ಮಕ್ಕಳ ಕಥæ

Contributed byshubha.hegde@timesgroup.com|Vijaya Karnataka

ನಂದು ಎಂಬ ಬಡ ಹುಡುಗನಿಗೆ ಸರಸ್ವತಿ ವಿದ್ಯಾಲಯ ಉಚಿತ ಶಿಕ್ಷಣ ನೀಡಿತು. ಅಸೂಯೆ ಪಟ್ಟ ಗೆಳೆಯರು ಪುಸ್ತಕ ಕದ್ದರೂ, ನಂದು ಕಂಠಪಾಠ ಮಾಡಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದನು. ತಪ್ಪಿನ ಅರಿವಾದ ಗೆಳೆಯರು ಕ್ಷಮೆ ಕೇಳಿದರು. ನಂದು ಎಲ್ಲರ ಪ್ರೀತಿ ಗಳಿಸಿ ಬೆಳೆದನು.

success of nandu a story of rising from poverty to education

ಗುಣಾಢ್ಯ ನಂದು

ವಿದ್ಯಾನಗರದ ಸರಸ್ವತಿ ವಿದ್ಯಾಲಯದಲ್ಲಿಪ್ರತಿ ವರ್ಷ ಕಡಿಮೆ ಶುಲ್ಕದಲ್ಲಿಬೇಸಿಗೆ ಶಿಬಿರಗಳನ್ನು ಆಯೋಜಿಸುವುದು ಪದ್ಧತಿ. ಅಲ್ಲದೆ ಸುತ್ತಮುತ್ತಲಿನ ಹಳ್ಳಿಗಳಲ್ಲಿಉಚಿತ ಶಿಬಿರ ಹಾಗೂ ಸ್ಪರ್ಧೆಗಳನ್ನು ಏರ್ಪಡಿಸಿ ಬಡ ಮತ್ತು ಚುರುಕುಬುದ್ಧಿಯ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರಿಗೆ ಉಚಿತ ಶಿಕ್ಷಣ ನೀಡಲಾಗುತ್ತಿತ್ತು. ಒಮ್ಮೆ ಹಾಗೆ ಹುಡುಕಿ ತಂದ ಚುರುಕುಮತಿಯೇ ನಂದು. ಅವ ಹುಟ್ಟು ಬುದ್ಧಿವಂತ. ಆದರೆ ವಿದ್ಯಾಭ್ಯಾಸ ಆರನೆತ್ತೆಗೆ ನಿಲ್ಲಲು ಕಾರಣ ಬಡತನ ಹಾಗೂ ಮನೆಯ ಜವಾಬ್ದಾರಿ. ತಂದೆಯ ಆರೋಗ್ಯ ಹದಗೆಟ್ಟಿತ್ತು. ತಾಯಿ ನಾಲ್ಕಾರು ಮನೆಯ ಮುಸುರೆ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದರು. ನಂದುವೂ ಕೆಲವು ಮನೆಗಳ ಅಂಗಳ ತೊಳೆಯುವುದು; ಗಿಡಕ್ಕೆ ನೀರು ಹಾಕುವುದು ಮಾಡುತ್ತ ಖರ್ಚನ್ನು ತೂಗಿಸಲು ಅಮ್ಮನಿಗೆ ನೆರವಾಗಿದ್ದ.

