ಪುಸ್ತಕ ಟಿಪ್ಪಣಿ

Contributed byDHEERAJ K|Vijaya Karnataka

ಹೊಸ ಪುಸ್ತಕಗಳ ಪರಿಚಯ ಇಲ್ಲಿದೆ. ರಾಜಶೇಖರ ಕುಕ್ಕುಂದಾ ಅವರ ಮಕ್ಕಳ ಪದ್ಯಗಳು, ಎಂ.ಡಿ. ಚಿತ್ತರಗಿ ಅವರ ಕಥೆಗಳು, ರವಿ ಅಂಬೋಜಿ ಅವರ ಕಾದಂಬರಿ ಮತ್ತು ಡಾ. ನಟರಾಜ್‌ ತಲಘಟ್ಟಪುರ ಅವರ ನಾಟಕದ ಬಗ್ಗೆ ತಿಳಿಯಿರಿ. ಈ ಕೃತಿಗಳು ಮನರಂಜನೆ, ಸಾಮಾಜಿಕ ಚಿಂತನೆ ಮತ್ತು ಹೋರಾಟದ ಕಥೆಗಳನ್ನು ಒಳಗೊಂಡಿವೆ. ಓದುಗರಿಗೆ ಹೊಸ ಅನುಭವ ನೀಡುವ ಈ ಪುಸ್ತಕಗಳು ಲಭ್ಯವಿದೆ.

4 kannada books you would love to read

ಮಕ್ಕಳ ಸೆಳೆವ ಪದ್ಯಗಳು

ರಾಜಶೇಖರ ಕುಕ್ಕುಂದಾ ಅವರ ಮಕ್ಕಳ ಪದ್ಯ ಸಂಕಲನ ‘ಸೋನ ಪಾಪಡಿ’ಯಲ್ಲಿ25 ಪದ್ಯಗಳಿವೆ. ಈ ಪದ್ಯಗಳಲ್ಲಿಕವಿ ಮಕ್ಕಳ ಮನಸಿನಲ್ಲಿಹುಟ್ಟುವ ಚಿತ್ರ-ವಿಚಿತ್ರ ಕಲ್ಪನೆ , ವಿನೋದ ವಿಚಾರಗಳನ್ನು ಅಷ್ಟೇ ರಂಜಕವಾಗಿ ಚಿತ್ರಿಸಿದ್ದಾರೆ. ಉಪ್ಪಿಟ್ಟಿನ ಕುರಿತು ಮಕ್ಕಳಿಗೆಲ್ಲಇರುವ ಬೇಸರ, ಸ್ಕೂಲೇ ಇರಬಾರದೆಂಬ ಒಳ ಆಸೆ, ಸೈಕಲ್ ಪ್ರೀತಿ... ಸೇರಿದಂತೆ ಮಕ್ಕಳ ಕುತೂಹಲ ಹಬ್ಬುವ ಹಲವು ದಿಕ್ಕುಗಳು ಇಲ್ಲಿಕಾವ್ಯದ ರೂಪ ಪಡೆದಿವೆ. ಒಟ್ಟಿನಲ್ಲಿಮಕ್ಕಳನ್ನು ಸೆಳೆಯುವ ಸೋನ ಪಾಪಡಿ ಇದು.

ಸೋನ ಪಾಪಡಿ- ಮಕ್ಕಳ ಪದ್ಯಗಳು

ಲೇ: ರಾಜಶೇಖರ ಕುಕ್ಕುದಾ

ಪ್ರ: ಕನ್ನಡ ನಾಡು ಪ್ರಕಾಶನ, ಕಲಬುರಗಿ

ಪುಟ: 52 ಬೆಲೆ: 75 ರೂ.

= = =

ಸಮಕಾಲೀನ ಜಗತ್ತಿನ ದರ್ಶನ

ಎಂ.ಡಿ. ಚಿತ್ತರಗಿಯವರ ‘ಚಟ್ಟದ ಬಿಕ್ಕು’ ಕಥಾ ಸಂಕಲನ ಸಮಕಾಲೀನ ಜಗತ್ತನ್ನು ವಸ್ತುನಿಷ್ಠವಾಗಿ, ತೆರೆದ ಕಣ್ಣು ಮತ್ತು ಮನಸ್ಸುಗಳಿಂದ ನೋಡುವ ಪ್ರಯತ್ನವಾಗಿದೆ. ನಮ್ಮ ಮನಸ್ಸನ್ನು ಕಲಕುವ ಸಂಗತಿಗಳನ್ನು ಸಮುದಾಯದಿಂದ ಲೇಖಕರು ಆಯ್ದುಕೊಂಡಿದ್ದಾರೆ. ಬಹುಸಂಖ್ಯಾತರನ್ನು ನೇರವಾಗಿ ಕಾಡುವ, ಆವರಿಸುವ ವಸ್ತುಗಳನ್ನೇ ಜಾಣ್ಮೆಯಿಂದ ಆಯ್ದಿದ್ದಾರೆ. ವ್ಯಕ್ತಿಯ ಬದುಕನ್ನು ದಾಟಿ, ಸುತ್ತಲಿನವರನ್ನೂ ಸೆಳೆಯುವ ಸಂಗತಿಗಳನ್ನೊಳಗೊಂಡ ಒಟ್ಟು ಒಂಬತ್ತು ಕಥೆಗಳು ಇಲ್ಲಿವೆ.

