ಪ್ರತಿ ಗ್ರಾಪಂಗಳ ಮಳೆ ಮಾಪನ ದುರಸ್ತಿಗೆ ಬೊಟ್ಯಾಡಿ ಆಗ್ರಹ

Contributed bysudhakara.kannadamoole@timesofindia.com|Vijaya Karnataka

ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಬೊಟ್ಯಾಡಿ ಅವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಹವಾಮಾನ ಆಧರಿತ ಬೆಳೆ ವಿಮೆ ಯೋಜನೆಯಡಿ ರೈತರಿಗೆ ಪರಿಹಾರ ನೀಡಲು ಮಳೆಮಾಪನಗಳ ದುರಸ್ತಿ ಅಗತ್ಯವಿದೆ. ಮುಂಗಾರು ಆರಂಭಕ್ಕೂ ಮುನ್ನ ಮಳೆಮಾಪನಗಳನ್ನು ಪರಿಶೀಲಿಸಿ ದುರಸ್ತಿಗೊಳಿಸಲು ಸೂಚನೆ ನೀಡಲಾಗಿದೆ. ಉಡುಪಿ ಜಿಲ್ಲಾಧಿಕಾರಿಗಳು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

bottadis outrage on rain measurement accuracy

ವಿಕ ಸುದ್ದಿಲೋಕ ಪುತ್ತೂರು

ಕೇಂದ್ರ ಸರ್ಕಾರದ ಹವಾಮಾನ ಆಧರಿತ ಬೆಳೆ ವಿಮೆ ಯೋಜನೆಯಡಿ ಹವಾಮಾನ ವೈಪರೀತ್ಯದಿಂದ ಬೆಳೆ ಕಳೆದುಕೊಂಡ ರೈತರಿಗೆ ಸಮರ್ಪಕ ಪರಿಹಾರ ಒದಗಿಸುವ ನಿಟ್ಟಿನಲ್ಲಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿಕೆಟ್ಟುಹೋಗಿರುವ ಮಳೆಮಾಪನಗಳನ್ನು ಮುಂಗಾರಿಗೂ ಮುನ್ನ ತುರ್ತಾಗಿ ಪರಿಶೀಲಿಸಿ ದುರಸ್ತಿಪಡಿಸುವಂತೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ಅವರು ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಬೆಳೆ ವಿಮೆ ಯೋಜನೆಯಡಿ ಪರಿಹಾರ ಒದಗಿಸಲು ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿಅಳವಡಿಸಲಾದ ಮಳೆಮಾಪನಗಳಲ್ಲಿದಾಖಲಾಗುವ ಮಳೆಯ ಪ್ರಮಾಣವೇ ಪ್ರಮುಖ ಆಧಾರವಾಗಿದೆ. ಆದರೆ ಕಳೆದ ಸಲ ಭಾರಿ ಮಳೆಯಿಂದಾಗಿ ಅನೇಕ ಗ್ರಾಮಗಳಲ್ಲಿಬೆಳೆಗಳು ಸಂಪೂರ್ಣ ಹಾನಿಗೀಡಾಗಿದ್ದರೂ, ರೈತರಿಗೆ ಅತ್ಯಂತ ಕಡಿಮೆ ವಿಮಾ ಪರಿಹಾರ ಬಂದಿದೆ. ಇದಕ್ಕೆ ಆಯಾ ಗ್ರಾಮಗಳಲ್ಲಿಅಳವಡಿಸಲಾದ ಮಳೆಮಾಪನಗಳು ಸಮರ್ಪಕ ನಿರ್ವಹಣೆಯಿಲ್ಲದೆ ಕೆಟ್ಟು ಹೋಗಿರುವುದು ಮತ್ತು ನಿಖರ ಮಳೆಯ ಪ್ರಮಾಣ ದಾಖಲಿಸುವಲ್ಲಿವಿಫಲವಾಗಿರುವುದೇ ನೇರ ಕಾರಣವಾಗಿದೆ.

ಮಾಪನಗಳ ಈ ದೋಷÜದಿಂದಾಗಿ ರೈತರಿಗೆ ಬಹುದೊಡ್ಡ ಮಟ್ಟದ ಆರ್ಥಿಕ ಅನ್ಯಾಯವಾಗಿದೆ. ಮುಂಗಾರು ಮಳೆ ಆರಂಭವಾಗುವ ಮೊದಲೇ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಳೆಮಾಪನ ಕೇಂದ್ರಗಳನ್ನು ತಕ್ಷಣವೇ ಪರಿಶೀಲಿಸಬೇಕು ಹಾಗೂ ಕೆಟ್ಟುಹೋಗಿರುವ ಮಾಪನಗಳನ್ನು ಕೂಡಲೇ ದುರಸ್ತಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಜತೆಗೆ, ಈ ಮಳೆಮಾಪನ ಕೇಂದ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳಲು, ಪ್ರತಿ ಮಾಪನದಲ್ಲಿದಾಖಲಾದ ಮಳೆಯ ವಿವರವನ್ನು ಆಯಾ ಗ್ರಾಮ ಪಂಚಾಯಿತಿಗೆ ಕಡ್ಡಾಯವಾಗಿ ಪ್ರತಿ ವಾರ ವರದಿಯ ರೂಪದಲ್ಲಿನೀಡುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅವರು ಕೋರಿದ್ದಾರೆ.

ಸ್ಪಂದಿಸಿದ ಉಡುಪಿ ಜಿಲ್ಲಾಧಿಕಾರಿ:

ಶಾಸಕ ಕಿಶೋರ್ ಬೊಟ್ಯಾಡಿ ಪತ್ರ ಬರೆದ ಕೇವಲ 2 ದಿನಗಳಲ್ಲಿಯೇ ಉಡುಪಿ ಜಿಲ್ಲಾಧಿಕಾರಿಯವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿಅಳವಡಿಸಲಾದ ಸ್ವಯಂಚಾಲಿತ ಮಳೆಮಾಪನಗಳ ಸಮರ್ಪಕ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ಮತ್ತು ನಿಗಾವಹಿಸುವ ಜವಾಬ್ದಾರಿಯನ್ನು ಗ್ರಾಮೀಣ ಮಟ್ಟದಲ್ಲಿಗ್ರಾಮ ಆಡಳಿತ ಅಧಿಕಾರಿಗೆ ವಹಿಸಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿದುರಸ್ತಿಯಲ್ಲಿರುವ ಅಥವಾ ಕಾರ್ಯನಿರ್ವಹಿಸದ ಮಳೆಮಾಪನಗಳ ಸ್ಥಿತಿಗತಿಯ ಬಗ್ಗೆ ಈಗಾಗಲೇ ಕೆಎಸ್ ಎನ್ ಡಿಎಂಸಿ ನಿರ್ದೇಶಕರ ಗಮನಕ್ಕೆ ತರಲಾಗಿದ್ದು, ಅವುಗಳ ದುರಸ್ತಿಗೆ ಸರ್ಕಾರದಿಂದ ಅಗತ್ಯ ಕ್ರಮ ವಹಿಸಲಾಗಿದೆ. ಜಿಲ್ಲೆಯಲ್ಲಿ38 ಮಳೆಮಾಪನಗಳನ್ನು ಹೊಸದಾಗಿ ಅಳವಡಿಸಲು ಟೆಂಡರ್ ಕರೆಯಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿಗಳು ಶಾಸಕರಿಗೆ ಉತ್ತರ ಬರೆದಿರುವುದಾಗಿ ಶಾಸಕರ ಪ್ರಕಟಣೆ ತಿಳಿಸಿದೆ.