ನಂದುವಿನ ಹೆತ್ತವರಿಂದ ಒಪ್ಪಿಗೆ ಪಡೆದ ನಂತರ ವಿದ್ಯಾನಗರಕ್ಕೆ ಕರೆತಂದು ಸರಸ್ವತಿ ವಿದ್ಯಾಲಯಕ್ಕೆ ಸೇರಿಸಿದ್ದಾಗಿತ್ತು. ವಿದ್ಯಾರ್ಥಿ ನಿಲಯದಲ್ಲಿಉಳಿದುಕೊಳ್ಳುವ ವ್ಯವಸ್ಥೆಯೂ ಆಗಿತ್ತು. ಖಾಲಿ ಕೂರಲು ಇಷ್ಟಪಡದ ನಂದು ವಿದ್ಯಾರ್ಥಿ ನಿಲಯದ ಅಂಗಳ ಗುಡಿಸುವುದು, ಗಿಡಗಳಿಗೆ ನೀರುಣಿಸುವುದು ಮುಂತಾದ ಕೆಲಸಗಳಲ್ಲಿರಾಮಯ್ಯನಿಗೆ ಕೈಜೋಡಿಸಿ ಬೇಡವೆಂದರೂ ಸಹಾಯ ಮಾಡುತ್ತ ರಾಮಯ್ಯನ ಮನ ಗೆಲ್ಲುವುದರ ಜೊತೆಗೆ ಬಹುಬೇಗನೆ ಎಲ್ಲರ ವಿಶ್ವಾಸಕ್ಕೂ ಪಾತ್ರನಾದ.

ಶಾಲೆಯೂ ಶುರುವಾಯಿತು, ಗೆಳೆಯರೂ ಆದರು. ಎಲ್ಲರನ್ನೂ ಹಚ್ಚಿಕೊಂಡು ಗೆಳೆತನ ಬೆಳೆಸಿ ಪ್ರೀತಿ ಗಳಿಸಿದ ನಂದು. ಸ್ನೇಹಿತರಲ್ಲಿಅಸೂಯೆ ಉಳ್ಳವರೂ ಅನೇಕರಿದ್ದರು. ನಂದು ತನ್ನ ಬುದ್ಧಿವಂತಿಕೆ, ಪ್ರತಿಭೆಯಿಂದಲೇ ಶಿಕ್ಷಕರ ಅಚ್ಚುಮೆಚ್ಚಿನವನಾದ. ಇದನ್ನು ಕಂಡು ಹೊಟ್ಟೆಕಿಚ್ಚು ಹೆಚ್ಚಿದವರಲ್ಲಿರಮೇಶ, ಸುರೇಶನ ಪಾಲು ಹೆಚ್ಚಿತ್ತು. ನಂದುವಿನ ಏಳಿಗೆ ಸಹಿಸಲಾಗದೇ ಈ ಸಲದ ಪರೀಕ್ಷೆಯಲ್ಲಿಆತ ಫೇಲಾಗುವಂತೆ ಮಾಡಲು ಪುಸ್ತಕಗಳನ್ನು ಕದ್ದು ಮುಚ್ಚಿಡತೊಡಗಿದರು. ವಿಷಯ ತಿಳಿದರೂ ನಂದು ಸುಮ್ಮನಿದ್ದ. ಮನನ ಮಾಡಿದ್ದನ್ನು ಮತ್ತೆ ನೋಟು ಪುಸ್ತಕಗಳಲ್ಲಿಬರೆದಿಡತೊಡಗಿದ. ಮತ್ತೆ ಪುಸ್ತಕಗಳನ್ನು ಕದಿಯುವುದು ಇವ ಮತ್ತೆ ಬರೆದಿಡುವುದು ಅನೇಕ ಬಾರಿ ನಡೆಯಿತು.

ಗೆಳೆಯರೆನ್ನಿಸಿಕೊಂಡ ಹೊಟ್ಟೆಕಿಚ್ಚಿನ ರಮೇಶ, ಸುರೇಶ ಇವನ ಪುಸ್ತಕಗಳನ್ನು ಕದಿಯುವುದರಲ್ಲೆಮಗ್ನರಾಗಿದ್ದರು. ನಂದುವೋ ಬರೆದೂ ಬರೆದು ಮತ್ತಷ್ಟು ಬುದ್ಧಿವಂತನಾದ.