ಚಟ್ಟದ ಬಿಕ್ಕು- ಕಥಾ ಸಂಕಲನ

ಲೇ: ಎಂ.ಡಿ. ಚಿತ್ತರಗಿ

ಪ್ರ: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್ , ಬೆಂಗಳೂರು

ಪುಟ: 124 ಬೆಲೆ: 160 ರೂ.

= = =

ಹೋರಾಟದ ಜೀವಂತ ಕಥೆ

ಗುಲಾಬಿ ಸೇನೆ ಕಾದಂಬರಿ ಒಂದು ನಿರ್ದಿಷ್ಟ ಗುಂಪಿನ ಹೋರಾಟವಲ್ಲ. ಇದೊಂದು ಹೆಣ್ಣು ಮಗಳ ಜೀವನದೊಂದಿಗಿನ ಹೋರಾಟದ ಜೀವಂತ ಕಥೆ. ಓದುವಾಗ ಗಲ್ಲವರಳಿಸಿ ನಗಿಸುವ, ಹಿಂದಿನದೇನೋ ನೆನಪಿಸುವ, ಮನಸ್ಸು ಭಾರವಾಗಿಸುವ ಕಣ್ಣು ತೇವಗೊಳಿಸುವ, ದಬ್ಬಾಳಿಕೆಗೆ ರಕ್ತ ಕುದಿಯುವಂಣತೆ ಮಾಡುವ ಕಾದಂಬರಿ ಇದು. ಸಮಾಜದಲ್ಲಿಶ್ರಮಿಕ ವರ್ಗವನ್ನು ಆಳುತ್ತಿರುವ ಬಂಡವಾಳಶಾಹಿಗಳ ಮನೋಗುಣ ಇಲ್ಲಿವಿಭಿನ್ನವಾಗಿ ಹರವಿಕೊಂಡಿವೆ. ನೈಜ ಘಟನೆಯನ್ನಾಧರಿಸಿರುವುದರಿಂದ ಕಾದಂಬರಿಯ ತೂಕ ಹೆಚ್ಚಿದೆ.

ಗುಲಾಬಿ ಸೇನೆ-ಕಾದಂಬರಿ

ಲೇ: ರವಿ ಅಂಬೋಜಿ

ಪ್ರ: ಸಪ್ತಮಿ ಪ್ರಕಾಶನ, ಹುಬ್ಬಳ್ಳಿ

ಪು: 136 ಬೆಲೆ: 150 ರೂ.

= = =

ಆದರ್ಶವನ್ನು ಬಿತ್ತುವ ನಾಟಕ

ಒಂದು ಸಿದ್ಧ ಮಾದರಿಯ ಚೌಕಟ್ಟಿನೊಳಗೆ ರೂಪುಗೊಂಡಿರುವ ‘ಬೊಗಸೆ ತುಂಬ ಮಣ್ಣು ನಾಟಕ ಹನ್ನೊಂದು ದೃಶ್ಯಗಳಲ್ಲಿತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು, ಸಾಮಾಜಿಕ ಆದರ್ಶದ ಸುತ್ತ ಲೌಕಿಕ ಅವಘಡಗಳನ್ನು ಸಮರ್ಥವಾಗಿ ಅಭಿವ್ಯಕ್ತಿಸಿದೆ. ಮಾಗಿದ ವರನಂದಮ್ಮನವರ ಮಾತುಗಳು ಸದಾ ಎಚ್ಚರ ಹಾಗೂ ಮಾರ್ಗದರ್ಶಿ ಎನಿಸುತ್ತವೆ. ಹಳೆ ಮೈಸೂರು ಭಾಗದ ನುಡಿಗಟ್ಟು ಹಾಗೂ ಭಾಷಾ ಶೈಲಿಯನ್ನು ಸಮರ್ಥವಾಗಿ ದುಡಿಸಿಕೊಳ್ಳಲಾಗಿದೆ.

ಬೊಗಸೆ ತುಂಬ ಮಣ್ಣು-ನಾಟಕ

ಲೇ: ಡಾ. ನಟರಾಜ್ ತಲಘಟ್ಟಪುರ

ಪ್ರ: ವರ್ಷ ನಿಧಿ ಪ್ರಕಾಶನ, ಬೆಂಗಳೂರು

ಪುಟ: 52 ಬೆಲೆ: 80 ರೂ.