ಕರ್ತವ್ಯ ಮರೆಯದಿರೋಣ
----
ಮಂಜುನಾಥ ಹಾಲುವಾಗಿಲು
---
ನಾವು ಯಾವುದೇ ಸ್ಥಳದಲ್ಲಿರಲಿ, ಯಾವುದೇ ಪರಿಸ್ಥಿತಿಯಲ್ಲಿರಲಿ ನಮ್ಮ ಕರ್ಮವನ್ನು ಬಿಡಬಾರದು ಎನ್ನುವ ವಿಚಾರದಲ್ಲಿತ್ರೇತಾಯುಗದ ರಾವಣ ಒಬ್ಬ ಮಾದರಿಯಾಗಿ ಕಾಣಿಸಿಕೊಳ್ಳುತ್ತಾನೆ.
ತನ್ನ ತಾಯಿ ಕೈಕಸಿಯು ಪೂಜಿಸಲು ಇಚ್ಚಿಸಿದ್ದಾಳೆ ಎನ್ನುವ ಏಕೈಕ ಕಾರಣಕ್ಕೆ ಶಿವನ ಆತ್ಮಲಿಂಗವನ್ನೇ ತರುತ್ತೇನೆ ಎಂದು ನಿರ್ಧರಿಸಿ, ರಾವಣನು ಕೈಲಾಸ ಪರ್ವತದ ಬಳಿ ಘೋರ ತಪಸ್ಸಿಗೆ ಕುಳಿತುಕೊಳ್ಳುತ್ತಾನೆ. ಶಿವನನ್ನು ಮೆಚ್ಚಿಸುವ ತನ್ನ ಪ್ರಯತ್ನದಲ್ಲಿಮೊದಲ ಬಾರಿ ವಿಫಲನಾದರೂ ಎರಡನೇ ಬಾರಿಗೆ ಸಫಲನಾಗಿ ಪರಮೇಶ್ವರ ನಿಂದ ಆತ್ಮಲಿಂಗವನ್ನು ವರವಾಗಿ ಪಡೆದು, ಭೂಲೋಕಕ್ಕೆ ಹಿಂದಿರುಗುತ್ತಾನೆ. ಆ ಸಮಯದಲ್ಲಿಸಂಧ್ಯಾ ಸಮಯವಾಗಿದ್ದರಿಂದ ಸೂರ್ಯನಿಗೆ ಅಘ್ರ್ಯ ಕೊಡುವುದಕ್ಕಾಗಿ ಬಾಲಕನ ವೇಷದಲ್ಲಿದ್ದ ಗಣ ಪತಿಯ ಕೈಗಿತ್ತು, ‘ಯಾವುದೇ ಕಾರಣಕ್ಕೂ ಆತ್ಮಲಿಂಗವನ್ನು ಭೂಮಿಗೆ ಸ್ಪರ್ಶ ಮಾಡಬಾರದು’ ಎಂದು ಹೇಳಿ ನೀಡುತ್ತಾನೆ. ಆದರೆ ಆತ್ಮಲಿಂಗವನ್ನು ಭೂಸ್ಪರ್ಶ ಮಾಡಿಸಲೆಂದೇ ಬಾಲಕನ ವೇಷದಲ್ಲಿಭೂಮಿಗೆ ಬಂದಿದ್ದ ಗಣೇಶನು ಆತ್ಮಲಿಂಗವನ್ನು ಭೂಸ್ಪರ್ಶ ಮಾಡಿಸಿ ಗೋಕರ್ಣ ಕ್ಷೇತ್ರವನ್ನು ಭೂಕೈಲಾಸವಾಗಿಸುವಲ್ಲಿಪ್ರಮುಖ ಪಾತ್ರವಹಿಸುತ್ತಾನೆ.
