5 ಲಕ್ಷ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಜ್ಯ ಗ್ರಾಹಕ ವಾಜ್ಯಗಳ ಆಯೋಗದ ಅಧ್ಯಕ್ಷ ಶಿವಶಂಕರೇಗೌಡ ಹೇಳಿಕೆ
ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರ
ನಮ್ಮ ಇಂದಿನ ಮತ್ತು ಮುಂದಿನ ಪೀಳಿಗೆಯ ಉಳಿವಿಗಾಗಿ ಪರಿಸರ ಸಂರಕ್ಷಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿನಾವೆಲ್ಲರೂ ಗಿಡಗಳನ್ನು ನೆಟ್ಟು ಪೋಷಿಸುವ ಅಗತ್ಯತೆ ನಮ್ಮ ಮೇಲಿದೆ. ಸಂವಿಧಾನದತ್ತವಾಗಿ ಬಂದಿರುವ ಹಕ್ಕುಗಳನ್ನು ಎಲ್ಲರೂ ಚಲಾಯಿಸುತ್ತೇವೆ. ಆದರೆ ಕರ್ತವ್ಯಗಳನ್ನು ಮರೆತಿದ್ದೇವೆ ಎಂದು ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯಗಳ ಆಯೋಗದ ಅಧ್ಯಕ್ಷ ಟಿ.ಜಿ. ಶಿವಶಂಕರೇಗೌಡ ತಿಳಿಸಿದರು.
ತಾಲೂಕಿನ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮಸ್ಥಳ ಮುದ್ದೇನಹಳ್ಳಿಯಲ್ಲಿನ ಸರ್ ಎಂ.ವಿ. ಪುತ್ಥಳಿಗೆ ಮಾಲಾರ್ಪಣೆ ಮಾಡಿ, ನಂತರ 5 ಲಕ್ಷ ಗಿಡಗಳನ್ನು ನೆಡುವ ಕಾರ್ಯಕ್ರಮದ ಭಾಗವಾಗಿ ಸ್ಮಾರಕದ ಬಳಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಸಂವಿಧಾನವು ಪರಿಸರ ರಕ್ಷಣೆ ಕುರಿತು ಕರ್ತವ್ಯಗಳಲ್ಲಿತಿಳಿಸಿದೆ. ಈ ಬಗ್ಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್ . ಅಂಬೇಡ್ಕರ್ ಅವರು ಒತ್ತಿ ಹೇಳಿದ್ದಾರೆ. ಇದರ ಭಾಗವಾಗಿ ಚಿಕ್ಕಬಳ್ಳಾಪುರ ನ್ಯಾಯಾಂಗ ಮತ್ತು ಜಿಲ್ಲಾಡಳಿತದ ಆಡಳಿತ ವರ್ಗಗಳು 5 ಲಕ್ಷ ಸಸಿಗಳನ್ನು ನೆಟ್ಟು ಬೆಳೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ವಿಚಾರ ಎಂದು ತಿಳಿಸಿದರು.
ಪ್ರಧಾನ ಜಿಲ್ಲಾಹಾಗೂ ಸತ್ರ ನ್ಯಾಯಾಧೀಶ ಟಿ.ಪಿ. ರಾಮಲಿಂಗೇಗೌಡ ಮಾತನಾಡಿ, ರಾಜ್ಯದಲ್ಲಿ5 ಕೋಟಿ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮಾಡುವ ಜವಾಬ್ದಾರಿಯ ಕಾರ್ಯಕ್ಕಾಗಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಧರೆ ಫೌಂಡೇಶನ್ ಜತೆ ಒಪ್ಪಂದ ಮಾಡಿಕೊಂಡಿದೆ. ಆ ಮೂಲಕ ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿಸಾಮಾಜಿಕ ಜವಾಬ್ದಾರಿಯನ್ನು ತೋರುತ್ತಿದೆ. ಇದರ ಭಾಗವಾಗಿ ಈಗಾಗಲೇ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿಯ ಇಂದಿರಾಗಾಂಧಿ ವಸತಿ ಶಾಲೆಯ ಆವರಣದಲ್ಲಿಗಿಡ ನೆಡುವ ಕಾರ್ಯಕ್ರಮಕ್ಕೆ ಕಳೆದ ಏಪ್ರಿಲ್ ನಲ್ಲಿಚಾಲನೆ ನೀಡಲಾಗಿದೆ ಎಂದರು.
ಮುಂದುವರಿದ ಭಾಗವಾಗಿ ಸರ್ ಎಂ.ವಿಶ್ವೇಶ್ವರಯ್ಯನವರ ಸ್ಮಾರಕದ ಬಳಿ 5 ಗುಂಟೆ ಜಮೀನಿನಲ್ಲಿಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಈ ಕಾರ್ಯಕ್ರಮ ಮುಂದಿನ ದಿನಗಳಲ್ಲಿಜಿಲ್ಲೆಯ ನಾನಾ ಕಡೆ ಅನುಷ್ಠಾನವಾಗಿ ಒಟ್ಟು 5 ಲಕ್ಷ ಗಿಡಗಳನ್ನು ನೆಟ್ಟು ಬೆಳೆಸುವ ಯೋಜಿತ ಗುರಿಯನ್ನು ಹೊಂದಲಾಗಿದೆ ಎಂದು ಅವರು ಹೇಳಿದರು.
