 ಅನ್ನು ದ್ವಿಪಥಕ್ಕೆ ವಿಸ್ತರಿಸಲು ಅವಕಾಶ ಕಲ್ಪಿಸಲಾಗಿದೆ. ಆನೇಕಲ್‌ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ.

ಯಶವಂತಪುರ-ಚನ್ನಸಂದ್ರ ನಡುವಿನ 21.7 ಕಿ.ಮೀ. ದ್ವಿಪಥೀಕರಣ ಕಾಮಗಾರಿ ಕೇವಲ ಶೇ.55ರಷ್ಟು ಮಾತ್ರ ಮುಗಿದಿದೆ. ಈ ಮಾರ್ಗದ ಕಾಮಗಾರಿ ಮುಗಿಸಲು 2027ರ ಮಾರ್ಚ್‌ವರೆಗೂ ಗಡುವು ನೀಡಲಾಗಿದೆ. ಇಲ್ಲಿಯವರೆಗೆ ಯಾವುದೇ ಜೋಡಿ ಮಾರ್ಗ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಈ ಮಾರ್ಗದ ಯೋಜನೆಗೆ ಮಂಜೂರಾದ ವೆಚ್ಚ 314.10 ಕೋಟಿ ರೂ. ಆಗಿದೆ. 2025-26ರವರೆಗಿನ ಸಂಚಿತ ವೆಚ್ಚ 161.85 ಕೋಟಿ ರೂ. ಆಗಿದೆ.

ಯಶವಂತಪುರ-ಚನ್ನಸಂದ್ರ ಮಾರ್ಗವು 21.7 ಕಿ.ಮೀ. ಉದ್ದವಿದ್ದು, ಯಶವಂತಪುರ-ವೈಪಿಆರ್ ಬೈಪಾಸ್ 3 ಕಿ.ಮೀ., ವೈಪಿಆರ್ ಬೈಪಾಸ್-ಲೊಟ್ಟೆಗೊಲ್ಲಹಳ್ಳಿ 2.30 ಕಿ.ಮೀ., ಲೊಟ್ಟೆಗೊಲ್ಲಹಳ್ಳಿ-ಹೆಬ್ಬಾಳ 2.80 ಕಿ.ಮೀ., ಹೆಬ್ಬಾಳ-ಬಾಣಸವಾಡಿ 7.60 ಕಿ.ಮೀ., ಬಾಣಸವಾಡಿ-ಬೈಯಪ್ಪನಹಳ್ಳಿ ‘ಎ’ ಕ್ಯಾಬಿನ್ 4 ಕಿ.ಮೀ. ವಿಭಾಗಗಳನ್ನು ಒಳಗೊಂಡಿದೆ.

ಬೈಯಪ್ಪನಹಳ್ಳಿ-ಹೊಸೂರು ಮಾರ್ಗವು 48 ಕಿ.ಮೀ. ಉದ್ದವಿದ್ದು, ಬೈಯಪ್ಪನಹಳ್ಳಿ-ಬೆಳ್ಳಂದೂರು 9.7 ಕಿ.ಮೀ., ಬೆಳ್ಳಂದೂರು-ಕಾರ್ಮೆಲರಂ 3.5 ಕಿ.ಮೀ., ಹುಸ್ಕೂರು-ಹೀಲಲಿಗೆ 10.3 ಕಿ.ಮೀ., ಹೀಲಲಿಗೆ-ಆನೇಕಲ್‌ ರಸ್ತೆ 10 ಕಿ.ಮೀ., ಆನೇಕಲ್‌ ರಸ್ತೆ-ಮಾರನಾಯಕನಹಳ್ಳಿ 6.9 ಕಿ.ಮೀ., ಮಾರನಾಯಕನಹಳ್ಳಿ-ಹೊಸೂರು 7.6 ಕಿ.ಮೀ. ವಿಭಾಗಗಳನ್ನು ಒಳಗೊಂಡಿದೆ.

ಈ ಯೋಜನೆ 2018ರಲ್ಲಿ ಮಂಜೂರಾಯಿತು. 2020ರ ಜೂನ್‌ನಲ್ಲಿ ‘ಕೆ-ರೈಡ್‌’ಗೆ ಕಾಮಗಾರಿಯ ಜವಾಬ್ದಾರಿ ವರ್ಗಾಯಿಸಲಾಯಿತು. ಯೋಜನೆಗೆ ಮಂಜೂರಾದ ವೆಚ್ಚ 498.73 ಕೋಟಿ ರೂ. ಆಗಿದೆ. 2025-26ರವರೆಗಿನ ಸಂಚಿತ ವೆಚ್ಚ 656.63 ಕೋಟಿ ರೂ. ಆಗಿದೆ.

"ಬೈಯಪ್ಪನಹಳ್ಳಿ- ಹೊಸೂರು ಜೋಡಿ ಮಾರ್ಗ (48 ಕಿ.ಮೀ.) ಯೋಜನೆಯಲ್ಲಿ ಇದುವರೆಗೆ ಹೀಲಲಿಗೆ- ಕಾರ್ಮೆಲರಾಂ 10.5 ಕಿ.ಮೀ. ಮಾರ್ಗ ಮತ್ತು ಕಾರ್ಮೆಲರಾಂ- ಬೆಳ್ಳಂದೂರು ರಸ್ತೆ (3.5 ಕಿ.ಮೀ.) ಮಾರ್ಗ ಸೇರಿ ಒಟ್ಟು 14 ಕಿ.ಮೀ. ಜೋಡಿ ಮಾರ್ಗವನ್ನು ಕಾರ್ಯ ನಿಯೋಜನೆಗೊಳಿಸಲಾಗಿದೆ. 2027ರ ಫೆಬ್ರವರಿಗೆ ಯೋಜನೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ಯಶವಂತಪುರ- ಚನ್ನಸಂದ್ರ ಜೋಡಿಮಾರ್ಗ ಯೋಜನೆಯಲ್ಲಿ (21.7 ಕಿ.ಮೀ.) ಒಟ್ಟಾರೆ ಶೇ.55ರಷ್ಟು ಕಾಮಗಾರಿ ಪ್ರಗತಿಯಾಗಿದೆ. 2027ರ ಮಾರ್ಚ್‌ಗೆ ಈ ಯೋಜನೆ ಪೂರ್ಣಗೊಳಿಸುವ ಗುರಿ ನಿಗದಿಪಡಿಸಲಾಗಿದೆ," ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗೀಯದ ಅಧಿಕೃತ ಮೂಲಗಳು ತಿಳಿಸಿವೆ.