ಪರೀಕ್ಷೆಯ ಸಮಯ ಬಂದೇ ಬಿಟ್ಟಿತು, ಗೆಳೆಯರು ಪುಸ್ತಕ ಬಚ್ಚಿಟ್ಟದ್ದೂ ಅಲ್ಲದೆ ‘ನಿನ್ನ ಪುಸ್ತಕಗಳು ಕಳೆದುಹೋಗಿವೆ, ಹೇಗೆ ಪರೀಕ್ಷೆ ಬರೆಯುತ್ತಿ, ಅನುತ್ತೀರ್ಣನಾಗುತ್ತೀಯಷ್ಟೇʼಎಂದು ಹೆದರಿಸುತ್ತಾ ನಂದುವಿನ ಆತ್ಮವಿಶ್ವಾಸ ಕುಗ್ಗಿಸಲು ಯತ್ನಿಸಿದರು. ಆದರೆ ಓದಿಕೊಂಡದ್ದನ್ನು ಅನೇಕ ಬಾರಿ ಮತ್ತೆಮತ್ತೆ ಬರೆದ ಕಾರಣ ನಂದುವಿಗೆ ಪಠ್ಯಪುಸ್ತಕವೇ ಕಂಠಪಾಠ ಮಾಡಿದಂತಾಗಿತ್ತು. ನೋಟು ಪುಸ್ತಕಗಳು ಕಳೆದದ್ದರಿಂದ ನಷ್ಟದ ಬದಲು ಲಾಭವೇ ಆಯಿತು. ಏಳನೆತ್ತೆ ಪರೀಕ್ಷೆಯಲ್ಲಿಉತ್ತಮವಾಗಿ ಬರೆದು ಶಾಲೆಗಷ್ಟೇ ಅಲ್ಲದೆ ರಾಜ್ಯಕ್ಕೇ ಮೊದಲಿಗನಾಗಿದ್ದ. ನೋಟ್ಸ್ ಕದ್ದ ಹೊಟ್ಟೆಕಿಚ್ಚಿನ ಗೆಳೆಯರಿಬ್ಬರೂ ಪರೀಕ್ಷೆಯಲ್ಲಿಅನುತ್ತೀರ್ಣರಾಗಿದ್ದರು. ಇದೀಗ ಅವರಿಗೆ ತಮ್ಮ ತಪ್ಪಿನ ಅರಿವಾಗಿತ್ತು. ನಂದುವಿನಲ್ಲಿಕ್ಷಮೆ ಕೇಳಿದರೂ ಕಾಲ ಮಿಂಚಿತ್ತು. ಗೆಳೆಯನ ಏಳಿಗೆ ಸಹಿಸದೆ ಅಸೂಯೆಯಿಂದ ಪುಸ್ತಕಗಳನ್ನು ಬಚ್ಚಿಟ್ಟ ತಪ್ಪಿಗೆ ಇದ್ದ ತರಗತಿಯಲ್ಲೇ ಮತ್ತೊಮ್ಮೆ ಕೂರುವಂತಾದದ್ದಕ್ಕೆ ರಮೇಶ, ಸುರೇಶ ಪಶ್ಚಾತ್ತಾಪಪಟ್ಟರು. ನಂದು ಮುಂದಿನ ತರಗತಿಗೆ ಹೋದರೂ ಇವರಿಬ್ಬರನ್ನೂ ಮರೆಯದೇ ಪ್ರೀತಿಯಿಂದ ಮಾತಾಡಿಸುತ್ತಿದ್ದ. ಹಾಗೆಯೇ ಓದುವುದರಲ್ಲಿಸಹಾಯವನ್ನೂ ಮಾಡುತ್ತಾ ಎಲ್ಲರ ಪ್ರೀತಿಪಾತ್ರನಾಗಿ ಪ್ರತಿಭಾವಂತನಾಗಿ ಬೆಳೆದು ಹೆತ್ತವರಿಗೆ ಹಾಗೂ ಶಾಲೆಗೆ ಕೀರ್ತಿತಂದ.

**********