ಈ ಕಥಾ ಭಾಗದಲ್ಲಿನಾವು ಗಮನಿಸಬಹುದಾದ ಬಹು ಮುಖ್ಯ ವಿಚಾರ ಎಂದರೆ, ರಾವಣನು ಸಾಕ್ಷಾತ್ ಪರಮೇಶ್ವರ ನನ್ನೇ ಮೆಚ್ಚಿಸಿ, ಪರಮೇಶ್ವರನ ಸ್ವಯಂ ಆತ್ಮಲಿಂಗವನ್ನೇ ವರವಾಗಿ ಪಡೆದಿದ್ದ. ಅಂದರೆ ತನಗೆ ಅಸಾಧ್ಯವಾದದ್ದು ಯಾವುದೂ ಇಲ್ಲಎಂದು ಜಗತ್ತಿಗೆ ನಿರೂಪಿಸಿದ್ದ. ಪರಮೇಶ್ವರನ ಆತ್ಮಲಿಂಗ ಎನ್ನುವುದನ್ನು ಪಡೆದ ಮೇಲೆ ಸೃಷ್ಟಿಯ ಸರ್ವಸ್ವವೂ ತನಗೆ ಲಭಿಸಿದಂತಾಗಿದೆ ಎನ್ನುವುದೂ ಅವನಿಗೆ ತಿಳಿದಿತ್ತು. ಆದರೂ ಅವನು ತನ್ನ ನಿತ್ಯಾನುಷ್ಠಾನ ಕರ್ಮ ಎನಿಸುವ ಸಂಧ್ಯೋಪಾಸನೆ ಯನ್ನು ಬಿಡಲಿಲ್ಲ. ಸ್ವಯಂ ಆತ್ಮಲಿಂಗವೇ ಇರುವಾಗ ನಿತ್ಯೋಪಾಸನೆಯ ಔಚಿತ್ಯವೇಕೆ? ಎಂದು ಸುಮ್ಮನಾಗಲಿಲ್ಲ. ಬದಲಾಗಿ ತನ್ನ ನಿತ್ಯ ಕರ್ಮ ಸಂಧ್ಯೋಪಾಸನೆಗೆ ಮುಂದಾದ.
ನಾವು ಯಾವುದೋ ಒಂದು ಸಣ್ಣ ಯಶಸ್ಸು ದೊರೆತ ನಂತರ ಮೇಧಾವಿಗಳೆಂಬಂತೆ ವರ್ತಿಸುತ್ತಾ, ಇನ್ನೂ ಕಲಿಯುವುದನ್ನು, ಮುಂದೆ ನಿರ್ವಹಿಸ ಬೇಕಿರುವ ಕರ್ತವ್ಯವನ್ನು ಮರೆಯುತ್ತೇವೆ. ಹಲವು ಬಾರಿ ಕರ್ಮದ ಪಾಲನೆ ತಕ್ಷಣಕ್ಕೆ ನಮಗೆ ಅನುಕೂಲಕರವಾದ ಫಲಿತಾಂಶವನ್ನು ನೀಡದೇ ಇರಬಹುದು. ಆದರೆ ಕಾಲಾನುಕ್ರಮದಲ್ಲಿಉತ್ತಮ ಫಲಿತಾಂಶವನ್ನು ನೀಡಿಯೇ ತೀರುತ್ತದೆ ಎನ್ನುವುದನ್ನು ಮರೆಯಬಾರದು. ಆದುದರಿಂದ ನಮ್ಮ ಬದುಕಿನಲ್ಲಿಏನೇ ಯಶಸ್ಸು ದೊರೆ ತರೂ ಆ ಯಶಸ್ಸಿಗೆ ಆನಂದಿಸೋಣ. ಆದರೆ ಯಶಸ್ಸಿನ ಗುಂಗಿನಲ್ಲಿನಮ್ಮ ಮುಂದಿರುವ ಕರ್ತವ್ಯ, ಜವಾಬ್ದಾರಿಗಳನ್ನು ಮರೆಯದಿರೋಣ.

