ಕೃಷ್ಣನ ದೃಷ್ಟಿ ಬೇರೆಯೇ ಇತ್ತು
--
-ಗ.ನಾ.ಭಟ್ಟ
----
ಕೃಷ್ಣನ ದೃಷ್ಟಿಯಲ್ಲಿಅರ್ಜುನನ ವಾದ ವಿಚಾರಸಿದ್ಧವಾಗಿ ಬಂದುದಾಗಿರಲಿಲ್ಲ. ಅದು ಪ್ರಕೃತಿಪ್ರೇರಿತವಾಗಿ, ಅನ್ಯಾನುಕರಣವಾಗಿ ಬಂದುದಾಗಿತ್ತು. ನಾವೆಲ್ಲರೂ ಸಾಮಾನ್ಯವಾಗಿ ಹಾಗೆಯೇ. ಸ್ವಾಭಾವಿಕವಾಗಿ ನಮ್ಮಲ್ಲಿಕೆಲವು ಸ್ನೇಹಪ್ರವೃತ್ತಿಗಳು ಅಡಗಿಕೊಂಡಿರುತ್ತವೆ. ಅದನ್ನೇ ನಾವು ‘ಕರುಳು ಸೆಳೆಯುವುದು’, ‘ಕರುಳ ಸಂಬಂಧ’ ಎನ್ನುತ್ತೆವೆ. ಅದು ಸಹಜವಾದದ್ದೇ. ಅದರಲ್ಲಿಕೃತ್ರಿಮವಾದುದೇನೂ ಇಲ್ಲ. ಆದರೂ ಅದನ್ನು ಹಾಗೆಯೇ ಸ್ವೀಕರಿಸುವಂತಿಲ್ಲ. ಆ ಸ್ನೇಹಪ್ರವೃತ್ತಿಯ ಒಳಗಡೆ ಎಲ್ಲೋ ಒಂದಿಷ್ಟು ಮಮತೆಯ ಕಣವೋ, ಸ್ವಾರ್ಥದ ಕಣವೋ, ಸ್ವಾಭಿಮಾನದ ಕಣವೋ ಅಂಟಿಕೊಂಡು ನಮ್ಮ ಕಣ್ಣಿಗೆ ಕಾಣದಂತೆ ಇರಬಹುದು. ಅಂಥದ್ದನ್ನು ಪರೀಕ್ಷಿಸಿ, ಶೋಧಿಸಿದ ಮೇಲೆಯೇ ಸ್ನೇಹವು ನಿರ್ಮಲವೂ ಹಿತವೂ ಆಗಿ ಪರಿಣಮಿಸುತ್ತದೆ.
ನಾವು ಎಷ್ಟೋ ಗುಣಗಳನ್ನು (ಕೆಲವು ಅವಗುಣಗಳನ್ನೂ ಕೂಡಾ) ನಮ್ಮ ಸುತ್ತಮುತ್ತಲಿನವರಿಂದ ಕಲಿಯುತ್ತಿರುತ್ತೇವೆ. ನಮ್ಮ ಅಭಿಪ್ರಾಯಗಳನ್ನು ಇತರರಿಂದ ಗ್ರಹಿಸಿಕೊಂಡಿರುತ್ತೇವೆ. ಯಾವುದೇ ಒಂದು ನಡೆವಳಿಕೆ, ಅಭ್ಯಾಸ, ಅಭಿಪ್ರಾಯ, ನಂಬಿಕೆ-ಅವು ಬಹುಜನರೂಢಿಯೆಂಬ ಕಾರಣದಿಂದಲೇ ಅದು ಶುದ್ಧವೆಂದೂ, ಹಿತವೆಂದೂ, ಸ್ವೀಕಾರ್ಯವೆಂದೂ ಆಗುವುದಿಲ್ಲ. ಅವನ್ನು ನಾವು ಸ್ವತಂತ್ರವಾಗಿ ವಿಮರ್ಶೆ ಮಾಡಿ ಅವುಗಳಲ್ಲಿರುವ ಒಳ್ಳೆಯ ಅಂಶವನ್ನು ಕಂಡುಕೊಳ್ಳಬೇಕು. ಹಾಗೆ ನಮ್ಮ ಅಭಿಪ್ರಾಯಗಳೂ, ಪ್ರವೃತ್ತಿಗಳೂ ವಿಚಾರಶುದ್ಧವಾಗಿ ಸ್ವೀಕರಿಸಲ್ಪಡಬೇಕು. ಇದು ಕೃಷ್ಣನ ದೃಷ್ಟಿ.
ಜಾನ್ ಸ್ಟೂವರ್ಟ್ ಮಿಲ್ ಎಂಬ ತತ್ತ್ವಜ್ಞಾನಿ ಒಂದು ಕಡೆ -‘ಮನÜುಷ್ಯನು ಒಂದು ಅಭಿಪ್ರಾಯವನ್ನೋ, ಕಾರ್ಯಕ್ರಮವನ್ನೋ ಅದು ಒಳ್ಳೆಯದು ಎಂದು ಇತರರ ಹೇಳಿಕೆಯಿಂದ ನಂಬಿ ಅನುಸರಿಸಿದರೆ ಸಾಲದು. ಅದು ಹೇಗೆ ಒಳ್ಳೆಯದು, ಯಾವ ಯಾವ ಕಾರಣಗಳಿಂದ ಒಳ್ಳೆಯದು ಎಂಬುದನ್ನು ತಾನೇ ವಿಚಾರ ವಿಮರ್ಶೆಯಿಂದ ತಿಳಿದುಕೊಂಡಿರಬೇಕು. ಅಗ ಅದು ಪೂರ್ಣ ಫಲಕಾರಿಯಾಗುತ್ತದೆ. ಮೂಢವಿಶ್ವಾಸದಿಂದ ಬಂದ ಒಳ್ಳೆಯದೆಂಬ ಭಾವನೆ ಅಷ್ಟು ಫಲಕಾರಿಯಾಗದು’ ಎಂದು ಹೇಳುತ್ತಾನೆ.