ಕೇವಲ ಗಿಡಗಳನ್ನು ನೆಟ್ಟು ಹೋಗುವುದರಿಂದ ಗಿಡ ಬೆಳೆಯುವುದಿಲ್ಲ, ಅವು ಬೆಳೆಯುವವರೆಗೆ ಕನಿಷ್ಠ 3 ವರ್ಷ ಸಂರಕ್ಷಣೆ ಮಾಡುವ ಅಗತ್ಯವಿದೆ. ಜಿಲ್ಲಾಡಳಿತ, ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ ಇವರ ಸಹಕಾರ ಪಡೆದು ಜಿಲ್ಲೆಯಲ್ಲಿ5 ಲಕ್ಷ ಸಸಿಗಳನ್ನು ನೆಟ್ಟು ಬೆಳೆಸಲಾಗುವುದು. ಆ ಮೂಲಕ ಅಂತರ್ಜಲ ವೃದ್ಧಿಸಿ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಲಾಗುವುದು. ಈ ಕಾರ್ಯಕ್ಕೆ ಜಿಲ್ಲೆಯ ಸರಕಾರೇತರ ಸಂಸ್ಥೆಗಳು, ಸಮಸ್ತ ಸಾರ್ವಜನಿಕರು, ಸಹಕಾರ ನೀಡಬೇಕು. ಗಿಡ ಬೆಳೆಸುವ ಜವಾಬ್ದಾರಿಯನ್ನು ಸಾರ್ವಜನಿಕರು ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾವಕೀಲರ ಸಂಘದ ಅಧ್ಯಕ್ಷ ಅಭಿಲಾಷ್ ಮಾತನಾಡಿ, ಗಿಡ ನೆಟ್ಟು ಮರ ಬೆಳೆಸುವುದರಿಂದ ಬರಗಾಲಗಳನ್ನು ತಪ್ಪಿಸಬಹುದು. ಮಳೆಯ ಪ್ರಮಾಣದಲ್ಲಿಸಮತೋಲನದ ಹಂಚಿಕೆಯನ್ನು ಕಾಪಾಡಿಕೊಳ್ಳಬಹುದು. ಆ ಮೂಲಕ ಅಂತರ್ಜಲ ವೃದ್ಧಿಯಾಗಿ ಪರಿಸರ ಸಂರಕ್ಷಣೆ ಆಗಲಿದೆ. ಈ ಬಗ್ಗೆ ಜಿಲ್ಲೆಯ ಸಮಸ್ತ ನಾಗರಿಕರು ಅರಿವು ಹೊಂದಿ ತಮ್ಮ ವ್ಯಾಪ್ತಿಯಲ್ಲಿಗಿಡ ನೆಟ್ಟು ಬೆಳೆಸುವಂತೆ ಕರೆ ನೀಡಿದರು.
ಈ ವೇಳೆ 1ನೇ ಹೆಚ್ಚುವರಿ ಜಿಲ್ಲಾನ್ಯಾಯಾಧೀಶ ಕಾಂತರಾಜ್ , ಹಿರಿಯ ಸಿವಿಲ್ ನ್ಯಾಯಾಧೀಶರಾದ ಉಮೇಶ್ , ಭಾರತಿ ಎಂ., ಬಿ.ಶಿಲ್ಪಾ, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಸರ್ ಎಂ.ವಿಶ್ವೇಶ್ವರಯ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಸತೀಶ್ ಮೋಕ್ಷಗುಂಡಂ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.
ಕೋಟ್ :
ಈ ವರ್ಷ 5 ಲಕ್ಷ ಗಿಡಗಳನ್ನು ಮುಂಗಾರು ಮಳೆಯ ಅವಧಿಯಲ್ಲಿನೆಡಲು ಜಿಲ್ಲಾಡಳಿತ ಸಕಲ ಸಿದ್ಧ್ದತೆಗಳನ್ನು ಮಾಡಿಕೊಂಡಿದೆ. ಆ ಕಾರ್ಯಕ್ರಮದ ಜತೆ ಕಾನೂನು ಸೇವಾ ಪ್ರಾಧಿಕಾರದ ಜೊತೆಗೂಡಿ ಹೆಚ್ಚುವರಿಯಾಗಿ 5 ಲಕ್ಷ ಸಸಿಗಳನ್ನು ಬೆಳೆಸುವ ಅರ್ಥಪೂರ್ಣ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗುವುದು. ನೆಟ್ಟ ಗಿಡಗಳ ಪೈಕಿ ಶೇ.80ರಷ್ಟು ಗಿಡಗಳನ್ನು ಉಳಿಸಿ ಬೆಳೆಸಲು ಪ್ರತಿ ತಿಂಗಳಿಗೊಮ್ಮೆ ಎಲ್ಲಾನೆಟ್ಟ ಸಸಿಗಳ ಮೌಲ್ಯಮಾಪನ ಮಾಡುವ ಮೂಲಕ ಈ ಮೌಲ್ಯಯುತವಾದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗುವುದು.
-ಜಿ.ಪ್ರಭು, ಜಿಲ್ಲಾಧಿಕಾರಿ
13ಸಿಬಿಪಿಫೋಟೋ06
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯಲ್ಲಿಸರ್ ಎಂವಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, 5 ಲಕ್ಷ ಗಿಡಗಳನ್ನು ನೆಡುವ ಕಾರ್ಯಕ್ರಮದ ಭಾಗವಾಗಿ ಅವರ ಸ್ಮಾರಕದ ಬಳಿ ಗಿಡ ನೆಡುವ ಮೂಲಕ ಚಾಲನೆ ನೀಡಲಾಯಿತು.