ಇಂದು ನಾವು ಬಹುಮಂದಿಯಲ್ಲಿಕಾಣುತ್ತಿರುವುದು ಪ್ರಕೃತಿಪ್ರೇರಿತ ಕಾರ್ಯ ಮತ್ತು ಅನ್ಯಾನುಕರಣೆ ಮಾತ್ರ. ಎಲ್ಲೋ ನೂರಕ್ಕೆ ಐದಾರು ಮಂದಿ ಮಾತ್ರ ಸ್ವವಿಮರ್ಶೆ ಮಾಡಿ ಅವನ್ನು ಅನುಷ್ಠಾನಕ್ಕೆ ತರುತ್ತಾರೆ. ಇಂಥ ಮೂಢಾಚಾರದ ಸಂದರ್ಭದಲ್ಲಿಜಾನ್ ಸ್ಟೂವರ್ಟ್ ಮಾತು ಹೊಸ ಮಿಂಚನ್ನು ಹರಿಸುತ್ತದೆ.
ಅರ್ಜುನನಲ್ಲಿಅಂತಹ ವಿಚಾರ-ವಿಮರ್ಶೆ ಇರಲಿಲ್ಲ. ಅವನ ಪಾಪಭೀರುತೆ, ಜೀವಕಾರುಣ್ಯ, ಸ್ವಾರ್ಥ ವರ್ಜನೆ, ಧರ್ಮ ಶ್ರದ್ಧೆ-ಇವೆಲ್ಲಇತರರ ಮಾತನ್ನು ಕೇಳಿ ಬಂದುದಾಗಿತ್ತು. ಅವನ ಕರುಣೆ ಪ್ರಾಕೃತವಾಸನೆಯಿಂದ ಕೂಡಿತ್ತು; ಸಂಸ್ಕೃತವಾಗಿರಲಿಲ್ಲ. ಅದು ಹೃದಯದ್ದಾಗಿತ್ತೇ ಹೊರತು ಬುದ್ಧಿಯದಾಗಿರಲಿಲ್ಲ. ಒಂದು ಕ್ಷಣದ ಕಷ್ಟ ದರ್ಶನದಿಂದ ಬಂದಿತ್ತೇ ಹೊರತು ನಿತ್ಯಾನಿತ್ಯವಿವೇಚನೆಯಿಂದ ಬಂದದ್ದಾಗಿರಲಿಲ್ಲ.
ಯಾವನೋ ಒಬ್ಬನ ಮನೆಯಲ್ಲಿಯಜಮಾನನಿಗೆ ಯಾವುದೋ ಅಕ್ರಮವೋ, ಅವಿಧೇಯತೆಯೋ, ಅವನಿಗೆ ಇಷ್ಟವಾಗದ್ದೋ ನಡೆದಾಗ ಆತ ‘ತಲೆಯ ಮೇಲೆ ಆಕಾಶವೇ ಬಿದ್ದಂತೆ ರಂಪ ಮಾಡುತ್ತಾನೆ; ಮನೆಬಿಟ್ಟು ಹೋಗುತ್ತೇನೆ’ ಎಂದು ರೇಗಾಡುತ್ತಾನೆ. ಆದರೆ ಆತ ಹಾಗೆ ಮಾಡದೆ ಮರುಕ್ಷಣ ತಣ್ಣಗಾಗುತ್ತಾನೆ; ಕೆಟ್ಟು ಹೋಗಿದ್ದನ್ನೆಲ್ಲಾಸರಿಪಡಿಸಲು ಉಧ್ಯುಕ್ತನಾಗುತ್ತಾನೆ. ಅರ್ಜುನನಿಗೆ ಬಂದ ವೈರಾಗ್ಯ ಅಂಥದ್ದಾಗಿತ್ತು. ಅದು ವಿವೇಕದಿಂದ ಸ್ಥಿರಪಟ್ಟಿರಲಿಲ್ಲವಾಗಿತ್ತು; ಅದು ಆತುರದ ನಿರ್ಣಯವಾಗಿತ್ತು; ಅವನ ಧರ್ಮಶ್ರದ್ಧೆಯೂ ಅಂತಹದ್ದೇ ಲೋಕರೂಢಿಯದಾಗಿತ್ತು. ಇದನ್ನು ಕೃಷ್ಣ ಚೆನ್ನಾಗಿ ಗುರುತಿಸಿದ ಮತ್ತು-
ಅಶೋಚ್ಯಾನನ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ |
ಗತಾಸೂನಗತಾಸೂಂಶ್ಚ ನಾನುಶೊಚಂತಿ ಪಂಡಿತಾಃ || ಗೀತೆ: 2-11
‘ನೀನು ಅಳಬಾರದವರಿಗಾಗಿ ಅಳುತ್ತಿರುವೆ. ಜೊತೆಗೆ ಬುದ್ಧಿವಂತಿಕೆಯ ಸೋಗಿನ ಆದರೆ ಬುದ್ಧಿವಂತರಾಡದ ಮಾತುಗಳನ್ನು ಆಡುತ್ತಿರುವೆ. ಪಂಡಿತರು ಸತ್ತವರ ಬಗ್ಗೆ ಮತ್ತು ಬದುಕಿದ್ದವರ ಬಗ್ಗೆ ಅಳುವುದಿಲ್ಲ’ ಎಂದು ಹೇಳಿದ.
(ಮುಂದುವರಿಯುವುದು)

